ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯರಾಜ್ಯದ ಆದಾಯ ಪ್ರಮಾಣಪತ್ರ ಎಂಬ ಕಾರಣಕ್ಕೆ ಪ್ರವೇಶ ನಿರಾಕಣೆ ಸಲ್ಲ: ಹೈಕೋರ್ಟ್‌

Published 25 ಡಿಸೆಂಬರ್ 2023, 15:57 IST
Last Updated 25 ಡಿಸೆಂಬರ್ 2023, 15:57 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ಪ್ರಮಾಣಪತ್ರವನ್ನು ಬೇರೆ ರಾಜ್ಯದಿಂದ ಪಡೆಯಲಾಗಿದೆ ಎಂಬ ಕಾರಣ ನೀಡಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯುಎಸ್‌) ಮೀಸಲಾತಿ ಅಡಿ ದಾಖಲಾತಿಯನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್‌) ಶಾಲೆಗಳು ನಿರಾಕರಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

ಮಗುವೊಂದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದೆಯೇ ಎಂದು ನಿರ್ಧರಿಸಲು, ಕೇಂದ್ರ ಸರ್ಕಾರವೇ ಮಗುವಿನ ಕುಟುಂಬದ ವಾರ್ಷಿಕ ಆದಾಯದ ಮಿತಿಯನ್ನು ನಿಗದಿಪಡಿಸುತ್ತದೆ ಎಂದೂ ಹೈಕೋರ್ಟ್‌ ಹೇಳಿದೆ. ಕೆವಿಎಸ್‌ ಶಾಲೆಗಳು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿವೆ. 

ಕೆವಿಎಸ್‌ ಶಾಲೆಗಳಲ್ಲಿ ದಾಖಲಾತಿ ಪಡೆಯುವ ನಿಟ್ಟಿನಲ್ಲಿ ಪಡೆಯುವ ಆದಾಯ ಪ್ರಮಾಣಪತ್ರವನ್ನು ಆಯಾ ರಾಜ್ಯದ ತಹಶೀಲ್ದಾರ ಹುದ್ದೆಗಿಂತ ಕೆಳ ಹುದ್ದೆಗಳಲ್ಲಿ ಇರುವವರಿಂದ ಪಡೆದಿರಬಾರದು. ಆಯಾ ರಾಜ್ಯಗಳು ನಿಗದಿಪಡಿಸಿರುವ ದಾಖಲೆ ಪರಿಶೀಲನಾ ಪ್ರಕ್ರಿಯೆಗಳ ಅನ್ವಯವೇ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ನಡೆದಿರಬೇಕು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. 

ಅಧಿಸೂಚನೆ ಅನ್ವಯ, ದೇಶದ ಯಾವುದೇ ರಾಜ್ಯದಲ್ಲಿರುವ ಕೆವಿಎಸ್‌ ಶಾಲೆಯಲ್ಲಿ ಇಡಬ್ಲ್ಯುಎಸ್‌ ಮೀಸಲಾತಿ ಅಡಿ ದಾಖಲಾತಿ ಬಯಸುವ ಅಭ್ಯರ್ಥಿಯು ಅದೇ ರಾಜ್ಯದಿಂದ ಆದಾಯ ಪ್ರಮಾಣಪತ್ರ ಪಡೆದಿರಬೇಕೆಂಬ ನಿಯಮವಿಲ್ಲ ಎಂದು ನ್ಯಾಯಮೂರ್ತಿ ಅನೂಪ್‌ ಜೈರಾಮ್‌ ಭಂಭಾನಿ ಅವರು ಆದೇಶ ಹೊರಡಿಸುವ ವೇಳೆ ಹೇಳಿದ್ದಾರೆ.

ಪ್ರಕರಣವೇನು?: ಉತ್ತರ ಪ್ರದೇಶದ ಆಜಂಗಢದ ನಿವಾಸಿಯೊಬ್ಬರು ತಮ್ಮ ಮಗನಿಗೆ ಇಡಬ್ಲ್ಯುಎಸ್‌ ಮೀಸಲಾತಿ ಅಡಿ ಒಂದನೇ ತರಗತಿಗೆ ದಾಖಲಾತಿ ನೀಡಲು ದೆಹಲಿಯ ನರೆಲಾದ ಕೆವಿಎಸ್‌ ಶಾಲೆಗೆ ಅರ್ಜಿ ಸಲ್ಲಿಸಿದ್ದರು. ವ್ಯಕ್ತಿ ಸಲ್ಲಿಸಿದ್ದ ಆದಾಯ ಪ್ರಮಾಣಪತ್ರವನ್ನು ಆಜಂಗಢದ ತಹಶೀಲ್ದಾರರು ಪ್ರಮಾಣೀಕರಿಸಿದ್ದರು. ದೆಹಲಿಯ ಶಾಲೆಯಲ್ಲಿ ಪ್ರವೇಶ ನೀಡಲು ಉತ್ತರ ಪ್ರದೇಶದ ಪ್ರಮಾಣಪತ್ರವನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದ ಶಾಲೆಯ ಆಡಳಿತ ಮಂಡಳಿಯು, 2022ರ ಜನವರಿಯಲ್ಲಿ ದಾಖಲಾತಿ ನಿರಾಕರಿಸಿತ್ತು.

ಉದ್ಯೋಗದ ನಿಮಿತ್ತ ಉತ್ತರ ಪ್ರದೇಶದಿಂದ ದೆಹಲಿಗೆ ತಮ್ಮ ಕುಟುಂಬವನ್ನು ವರ್ಗಾಯಿಸಿದ್ದೇನೆ. ಹೀಗಾಗಿ ಮಗನಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ದಾಖಲಾತಿ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ವ್ಯಕ್ತಿಯು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಉತ್ತರ ಪ್ರದೇಶದಿಂದ ಪಡೆಯಲಾಗಿರುವ ಆದಾಯ ಪ್ರಮಾಣಪತ್ರವೊಂದೇ ಬಾಲಕನ ಪ್ರವೇಶಾತಿ ನಿರಾಕರಣೆಗೆ ಕಾರಣವಲ್ಲ. ಬಾಲಕನ ಪೋಷಕರು ಸಲ್ಲಿಸಿದ್ದ ಅರ್ಜಿಯಲ್ಲಿ ಹಲವಾರು ಸಮಸ್ಯೆಗಳಿದ್ದವು ಎಂದು ಕೆವಿಎಸ್‌ ಶಾಲೆ ಪರ ವಕೀಲರು ಹೈಕೋರ್ಟ್‌ನಲ್ಲಿ ಹೇಳಿದರು.  

ಅರ್ಜಿದಾರರ ಮಗನಿಗೆ 2021–22ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ ದಾಖಲಾತಿ ನೀಡಿ, ಬಳಿಕ ಅದನ್ನು ನಿರಾಕರಿಸಲಾಗಿದೆ. ವ್ಯಾಜ್ಯದ ಕಾರಣಕ್ಕಾಗಿ ಬಾಲಕನ ಅಮೂಲ್ಯ ಸಮಯ ಹಾಳಾಗಿದೆ. ಹೀಗಾಗಿ ಆತನಿಗೆ 2023–24ನೇ ಸಾಲಿನ ಮೂರನೇ ತರಗತಿಗೆ ದಾಖಲಾತಿ ನೀಡಬೇಕೆಂದು ಹೈಕೋರ್ಟ್‌ ನರೆಲಾದ ಕೆವಿಎಸ್ ಶಾಲೆಗೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT