ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ ವೈದ್ಯೆ ಅತ್ಯಾಚಾರ, ಕೊಲೆ: ಘೋಷ್ ಪಾಲಿಗ್ರಾಫ್ ಪರೀಕ್ಷೆ ಸಾಧ್ಯತೆ– ಸಿಬಿಐ

Published : 21 ಆಗಸ್ಟ್ 2024, 10:27 IST
Last Updated : 21 ಆಗಸ್ಟ್ 2024, 10:27 IST
ಫಾಲೋ ಮಾಡಿ
Comments

ಕೋಲ್ಕತ್ತ: ಇಡೀ ದೇಶದಲ್ಲೇ ಸಂಚಲನ ಮೂಡಿಸಿದ ಪಶ್ಚಿಮ ಬಂಗಾಳದ ಕೋಲ್ಕತ್ತದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಕಾಲೇಜಿನ ಹಿಂದಿನ ಪ್ರಾಚಾರ್ಯ ಸಂದೀಪ್ ಘೋಷ್ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಸಿಬಿಐ ಒಳಪಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಹತ್ಯೆಗೀಡಾದ ವಿದ್ಯಾರ್ಥಿನಿಯ ಮೃತದೇಹವು ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ಆ. 9ರಂದು ಪತ್ತೆಯಾದ ಎರಡು ದಿನಗಳ ನಂತರ ಹುದ್ದೆಗೆ ಘೋಷ್ ರಾಜೀನಾಮೆ ನೀಡಿದ್ದರು. ಈ ವಿಷಯವಾಗಿ ಘೋಷ್ ಅವರನ್ನು ಸಿಬಿಐ ಅಧಿಕಾರಿಗಳು ಹಲವು ಬಾರಿ ವಿಚಾರಣೆಗೆ ಒಳಪಡಿಸಿದ್ದರು.

‘ಈವರೆಗೂ ಹಲವು ಬಾರಿ ಘೋಷ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೆಲವೊಂದು ಪ್ರಶ್ನೆಗಳಿಗೆ ಅವರು ಗೊಂದಲಕಾರಿ ಹಾಗೂ ಭಿನ್ನ ಹೇಳಿಕೆ ನೀಡಿದ್ದಾರೆ. ಹೀಗಾಗಿ ಖಚಿತತೆಗಾಗಿ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯವಾಗಿದೆ’ ಎಂದು ಸಿಬಿಐನ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.

ಮಂಗಳವಾರವೂ ಸಿಬಿಐ ಅಧಿಕಾರಿಗಳು ಘೋಷ್ ಅವರ ವಿಚಾರಣೆ ನಡೆಸಿದರು. ಸಿಬಿಐ ಹಲವು ಬಗೆಯ ಪ್ರಶ್ನೆಗಳನ್ನು ಘೋಷ್ ಅವರನ್ನು ಕೇಳಿದೆ ಎನ್ನಲಾಗಿದೆ. ಇದರಲ್ಲಿ ವೈದ್ಯೆಯ ಸಾವಿನ ಸುದ್ದಿ ತಿಳಿದ ನಂತರ ಘೋಷ್ ಕೈಗೊಂಡ ಕ್ರಮಗಳೇನು? ತಕ್ಷಣ ಅವರು ಸಂಪರ್ಕಿಸಿದ್ದು ಯಾರನ್ನು? ಘಟನೆ ಬೆಳಕಿಗೆ ಬಂದ ನಂತರವೂ, ಮೃತದೇಹ ನೋಡಲು ವೈದ್ಯೆಯ ಪಾಲಕರನ್ನು ಮೂರು ಗಂಟೆಗಳ ಕಾಲ ಕಾಯಿಸಿದ್ದು ಏಕೆ? ‘ಮೃತದೇಹ ದೊರೆತ ನಂತರವೂ ಸಮ್ಮೇಳನ ಸಭಾಂಗಣದ ಪಕ್ಕದ ಕೋಣೆಯ ನವೀಕರಣಕ್ಕೆ ತುರ್ತಾಗಿ ಅನುಮತಿ ನೀಡಿದ್ದು ಏಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ.

ಈ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಸ್ವಯಂ ಸೇವಕ ಸಂಜಯ್ ರಾಯ್ ಎಂಬಾತನ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಸ್ಥಳೀಯ ನ್ಯಾಯಾಲಯವನ್ನು ಸಿಬಿಐ ಕೋರಿದೆ. 

ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಪೊಲೀಸರಿಂದ ಸಿಬಿಐಗೆ ವಹಿಸಿ ಕಲ್ಕತ್ತ ಹೈಕೋರ್ಟ್‌ ಆದೇಶಿಸಿತ್ತು. ಈಕುರಿತು ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆಗಳು ಮುಂದುವರಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT