ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಪತ್ರಕರ್ತನಿಗೆ ಆಹ್ವಾನ: ಬಿಜೆಪಿ ಆರೋಪ ನಿರಾಕರಿಸಿದ ಅನ್ಸಾರಿ

ಐಎಸ್‌ಐಗೆ ಭಾರತದ ಬಗ್ಗೆ ಮಾಹಿತಿ ನೀಡಿದ್ದ ಪತ್ರಕರ್ತ
Last Updated 13 ಜುಲೈ 2022, 14:28 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದ ಐಎಸ್ಐ ಪರ ಗೂಢಚಾರಿಕೆ ನಡೆಸಿರುವ ಅಲ್ಲಿನ ಪತ್ರಕರ್ತರನ್ನು ಭಾರತಕ್ಕೆ ಕರೆಸಿಕೊಂಡಿದ್ದಾರೆ ಎನ್ನುವ ಬಿಜೆಪಿ ವಕ್ತಾರರ ಆರೋಪವನ್ನು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ತಳ್ಳಿಹಾಕಿದ್ದು, ನನ್ನ ವಿರುದ್ಧ ಸುಳ್ಳಿನ ಸರಮಾಲೆಯನ್ನು ಹೊರಿಸಲಾಗಿದೆ ಎಂದು ಬುಧವಾರ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅನ್ಸಾರಿ, ‘ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ಇರಾನ್‌ನೊಂದಿಗೆ ಭಾರತದ ರಾಯಭಾರಿಯಾಗಿ ರಾಜಿ ಮಾಡಿಕೊಂಡಿದ್ದಾರೆ’ ಎಂಬ ಭಾರತದ ‘ರಾ’ ಕಾರ್ಯನಿರ್ವಾಹಕರ ಹೇಳಿಕೆಗಳನ್ನು ಉಲ್ಲೇಖಿಸಿ ತಮ್ಮ ವಿರುದ್ಧದ ಆರೋಪಗಳನ್ನು ಅವರು ತಿರಸ್ಕರಿಸಿದ್ದಾರೆ.

‘ಯುಪಿಎ ಆಡಳಿತದ ಅವಧಿಯಲ್ಲಿ ಭಾರತಕ್ಕೆ ಐದು ಬಾರಿ ಭೇಟಿ ನೀಡಿದ್ದೆ. ಇಲ್ಲಿ ಸಂಗ್ರಹಿಸಿದ್ದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡಿದ್ದೆ ಎಂದುಐಎಸ್ಐ ಪರ ಗೂಢಚಾರರಾಗಿದ್ದ ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರ ಹೇಳಿಕೆಯ ಬಗ್ಗೆ ಅನ್ಸಾರಿ ಮತ್ತು ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು’ ಎಂದು ಬಿಜೆಪಿಯ ವಕ್ತಾರ ಗೌರವ್ ಭಾಟಿಯಾ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದರು.

‘ಅನ್ಸಾರಿ ಅವರ ಆಹ್ವಾನದ ಮೇರೆಗೆ ಪತ್ರಕರ್ತ ಮಿರ್ಜಾ ಭಾರತಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ ಅನ್ಸಾರಿ ಅವರನ್ನೂ ಭೇಟಿ ಮಾಡಿದ್ದರು’ ಎಂಬ ಗೌರವ್ ಭಾಟಿಯಾ ಅವರ ಆರೋಪವನ್ನು ಅನ್ಸಾರಿ ಅಲ್ಲಗಳೆದಿದ್ದಾರೆ.

‘ಭಾರತದ ಉಪರಾಷ್ಟ್ರಪತಿಯಿಂದ ವಿದೇಶಿ ಗಣ್ಯರಿಗೆ ಸಾಮನ್ಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸರ್ಕಾರದ ಸಲಹೆಯ ಮೇರೆಗೆ ಆಹ್ವಾನಗಳು ಹೋಗುತ್ತಿರುತ್ತವೆ ಎಂಬುದು ಗೊತ್ತಿರುವ ಸಂಗತಿಯಾಗಿದೆ. 2010ರ ಡಿಸೆಂಬರ್ 11ರಂದು ನಾನು ಭಯೋತ್ಪಾದನೆಗೆ ಸಂಬಂಧಿಸಿದ ವಿಚಾರ ಸಂಕಿರಣವನ್ನು ಉದ್ಘಾಟಿಸಿದ್ದೆ. ಸಾಮಾನ್ಯವಾಗಿ ಅಲ್ಲಿಗೆ ಆಹ್ವಾನಿತರನ್ನು ಆಯೋಜಕರೇ ಕರೆಸಿರುತ್ತಾರೆ. ನಾನು ಯಾವತ್ತೂ ಮಿರ್ಜಾ ಅವರನ್ನು ಆಹ್ವಾನಿಸಿಲ್ಲ’ ಎಂದೂ ಅನ್ಸಾರಿ ಅವರು ವಿವರಿಸಿದ್ದಾರೆ.

‘ಇರಾನ್‌ನ ರಾಯಭಾರಿಯಾಗಿ ನಾನು ಮಾಡಿದ ಎಲ್ಲಾ ಕೆಲಸವೂ ಎಲ್ಲಾ ಸಮಯದಲ್ಲೂ ಅಂದಿನ ಸರ್ಕಾರದ ಗಮನದಲ್ಲಿದೆ. ಅಂತಹ ವಿಷಯಗಳಲ್ಲಿ ನಾನುರಾಷ್ಟ್ರೀಯ ಭದ್ರತೆಗೆ ಬದ್ಧನಾಗಿದ್ದೇನೆ ಮತ್ತು ಅವುಗಳ ಬಗ್ಗೆ ಪ್ರತಿಕ್ರಿಯಿಸುವುದನ್ನು ತಡೆದಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

‘ಭಾರತ ಸರ್ಕಾರವು ಎಲ್ಲಾ ಮಾಹಿತಿಗಳನ್ನು ಅರಿತಿರುತ್ತದೆ ಮತ್ತು ಅದಕ್ಕೆ ಮಾತ್ರವೇ ಸತ್ಯವನ್ನು ಹೇಳುವ ಅಧಿಕಾರವಿರುತ್ತದೆ. ಟೆಹರಾನ್‌ ನಂತರ ನಾನು ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕವಾದೆ. ನನ್ನ ಕೆಲಸವು ದೇಶ–ವಿದೇಶಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ’ ಎಂದು ಅನ್ಸಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT