ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ: ವನ್ಯಜೀವಿ ಅನುಮೋದನೆ ಪಡೆಯಲು ಮುಂದಾದ ರಾಜ್ಯ

Published 9 ಜೂನ್ 2023, 13:32 IST
Last Updated 9 ಜೂನ್ 2023, 13:32 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ಪಡೆಯಲು ಅರಣ್ಯ ಇಲಾಖೆಯ ಮೂಲಕ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ, ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಗೋವಾ ಸರ್ಕಾರಕ್ಕೆ ಸಂದೇಶ ರವಾನಿಸಿದೆ.

ಜತೆಗೆ, ಯೋಜನೆಗೆ ಅನುಷ್ಠಾನಕ್ಕೆ ಅತ್ಯಗತ್ಯವಾಗಿ ಬೇಕಿರುವ 26.92 ಹೆಕ್ಟೇರ್‌ ಅರಣ್ಯ ಬಳಕೆಗೆ ಒಪ್ಪಿಗೆ ಪಡೆಯಲು ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಸಚಿವಾಲಯ ಕೇಳಿರುವ ಸ್ಪಷ್ಟನೆಗಳಿಗೆ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದೆ. 

ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಈ ಯೋಜನೆಗೆ ಮಹದಾಯಿ ನದಿ ನೀರು ವಿವಾದ ನ್ಯಾಯಾಧೀಕರಣವು 2018ರ ಆಗಸ್ಟ್‌ 14ರಂದು 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿತ್ತು. ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್‌ 29ರಂದು ಅನುಮೋದನೆ ನೀಡಿತ್ತು. ಇದರಲ್ಲಿ ಕಳಸಾ ನಾಲಾ ತಿರುವು ಯೋಜನೆಗೆ 1.78 ಟಿಎಂಸಿ ಅಡಿ ಮೀಸಲಿಡಲಾಗಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಸಚಿವಾಲಯಕ್ಕೆ ಈ ವರ್ಷದ ಜನವರಿ ಮೊದಲ ವಾರದಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಇದರ ನಡುವೆ, ವನ್ಯಜೀವಿ ಧಾಮದಿಂದ ಕರ್ನಾಟಕವು ನೀರು ಕೊಂಡೊಯ್ಯುತ್ತಿದೆ ಎಂದು ಆರೋಪಿಸಿ ಗೋವಾ ಸರ್ಕಾರವು ವನ್ಯಜೀವಿ ಕಾಯ್ದೆಯಡಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೋಟಿಸ್‌ ನೀಡಿತ್ತು. 

ಕಳಸಾ ನಾಲಾ ತಿರುವು ಯೋಜನೆಗೆ 26.92 ಹೆಕ್ಟೇರ್‌ ಮೀಸಲು ಅರಣ್ಯ ಬಳಕೆಗೆ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯು ಜನವರಿ 20ರಂದು ನಿರಾಕರಿಸಿತ್ತು. ಹುಲಿ ಕಾರಿಡಾರ್‌ ಹಾಗೂ ಪರಿಹಾರಾತ್ಮಕ ಹಸಿರು ಬೆಳೆಸುವ ಯೋಜನೆ ಮತ್ತಿತರ ವಿಷಯಗಳ ಕುರಿತು ವಿಸ್ತೃತ ಚರ್ಚೆ ಹಾಗೂ ವಿವರಣೆಯ ಅಗತ್ಯ ಇದೆ ಎಂದು ಸ್ಪಷ್ಟಪಡಿಸಿತ್ತು. ‍

ಯೋಜನೆಯು ದಟ್ಟ ಅರಣ್ಯದ ಮೂಲಕ ಹಾದು ಹೋಗಲಿದೆ. ಯೋಜನೆ ಅನುಷ್ಠಾನದ ವೇಳೆ ಪರಿಸರ ನಾಶ ಆಗಲಿದೆ. ಆದರೆ, ಪರಿಹಾರಾತ್ಮಕವಾಗಿ ಹಸಿರು ಬೆಳೆಸಲು ಅಥಣಿ ತಾಲ್ಲೂಕಿನಲ್ಲಿ ಜಾಗ ಗುರುತಿಸಲಾಗಿದೆ. ಇದು ಒಣ ಪ್ರದೇಶ. ಇಂತಹ ಪ್ರದೇಶವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಮಿತಿಯ ಸದಸ್ಯರು ಪ್ರತಿಪಾದಿಸಿದ್ದರು. ‘ಈ ಯೋಜನಾ ಪ್ರದೇಶವು ವನ್ಯಜೀವಿ ಧಾಮ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ ಸಮೀಪದಲ್ಲಿದೆ. ಹೀಗಾಗಿ, ಮುಖ್ಯ ವನ್ಯಜೀವಿ ವಾರ್ಡನ್‌ (ಪಿಸಿಸಿಎಫ್‌) ಅವರು ಸೂಕ್ತ ಶಿಫಾರಸು ಹಾಗೂ ಪರಿಹಾರ ಕ್ರಮಗಳ ವಿವರಗಳನ್ನು ಒದಗಿಸಬೇಕು’ ಎಂದು ಸಮಿತಿ ಸೂಚಿಸಿತ್ತು. 

ಸಮಗ್ರವಾಗಿ ಪರಿಶೀಲನೆ ನಡೆಸದೆ ತರಾತುರಿಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದ‌ರಿಂದ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಬಳಿಕ, ಪರಿಸರ ಸಚಿವಾಲಯ ಕೇಳಿದ್ದ ಸ್ಪಷ್ಟನೆಗಳಿಗೆ ಉತ್ತರ ನೀಡುವ ಗೋಜಿಗೆ ಅಧಿಕಾರಿಗಳು ಹೋಗಿರಲಿಲ್ಲ. ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಕ್ಕೆ ಮುನ್ನ ಮಹದಾಯಿ ಯೋಜನೆಗೆ ಚಾಲನೆ ನೀಡಬೇಕು ಎಂಬ ಬಿಜೆಪಿ ಸರ್ಕಾರದ ಕನಸು ಈ ಮೂಲಕ ಭಗ್ನಗೊಂಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ, ಹೊಸ ಪ್ರಸ್ತಾವನೆ (ಮೇ 31ರಂದು) ಸಲ್ಲಿಸಲಾಗಿದೆ. 

ಬಂಡೂರಿ ನಾಲಾ ತಿರುವು ಯೋಜನೆಗೆ 22.80 ಹೆಕ್ಟೇರ್‌ ಅರಣ್ಯ ಬಳಸಿಕೊಳ್ಳಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರವು ಮಾರ್ಚ್‌ ತಿಂಗಳಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಸಹ ಸಚಿವಾಲಯ ಈವರೆಗೆ ಒಪ್ಪಿಗೆ ನೀಡಿಲ್ಲ. 

‘ನ್ಯಾಯಾಧೀಕರಣದ ತೀರ್ಪಿನ ಪ್ರಕಾರವೇ ರಾಜ್ಯ ಸರ್ಕಾರವು ಯೋಜನೆ ಅನುಷ್ಠಾನ ಮಾಡಲು ಹೊರಟಿದೆ. ಗೋವಾ ಸರ್ಕಾರ ಅನಗತ್ಯವಾಗಿ ತರಕಾರು ಎತ್ತುತ್ತಿದೆ. ವನ್ಯಜೀವಿ ಅನುಮೋದನೆ ಪಡೆದೇ ಯೋಜನೆ ಕಾರ್ಯಗತ ಮಾಡಲಾಗುತ್ತಿದೆ. ವನ್ಯಜೀವಿ ಮಂಡಳಿಯಿಂದ ಶೀಘ್ರ ಒಪ್ಪಿಗೆ ಸಿಗುವ ವಿಶ್ವಾಸ ಇದೆ’ ಎಂದು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಪರಿಸರ ಅನುಮೋದನೆ ಬೇಕಿಲ್ಲ: ರಾಜ್ಯದ ವಾದ  

*’ಕಳಸಾ ನಾಲಾ ತಿರುವು ಯೋಜನೆಯು ಕುಡಿಯುವ ನೀರಿನ ಯೋಜನೆ. ಹೀಗಾಗಿ, ಈ ಯೋಜನೆಯು ‘ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ–2006’ರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಯೋಜನೆ ಅನುಷ್ಠಾನಕ್ಕೆ ತಕರಾರು ಇಲ್ಲ ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ 2019ರಲ್ಲೇ ಸ್ಪಷ್ಟಪಡಿಸಿದೆ. ಈ ಯೋಜನೆಗೆ ಪರಿಸರ ಅನುಮೋದನೆ ಬೇಕಿಲ್ಲ’ ಎಂದು ರಾಜ್ಯ ಸರ್ಕಾರವು ಪ್ರಸ್ತಾವನೆಯಲ್ಲಿ ಸಮಜಾಯಿಷಿ ನೀಡಿದೆ. ಜತೆಗೆ, ಪರಿಸರ ನಿರ್ವಹಣಾ ಯೋಜನೆಯ ಪ್ರಕಾರ, ಪರಿಸರ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದೂ ಹೇಳಿದೆ. 

*ಪರಿಹಾರಾತ್ಮಕ ಅರಣ್ಯ ಬೆಳೆಸುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾರ್ಗಸೂಚಿ ಪ್ರಕಾರ ಮುನ್ನಡೆಯಲು ಅರಣ್ಯ ಇಲಾಖೆ ತಾಂತ್ರಿಕ ಮಾರ್ಗದರ್ಶನ ನೀಡಬೇಕು. ಅದಕ್ಕೆ ಬೇಕಿರುವ ಹೆಚ್ಚುವರಿ ಅನುದಾನ ಒದಗಿಸಲಾಗುತ್ತದೆ ಎಂದೂ ರಾಜ್ಯ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT