ವಯನಾಡ್: ಭೀಕರ ಭೂಕುಸಿತಕ್ಕೆ ಒಳಗಾಗಿ ಸ್ಮಶಾನದಂತಾದ ಪ್ರವಾಸಿಗರ ಸ್ವರ್ಗ ವಯನಾಡ್‌ನಲ್ಲಿ ಮೃತದೇಹಗಳ ಪತ್ತೆ ಕಾರ್ಯ ಮುಂದುವರಿದಿದೆ.
ಚಾಲಿಯಾರ್ ನದಿ ಜಲಾನಯನ ಪ್ರದೇಶದಲ್ಲಿ ಶೋಧ ಕಾರ್ಯ ಹೆಚ್ಚು ಕೇಂದ್ರೀಕೃತವಾಗಿರಲಿದೆ. ವಿಶೇಷ ತಂಡ ಹೆಲಿಕಾಪ್ಟರ್ ಮೂಲಕ ನೀರಿನಲ್ಲಿ ಮೃತದೇಹಗಳು ಮತ್ತು ದೇಹದ ಭಾಗಗಳಿಗೆ ಡ್ರೋನ್‌ಗಳ ಸ್ಕ್ಯಾನರ್ ಮೂಲಕ ಶೋಧ ಕಾರ್ಯ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಮೇಘಶ್ರೀ ಡಿ. ಆರ್. ಸುದ್ದಿಗಾರರಿಗೆ ತಿಳಿಸಿದರು.
‘ನದಿಯ ಬಳಿಯ ಶಾಲೆ, ಗ್ರಾಮ ಮತ್ತು ತಗ್ಗುಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯಲಿದೆ. ಶೋಧ ಕಾರ್ಯಕ್ಕೆ ಸ್ವಯಂಸೇವಕರಾಗಿ ಬಂದಿದ್ದ ಕೆಲ ನಾಗರಿಕರೇ ಅಪಾಯದಲ್ಲಿ ಸಿಲುಕಿ ಅವರನ್ನು ರಕ್ಷಿಸಬೇಕಾದ ಸ್ಥಿತಿ ಬಂದಿತ್ತು. ಹೀಗಾಗಿ ಪೊಲೀಸರು ಮತ್ತು ಸೇನಾ ಪಡೆಗಳನ್ನು ಎರಡು ತಂಡಗಳಾಗಿ ಮಾಡಲಾಗಿದೆ. ಅವರನ್ನು ಹೆಲಿಕಾಪ್ಟರ್ ಮೂಲಕ ಕೆಳಕ್ಕೆ ಇಳಿಸಲಾಗುವುದು. ಒಂದು ವೇಳೆ ಅವರಿಗೆ ಮೃತದೇಹ ಕಂಡುಬಂದರೆ, ಅಲ್ಲಿಂದಲೇ ಏರ್‌ಲಿಫ್ಟ್ ಮಾಡಲಾಗುವುದು. ಶೋಧ ಕಾರ್ಯಾಚರಣೆ ಕೊನೆಯ ಹಂತ ತಲುಪುತ್ತಿದೆ. ಇನ್ನು ಮಣ್ಣು ಸಿಲುಕಿರುವ 50 ಮೀಟರ್‌ವರೆಗೆ ಶೋಧ ಕಾರ್ಯ ಬಾಕಿಯಿದೆ. ಜನರನ್ನು ಮತ್ತು ಭಾರಿ ಯಂತ್ರಗಳನ್ನು ಅಲ್ಲಿಗೆ ಕಳುಹಿಸಲು ಸಾಧ್ಯವಿಲ್ಲ, ಹೀಗಾಗಿ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಎಡಿಜಿಪಿ ಎಂ.ಆರ್. ಅಜಿತ್‌ಕುಮಾರ್ ಹೇಳಿದ್ದಾರೆ.