ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗುಸರಾಯ್‌ ಕ್ಷೇತ್ರ: ಊರ ಹುಡುಗ–ಹೊರಗಿನ ನಾಯಕನ ಹಣಾಹಣಿ

ಕನ್ಹಯ್ಯಾ–ಗಿರಿರಾಜ್‌ ಸ್ಪರ್ಧೆಗೆ ಆರ್‌ಜೆಡಿ
Last Updated 20 ಏಪ್ರಿಲ್ 2019, 20:30 IST
ಅಕ್ಷರ ಗಾತ್ರ

ಬೇಗುಸರಾಯ್‌: ಬೇಗುಸರಾಯ್‌ ಸಮೀಪದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿರುವ ಲಾರಿ, ಬಸ್‌ ಮತ್ತಿತರ ವಾಹನಗಳನ್ನು ದಾಟಿ ಬರೌನಿ ತಲುಪಿದ ಹೆಚ್ಚಿನವರು ಈಗ ಕೇಳುವ ಒಂದೇ ಪ್ರಶ್ನೆ ‘ಬಿಹಾತ್‌ ಗ್ರಾಮ ಎಲ್ಲಿ’ ಎಂಬುದಾಗಿದೆ. ತಕ್ಷಣವೇ ಅದಕ್ಕೆ ಪ್ರಶ್ನೆಯ ಮಾದರಿಯ ಸಿದ್ಧ ಉತ್ತರವೂ ಸಿಗುತ್ತದೆ: ‘ನಿಮಗೆ ಕನ್ಹಯ್ಯಾ ಕುಮಾರ್‌ ಅವರ ಗ್ರಾಮಕ್ಕೆ ಹೋಗಬೇಕೇ?’

ಹೌದೆಂದು ತಲೆ ಕುಣಿಸಿದಾಗ ದ್ವಿಚಕ್ರ ವಾಹನದಲ್ಲಿದ್ದ ಯುವಕ ಕೆಲವು ಕಿಲೋಮೀಟರ್ ದೂರದವರೆಗೆ ಜತೆಗೆ ಸಾಗಿ ಬಿಹಾತ್‌ನಲ್ಲಿರುವ ಕನ್ಹಯ್ಯಾ ಕುಮಾರ್‌ ಅವರ ಮನೆಯವರೆಗೆ ಬಿಟ್ಟು ಹೋದ.

ದೇಶದ್ರೋಹದ ಪ್ರಕರಣ ಎದುರಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕನ್ಹಯ್ಯಾ ಕುಮಾರ್‌, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕರಾಗಿದ್ದವರು. ಈಗ ಅವರು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿರುವ ವ್ಯಕ್ತಿ. ದೇಶದ ವಿವಿಧೆಡೆಯ ಪತ್ರಕರ್ತರು, ವಿದೇಶಿ ವರದಿಗಾರರು ಕನ್ಹಯ್ಯಾ ಅವರ ಚುನಾವಣಾ ಪ್ರಚಾರವನ್ನು ವರದಿ ಮಾಡಲು ಬೇಗುಸರಾಯ್‌ಯತ್ತ ಮುಖಮಾಡಿದ್ದಾರೆ.

ಕನ್ಹಯ್ಯಾ ಅವರ ತಾಯಿ, ಅಂಗನವಾಡಿ ಕಾರ್ಯಕರ್ತೆ ಮೀನಾ ಕುಮಾರಿ ಅವರು ವಾಸಿಸುವ ಹುಲ್ಲು ಚಾವಣಿಯ ಮನೆಯನ್ನು ಪ್ರವೇಶಿಸುತ್ತಲೇ ಕಾಣಿಸುವುದು ಮಣ್ಣಿನ ಒಲೆ. ಕೆಲ ದಿನಗಳ ಹಿಂದಿನವರೆಗೆ ಮೀನಾ ಕುಮಾರಿ ಅಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಕೇಂದ್ರ ಸರ್ಕಾರವು ಅಡುಗೆ ಅನಿಲ ಸಂಪರ್ಕವನ್ನು ಉಚಿತವಾಗಿ ನೀಡುವ ಉಜ್ಜ್ವಲ ಯೋಜನೆ ಇಲ್ಲಿಗೆ ಇನ್ನೂ ತಲುಪಿಲ್ಲ. ಈಗ ಬೇಗುಸರಾಯ್‌ ಲೋಕಸಭಾ ಕ್ಷೇತ್ರದ ಸಿಪಿಐ ಅಭ್ಯರ್ಥಿಯಾಗಿರುವ ಕನ್ಹಯ್ಯಾ ಅವರ ಪರ ಪ್ರಚಾರ ಮಾಡಲು ನೂರಾರು ಸ್ವಯಂಸೇವಕರು ಇಲ್ಲಿಗೆ ಬಂದಿದ್ದಾರೆ. ಜೆಎನ್‌ಯುನ ಹಲವು ವಿದ್ಯಾರ್ಥಿಗಳೂ ಅವರಲ್ಲಿ ಸೇರಿದ್ದಾರೆ. ಹಾಗಾಗಿ ಎಲ್ಲರಿಗೂ ಅಡುಗೆ ತಯಾರಿಸಲು ಸಮುದಾಯ ಅಡುಗೆ ಮನೆಯನ್ನೇ ತಾತ್ಕಾಲಿಕವಾಗಿ ರೂಪಿಸಲಾಗಿದೆ.

ಪ್ರಚಾರ ವಾಹನಗಳ ಸಾಲು ಗ್ರಾಮಗಳ ದೂಳುರಸ್ತೆಗಳತ್ತ ಸಾಗುತ್ತಿದ್ದಂತೆಯೇ ಕನ್ಹಯ್ಯಾ ಅವರೂ ಸಿದ್ಧರಾಗಿ ಮತಯಾಚನೆಗೆ ಹೊರಡುತ್ತಾರೆ. ಬಿಜೆಪಿ ಅಭ್ಯರ್ಥಿ ಗಿರಿರಾಜ್‌ ಸಿಂಗ್‌ ವಿರುದ್ಧ ಯಾವ ಕಾರ್ಯತಂತ್ರ ರೂಪಿಸಬೇಕು ಎಂದು ಸ್ವಯಂಸೇವಕರು ಗಹನ ಚರ್ಚೆ ನಡೆಸುತ್ತಾರೆ. ಪ್ರಭಾವಿ ಭೂಮಿಹಾರ್‌ ಸಮುದಾಯದ ಹಿರಿಯ ನಾಯಕ ಗಿರಿರಾಜ್‌ ಅವರಿಗೆ ಬೇಗುಸರಾಯ್‌ ಮತ್ತು ಬರೌನಿ (ಬೇಗುಸರಾಯ್‌ ಕೈಗಾರಿಕಾ ಪ್ರದೇಶದ ಎರಡು ಪ್ರಮುಖ ನಗರಗಳು) ನಗರ ಪ್ರದೇಶದಲ್ಲಿ ಭಾರಿ ಜನಬೆಂಬಲ ಇದೆ.

ಕನ್ಹಯ್ಯಾ ಅವರೂ ಭೂಮಿಹಾರ್‌ ಸಮುದಾಯಕ್ಕೆ ಸೇರಿದವರು. ಕನ್ಹಯ್ಯಾ ಅವರು ಬಹಳ ಎಚ್ಚರಿಕೆಯಿಂದ ಮಾತನಾಡುತ್ತಾರೆ. ಗಿರಿರಾಜ್‌ ಅವರ ಮಾತುಗಳು ಹಲವು ಬಾರಿ ವಿವಾದಕ್ಕೆ ಕಾರಣವಾಗಿವೆ.

‘ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕನ್ಹಯ್ಯಾಪರ ಒಲವು ಇದೆ. ಒಬಿಸಿ ಸಮುದಾಯಗಳು, ಆರ್ಥಿಕವಾಗಿ ಹಿಂದುಳಿದ ಜಾತಿಗಳವರು, ದಲಿತರು, ಮಹಾದಲಿತರು ಮತ್ತು ಮುಸ್ಲಿಮರ ಪೂರ್ಣ ಬೆಂಬಲ ಅವರಿಗೆ ಇದೆ. ಭೂಮಿಹಾರ್‌ ಸಮುದಾಯದ ಜನರೂ ಅವರನ್ನು ಬೆಂಬಲಿಸುತ್ತಾರೆ’ ಎಂದು ಸಿಪಿಐ ಬೆಂಬಲಿಗ ರಾಮ್‌ಪ್ರೀತ್‌ ಪಾಸ್ವಾನ್‌ ಹೇಳುತ್ತಾರೆ.

ಕನ್ಹಯ್ಯಾ ಮನೆ
ಕನ್ಹಯ್ಯಾ ಮನೆ

ಗಿರಿರಾಜ್‌ ಮತ್ತು ಕನ್ಹಯ್ಯಾ ನಡುವಣ ಸ್ಪರ್ಧೆಯನ್ನು ತ್ರಿಕೋನ ಹಣಾಹಣಿಯಾಗಿಸಿದವರು ಆರ್‌ಜೆಡಿಯ ತನ್ವೀರ್ ಹಸನ್‌. 2014ರ ಚುನಾವಣೆಯಲ್ಲಿ ತನ್ವೀರ್‌ ಅಲ್ಪ ಅಂತರದಲ್ಲಿ ಇಲ್ಲಿ ಸೋತಿದ್ದರು. ‘ಹಿಂದೂಗಳು ವಿಭಜನೆಗೊಂಡಿದ್ದಾರೆ.ಹಾಗಾಗಿ ಈ ಬಾರಿ ತನ್ವೀರ್‌ನನ್ನು ಸೋಲಿಸಲಾಗದು ಎಂದು ತನ್ವೀರ್‌ ಇತ್ತೀಚೆಗೆ ಹೇಳಿದ್ದಾರೆ. ಆ ಮೂಲಕ ತಮ್ಮ ಕಾಲಮೇಲೆಯೇ ಕಲ್ಲು ಎತ್ತಿ ಹಾಕಿಕೊಂಡಿದ್ದಾರೆ’ ಎಂದವರು ಸ್ಥಳೀಯ ವರ್ತಕ ಸರೋಜ್‌ ರಾಯ್‌.

ಕನ್ಹಯ್ಯಾ ಊರಿನ ಹುಡುಗ. ಬಿಜೆಪಿ ನಾಯಕ ಗಿರಿರಾಜ್‌ ಬಹರಯ್ಯಾದವರು. ಇಬ್ಬರು ಭೂಮಿಹಾರರ ನಡುವಣ ಹಣಾಹಣಿಯಲ್ಲಿ ಮುಸ್ಲಿಮರ ಪಾತ್ರವೇ ಮಹತ್ವದ್ದು ಎಂದು ರಾಯ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT