ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ಭದ್ರತಾ ಲೋಪ |ಲಲಿತ್ ಭಾಗಿಯಾಗಿದ್ದಾನೆ ಎಂದು ನಂಬಲಾಗುತ್ತಿಲ್ಲ: ಆರೋಪಿ ತಂದೆ

Published 16 ಡಿಸೆಂಬರ್ 2023, 4:24 IST
Last Updated 16 ಡಿಸೆಂಬರ್ 2023, 4:24 IST
ಅಕ್ಷರ ಗಾತ್ರ

ಕೋಲ್ಕತ್ತಾ/ದರ್ಭಾಂಗ: ಸಂಸತ್‌ ಭದ್ರತಾ ಲೋಪ ಪ್ರಕರಣದ ಹಿಂದಿನ ಮಾಸ್ಟರ್‌ಮೈಂಡ್ ಎಂದು ಹೇಳಲಾದ ಲಲಿತ್ ಮೋಹನ್ ಝಾ ಅವರ ಹಿರಿಯ ಸಹೋದರ ಶಂಭು ಝಾ ಹಾಗೂ ತಂದೆ ದೇವಾನಂದ್ ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇಡೀ ಕುಟುಂಬ ಇದನ್ನು ನಂಬುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.

ಸಂಸತ್‌ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಗಿತ್ತು. ಬುಧವಾರ (ಡಿ.13) ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್‌ ಕ್ಯಾನ್‌’ ಹಾರಿಸಿ ದಾಂದಲೆ ಎಬ್ಬಿಸಿದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು. ಪ್ರಕರಣ ಸಂಬಂಧ ಗುರುವಾರ ಸಂಜೆ ನವದೆಹಲಿಯಲ್ಲಿ ಲಲಿತ್ ಅವರನ್ನು ಬಂಧಿಸಲಾಗಿದೆ.

‘ಲಲಿತ್‌ ಹೇಗೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ನಮಗೆ ತಿಳಿದಿಲ್ಲ. ಆತ ಬಾಲ್ಯದಿಂದಲೂ ಶಾಂತ ಮತ್ತು ತುಂಬಾ ಅಂತರ್ಮುಖಿಯಾಗಿದ್ದ. ಎನ್‌ಜಿಒಗಳೊಂದಿಗೆ ತೊಡಗಿಸಿಕೊಂಡಿದ್ದಾನೆ ಎಂದು ನಮಗೆ ತಿಳಿದಿತ್ತು. ಅಲ್ಲದೇ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಮಾಧ್ಯಮ‌ಗಳಲ್ಲಿ ಅವನ ಫೋಟೊಗಳನ್ನು ನೋಡಿ ನಾವು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೇವೆ' ಎಂದು ಲಲಿತ್‌ ಸಹೋದರ ಶಂಭು ತಿಳಿಸಿದ್ದಾರೆ.

‘ಬುಧವಾರ ರಾತ್ರಿಯಿಂದ ಪೊಲೀಸರು ಮತ್ತು ಸಂಬಂಧಿಕರು ಲಲಿತ್‌ ಎಲ್ಲಿದ್ದಾನೆ ಎಂದು ವಿಚಾರಿಸಿದ್ದಾರೆ. ಡಿಸೆಂಬರ್ 10 ರಂದು ಬಿಹಾರದ ನಮ್ಮ ಊರಿಗೆ ಹೋದಾಗ ನಾವು ಅವನನ್ನು ಕೊನೆಯದಾಗಿ ನೋಡಿದ್ದು. ಸೀಲ್ದಾಹ್ ರೈಲು ನಿಲ್ದಾಣದಲ್ಲಿ ನಮ್ಮನ್ನು ನೋಡಲು ಬಂದಿದ್ದ. ಮರುದಿನ ಕರೆ ಮಾಡಿ ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗುವುದಾಗಿ ಹೇಳಿದ್ದ' ಎಂದು ಶಂಭು ಹೇಳಿದ್ದಾರೆ.

ಬಿಹಾರದ ದರ್ಭಾಂಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಲಿತ್ ಝಾ ಅವರ ತಂದೆ ದೇವಾನಂದ್, 'ನಮ್ಮ ಮಗ ಇಂತಹ ಘಟನೆಯಲ್ಲಿ ಭಾಗಿಯಾಗುತ್ತಾನೆ ಎಂದು ಊಹಿಸಲು ಸಾಧ್ಯವಿಲ್ಲ. ಇದು ಹೇಗೆ ನಡೆಯಿತು ಎಂದು ನನಗೆ ತಿಳಿದಿಲ್ಲ. ಈ ಹಿಂದೆ ಆತ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ಬಾಲ್ಯದಿಂದಲೂ ಆತ ಉತ್ತಮ ವಿದ್ಯಾರ್ಥಿಯಾಗಿದ್ದ' ಎಂದು ಹೇಳಿದ್ದಾರೆ.

‘ನಾವು ಕಳೆದ 50 ವರ್ಷಗಳಿಂದ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದೇವೆ. ಆದರೆ, ಛತ್ ಪೂಜೆಯ ಸಂದರ್ಭದಲ್ಲಿ ನಾವು ನಮ್ಮ ಪೂರ್ವಜರ ಗ್ರಾಮಕ್ಕೆ (ದರ್ಭಾಂಗದ ರಾಂಪುರ್ ಉದಯ್) ಭೇಟಿ ನೀಡುತ್ತೇವೆ. ಆದರೆ ಈ ವರ್ಷ ಸರಿಯಾದ ಸಮಯಕ್ಕೆ ನಮ್ಮ ಹಳ್ಳಿಗೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ ಡಿಸೆಂಬರ್ 10 ರಂದು ಕೋಲ್ಕತ್ತಾದಿಂದ ದರ್ಭಾಂಗಕ್ಕೆ ರೈಲು ಹತ್ತಿದೆವು, ಆದರೆ ಲಲಿತ್ ನಮ್ಮೊಂದಿಗೆ ಬರಲಿಲ್ಲ' ಎಂದು ದೇವಾನಂದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT