ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹುವಾ ಮೊಯಿತ್ರಾ ಉಚ್ಚಾಟನೆಗೆ ಲೋಕಸಭೆಯ ನೀತಿ ನಿಯಮ ಸಮಿತಿ ಶಿಫಾರಸು ಸಾಧ್ಯತೆ

Published 9 ನವೆಂಬರ್ 2023, 5:11 IST
Last Updated 9 ನವೆಂಬರ್ 2023, 5:11 IST
ಅಕ್ಷರ ಗಾತ್ರ

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪಗಳನ್ನು ಪರಿಶೀಲಿಸುತ್ತಿರುವ ಲೋಕಸಭೆಯ ನೀತಿ ನಿಯಮ ಸಮಿತಿಯು ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವ 'ಅಸಂಬದ್ಧ ನಡವಳಿಕೆ'ಯ ಆಧಾರದ ಮೇಲೆ ಸಂಸತ್ತಿನ ಕೆಳಮನೆಯಿಂದ ಅವರನ್ನು ಉಚ್ಚಾಟಿಸಲು ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. .

ಬಿಜೆಪಿ ಸಂಸದ ವಿನೋದ್ ಕುಮಾರ್ ಸೋನಕರ್ ನೇತೃತ್ವದ ಸಮಿತಿಯು ತನ್ನ ಕರಡು ವರದಿಯನ್ನು ಅಂಗೀಕರಿಸಲು ಇಂದು ಸಭೆ ನಡೆಸುತ್ತಿದ್ದು, ಸಮಿತಿಯ ವಿರೋಧ ಪಕ್ಷದ ಸದಸ್ಯರು ತೀವ್ರ ವಾಗ್ವಾದಕ್ಕಿಳಿಯುವ ಸಾಧ್ಯತೆ ಇದೆ.

ತನ್ನ ಸಂಸದೀಯ ಲಾಗ್ ಇನ್ ಮಾಹಿತಿಯನ್ನು ಉದ್ಯಮಿಯೊಂದಿಗೆ ಹಂಚಿಕೊಂಡ ಆರೋಪ ಹೊತ್ತಿರುವ ಮೊಯಿತ್ರಾ ಅವರ ನಡವಳಿಕೆಯನ್ನು ಅತ್ಯಂತ ಆಕ್ಷೇಪಾರ್ಹ, ಅಸಂಬದ್ಧ, ಹೇಯ ಮತ್ತು ಕ್ರಿಮಿನಲ್ ಕೃತ್ಯ' ಎಂದು ಸಮಿತಿ ಖಂಡಿಸಿದೆ. ಸರ್ಕಾರ ಕಾಲಮಿತಿಯ ಕಾನೂನು ಮತ್ತು ಸಾಂಸ್ಥಿಕ ತನಿಖೆ ನಡೆಸಬೇಕೆಂದು ಕರೆ ನೀಡಿದೆ.

ಮೊಯಿತ್ರಾ ಮತ್ತು ಉದ್ಯಮಿ ದರ್ಶನ್ ಹಿರಾನಂದನಿ ನಡುವಿನ ಹಣದ ವಹಿವಾಟಿನ ಕುರಿತಂತೆ ಸರ್ಕಾರ ತನಿಖೆ ಮಾಡಬೇಕು ಎಂದೂ ಅದು ಹೇಳಿದೆ.

ಮೊಯಿತ್ರಾ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದರು. ಲಂಚ ಮತ್ತು ಉಡುಗೊರೆಗಳಿಗೆ ಬದಲಾಗಿ ಉದ್ಯಮಿ ಹೀರಾನಂದನಿ ಅವರ ಇಚ್ಛೆಯ ಮೇರೆಗೆ ಅದಾನಿ ಗ್ರೂಪ್ ಅನ್ನು ಗುರಿಯಾಗಿಸಿಕೊಂಡು ಲೋಕಸಭೆಯಲ್ಲಿ ಮೊಯಿತ್ರಾ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿದ್ದರು.

15 ಸದಸ್ಯರ ಲೋಕಸಭೆಯ ನೀತಿ ನಿಯಮ ಸಮಿತಿಯಲ್ಲಿ ಬಿಜೆಪಿಯಿಂದ ಏಳು, ಕಾಂಗ್ರೆಸ್‌ನಿಂದ ಮೂವರು ಮತ್ತು ಬಿಎಸ್‌ಪಿ, ಶಿವಸೇನೆ, ವೈಎಸ್‌ಆರ್‌ಸಿಪಿ, ಸಿಪಿಐ(ಎಂ) ಮತ್ತು ಜೆಡಿಯು ತಲಾ ಒಬ್ಬರು ಸದಸ್ಯರಿದ್ದಾರೆ.

ನವೆಂಬರ್ 2ರ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಐದು ವಿರೋಧ ಪಕ್ಷಗಳ ಸದಸ್ಯರು, ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆಗೆ ಅವರ ಪ್ರಯಾಣ, ಹೋಟೆಲ್ ವಾಸ್ತವ್ಯ ಮತ್ತು ದೂರವಾಣಿ ಕರೆಗಳ ಬಗ್ಗೆ ವೈಯಕ್ತಿಕ ಮತ್ತು ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿ ಸಭೆಯಿಂಂದ ಹೊರನಡೆದಿದ್ದರು.

ಈ ನಡುವೆ, ಮೊಯಿತ್ರಾ ಅವರ ಭ್ರಷ್ಟಾಚಾರದ ದೂರಿನ ಮೇಲೆ ಸಿಬಿಐ ತನಿಖೆಗೆ ಲೋಕಪಾಲ್ ಆದೇಶಿಸಿದ್ದಾರೆ ಎಂದು ದುಬೆ ಬುಧವಾರ ಹೇಳಿದ್ದರು.

‘₹13,000 ಕೋಟಿ ಅದಾನಿ ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ಮೊದಲು ಎಫ್‌ಐಆರ್ ದಾಖಲಿಸುವ ಅಗತ್ಯವಿದೆ’ ಎಂದು ಮೋಯಿತ್ರಾ ದುಬೆಗೆ ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT