ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Election Results: ಗಮನ ಸೆಳೆದ ಕ್ಷೇತ್ರಗಳು

Published 4 ಜೂನ್ 2024, 23:58 IST
Last Updated 4 ಜೂನ್ 2024, 23:58 IST
ಅಕ್ಷರ ಗಾತ್ರ

ಅಮೇಠಿ

ಉತ್ತರ ಪ್ರದೇಶದ ಅಮೇಠಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸೋಲಿನಿಂದ ಗಮನಸೆಳೆದಿದ್ದ ಕ್ಷೇತ್ರ. ಕಳೆದಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಈ ಬಾರಿ ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಕಿಶೋರಿ ಲಾಲ್‌ ಶರ್ಮಾ ಅವರು ಸೋಲಿಸಿದ್ದಾರೆ. ------ ಮತಗಳ ಅಂತರದಿಂದ ಸ್ಮೃತಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷ ಕೊನೆ ಗಳಿಗೆಯಲ್ಲಿ ಕಿಶೋರಿ ಲಾಲ್‌ ಅವರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಗೆಲುವಿನ ಮೂಲಕ ಅವರು ಅಚ್ಚರಿಗೆ ಕಾರಣರಾಗಿದ್ದಾರೆ.

ಬಾರಾಮತಿ

ಶರದ್‌ ಪವಾರ್ ಕುಟುಂಬ ಸದಸ್ಯರ ನಡುವಣ ಹಣಾಹಣಿಗೆ ವೇದಿಕೆಯಾಗುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದುದು ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರ. ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಪುತ್ರಿ, ಹಾಲಿ ಸಂಸದೆ ಸುಪ್ರಿಯಾ ಸುಳೆ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಸಂಬಂಧಿ ಹಾಗೂ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಪತ್ನಿ ಸುನೇತ್ರಾ ಪವಾರ್‌ ಅವರನ್ನು –––––– ಮತಳಿಂದ ಪರಾಭವಗೊಳಿಸಿದ್ದಾರೆ. ಸುನೇತ್ರಾ ಅವರು ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರು.

ತಿರುವನಂತಪುರ

ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಯೂ ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್‌ ಅವರು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜೀವ್ ಚಂದ್ರಶೇಖರ್ ಅವರನ್ನು ............ಮತಗಳ ಅಂತರದಿಂದ ತರೂರ್‌ ಮಣಿಸಿದ್ದಾರೆ. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ರಾಜೀವ್‌ ಅವರು ಕೊನೆಯ ಹಂತದ ಮತ ಎಣಿಕೆ ನಡೆಯುವವರೆಗೂ ತೀವ್ರ ಪೈಪೋಟಿ ನೀಡಿದ್ದರು. ಕೇಂದ್ರ ಸಚಿವರ ಸ್ಪರ್ಧೆಯಿಂದಾಗಿ ಈ ಕ್ಷೇತ್ರ ದೇಶದ ಗಮನಸೆಳೆದಿತ್ತು.  

ಮಂಡಿ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೊಂದಾದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಟಿ ಕಂಗನಾ ರನೌತ್‌ ಅವರು ಗೆಲುವಿನ ನಗೆ ಬೀರಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಕ್ಷೇತ್ರದಿಂದ ರಾಜ್ಯ  ಸಚಿವ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್‌ ಅವರನ್ನು ––––– ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಲಪಂಥೀಯ ಸಿದ್ಧಾಂತದ ಕಂಗನಾ ಅವರನ್ನು ಈ ಬಾರಿ ಚುನಾವಣಾ ರಾಜಕೀಯಕ್ಕಿಳಿಸುವ ಮೂಲಕ ಬಿಜೆಪಿಯು ಇಲ್ಲಿ ಅದೃಷ್ಟ ಪರೀಕ್ಷೆಗಿಳಿದಿತ್ತು. ರಾಜ್ಯದ ಆಡಳಿತಾರೂಢ ಪಕ್ಷದ ಅಭ್ಯರ್ಥಿಯೇ ಸೋಲುವ ಮೂಲಕ ಇಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

ಹೈದರಾಬಾದ್‌

ಆಲ್‌ ಇಂಡಿಯಾ ಮಜ್ಲಿಸ್‌ ಎ ಇತ್ತೆಹಾದ್‌ ಉಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ಭದ್ರಕೋಟೆಯಾದ ತೆಲಂಗಾಣದ ಹೈದರಾಬಾದ್‌ ಲೋಕಸಭಾ ಕ್ಷೇತ್ರದಿಂದ ಅಸಾದುದ್ದೀನ್‌ ಒವೈಸಿ ವಿರುದ್ಧ ಕಣಕ್ಕಿಳಿದಿದ್ದ ಹಿಂದುತ್ವದ ಪ್ರಬಲ ಪ್ರತಿಪಾದಕಿ ಮಾಧವಿ ಲತಾ ಅವರು ಪರಾಭವಗೊಂಡಿದ್ದಾರೆ. ಒವೈಸಿ ಅವರು .......... ಮತಗಳ ಅಂತರದಿಂದ ಮಾಧವಿ ಲತಾ ಅವರನ್ನು ಮಣಿಸಿದ್ದಾರೆ. ರಾಜಕೀಯದಲ್ಲಿ ಅನನುಭವಿಯಾದರೂ ಧಾರ್ಮಿಕ ಭಾಷಣಗಳ ಮೂಲಕ ಮಾಧವಿ ಲತಾ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT