ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಬಸ್‌ ಅಪಘಾತ | ಸಜೀವ ದಹನಗೊಂಡ 24 ಮೃತದೇಹಗಳಿಗೆ ಸಾಮೂಹಿಕ ಅಂತ್ಯಸಂಸ್ಕಾರ

Published 2 ಜುಲೈ 2023, 7:34 IST
Last Updated 2 ಜುಲೈ 2023, 7:34 IST
ಅಕ್ಷರ ಗಾತ್ರ

ನಾಗ್ಪುರ: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದ ಬಸ್‌ ದುರಂತದಲ್ಲಿ ಸಜೀವ ದಹನಗೊಂಡ 25 ಜನರ ಪೈಕಿ 24 ಜನರ ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ದುರಂತದಲ್ಲಿ ಮೃತದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಲಾಗಿವೆ. ಡಿಎನ್‌ಎ ಪರೀಕ್ಷೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು, ಪರೀಕ್ಷೆಗೆ ಒಳಪಡಿಸಿದರೆ ಅಂತ್ಯಸಂಸ್ಕಾರಕ್ಕಾಗಿ ಹಲವು ದಿನಗಳು ಕಾಯಬೇಕಾದ ಪರಿಸ್ಥಿತಿಯಿದೆ. ಈ ಬಗ್ಗೆ ಕುಟುಂಬಗಳಿಗೆ ಮನವರಿಕೆ ಮಾಡಲಾಗಿದೆ‘ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಇಂದು 24 ಮೃತದೇಹಗಳಿಗೆ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗುವುದು. ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಒಂದು ಮೃತದೇಹವನ್ನು ಮಾತ್ರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು‘ ಎಂದು ಬುಲ್ಧಾನ ಜಿಲ್ಲಾಧಿಕಾರಿ ಹೆಚ್.ಪಿ.ತುಮ್ಮೋದ್‌ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ವಿದರ್ಭ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ಸೊಂದು ನಾಗ್ಪುರದಿಂದ ಪುಣೆ ಮಾರ್ಗವಾಗಿ ಸಂಚರಿಸುತ್ತಿತ್ತು. ರಾತ್ರಿ 1.30ರ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಕಣ್ಣುಚ್ಚಿ ತೆರೆಯುವುದರೊಳಗೆ ಇಡೀ ಬಸ್‌ ಹೊತ್ತಿ ಉರಿಯಿತು.

ಈ ದುರಂತದಲ್ಲಿ 25 ಮಂದಿ ಸಾವಿಗೀಡಾಗಿದ್ದರು. ಚಾಲಕ, ಕ್ಲೀನರ್‌ ಸೇರಿದಂತೆ ಒಟ್ಟು ಎಂಟು ಜನರು ದುರಂತದಿಂದ ಪಾರಾಗಿದ್ದರು. ಬಸ್ಸು ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT