ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೌಕೀದಾರ್ ನರೇಂದ್ರ ಮೋದಿ’ಗೆ ಭರಪೂರ ಬೆಂಬಲ

Last Updated 17 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಖಾತೆಯ ಹೆಸರನ್ನು ‘ಚೌಕೀದಾರ್ ನರೇಂದ್ರ ಮೋದಿ’ ಎಂದು ಬದಲಿಸಿದ್ದಾರೆ. ‘ಮೈ ಭಿ ಚೌಕೀದಾರ್’ (ನಾನೂ ಕಾವಲುಗಾರ) ಅಭಿಯಾನದ ಅಂಗವಾಗಿ ಮೋದಿ ಈ ಬದಲಾವಣೆ ಮಾಡಿದ್ದಾರೆ.

ಬಿಜೆಪಿಯ ಹಲವು ನಾಯಕರೂ ಮೋದಿ ಅವರನ್ನು ಅನುಸರಿಸಿದ್ದಾರೆ. ಮಧ್ಯಪ್ರದೇಶ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್, ಪೀಯೂಷ್ ಗೋಯಲ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಟ್ವಿಟರ್ ಖಾತೆಯ ಹೆಸರಿನ ಮುಂದೆ ‘ಚೌಕೀದಾರ್’ ಎಂದು ಸೇರಿಸಿಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳೂ ಟ್ವಿಟರ್‌ನಲ್ಲಿ ತಮ್ಮ ಹೆಸರಿನ ಮುಂದೆ ಚೌಕೀದಾರ್ ಎಂದು ಸೇರಿಸಿಕೊಂಡಿದ್ದಾರೆ. ನಮೋ ಆ್ಯಪ್‌ನಲ್ಲಿ ಮಾರಾಟಕ್ಕಿರುವ ‘ಮೈ ಭೀ ಚೌಕೀದಾರ್’ ಟಿ–ಶರ್ಟ್, ಟೊಪ್ಪಿ ಮತ್ತು ಬ್ಯಾಡ್ಜ್‌ಗಳನ್ನು ಧರಿಸಿಕೊಂಡು, ತೆಗೆಸಿಕೊಂಡಿರುವ ಚಿತ್ರಗಳನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಪ್ರಕಟಿಸುತ್ತಿದ್ದಾರೆ.

‘ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರತಿಯೊಬ್ಬ ಭಾರತೀಯನೂ ಚೌಕೀದಾರ. ಮೈ ಭಿ ಚೌಕೀದಾರ್ (ನಾನೂ ಕಾವಲುಗಾರ) ಎಂಬ ಪ್ರತಿಜ್ಞೆಯನ್ನು ಸ್ವೀಕರಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಟ್ವಿಟರ್‌ನಲ್ಲಿ ಕರೆ ನೀಡಿದ್ದರು. ಅದು ಅಭಿಯಾನದ ರೂಪ ಪಡೆದಿತ್ತು. ಅದನ್ನು ಚುನಾವಣೆವರೆಗೂ ಮುಂದುವರಿಸುವುದಾಗಿ ಬಿಜೆಪಿ ಹೇಳಿತ್ತು.

* ದೇಶದ ಕಾವಲುಗಾರರಾಗಿರುವ ನಾವು, ನಗದುರಹಿತ ವಹಿವಾಟನ್ನು ಬಳಸುವ ಮೂಲಕ ದೇಶದಲ್ಲಿ ಪರಿಶುದ್ಧ ಆರ್ಥಿಕತೆಯನ್ನು ಸೃಷ್ಟಿಸಲು ಬದ್ಧರಾಗಿದ್ದೇವೆ.
-ಮೈ ಭಿ ಚೌಕೀದಾರ್‌ ಪೀಯೂಷ್ ಗೋಯಲ್, ರೈಲ್ವೆ ಸಚಿವ

* ಕಾವಲುಗಾರರು ಎಂದು ಕರೆದುಕೊಳ್ಳುವುದು ಸುಲಭ. ಕೆಲಸ ಸಿಗದೆ ಯುವಜನ ಕಾವಲುಗಾರಿಕೆ ಮಾಡುತ್ತಿದ್ದಾರೆ. ನಮಗೆ ಪ್ರಧಾನ ಮಂತ್ರಿ ಬೇಕೇ ಹೊರತು, ಪ್ರಚಾರ ಮಂತ್ರಿಯಲ್ಲ
-ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ

* ಕಾಂಗ್ರೆಸ್‌ನ ಬೊಫೋರ್ಸ್‌ನಂತಹ ರಕ್ಷಣಾ ಒಪ್ಪಂದದ ಡೀಲ್‌ನಲ್ಲಿ ಮೋದಿ ಸಿಲುಕಿಹಾಕಿಕೊಂಡಿದ್ದಾರೆ ಎಂಬ ಭಯವನ್ನು ಈ ಪ್ರಚಾರ ಅಭಿಯಾನ ಸಾಬೀತುಪಡಿಸುತ್ತಿದೆ
-ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

‘ನನ್ನ ಮಗ ನಜೀಬ್ ಎಲ್ಲಿ?’
ತಮ್ಮನ್ನು ತಾವು ಕಾವಲುಗಾರ (ಚೌಕೀದಾರ್) ಎಂದು ಕರೆದುಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟಿಗರು ಕೇಳುತ್ತಿರುವ ಪ್ರಶ್ನೆ ಇದು.

ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಹಾಸ್ಟೆಲ್‌ನಿಂದ ನಾಪತ್ತೆಯಾಗಿರುವ ವಿದ್ಯಾರ್ಥಿ ನಜೀಬ್ ಅಹಮದ್ ಅವರ ತಾಯಿ ಫಾತಿಮಾ ನಸೀಫ್ ಈ ಪ್ರಶ್ನೆಯನ್ನು ಮೊದಲು ಮೋದಿ ಅವರ ಮುಂದಿಟ್ಟರು. ನಂತರ ಈ ಪ್ರಶ್ನೆ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್ ಖಾತೆಯ ಹೆಸರನ್ನು ‘ಚೌಕೀದಾರ್ ನರೇಂದ್ರ ಮೋದಿ’ ಎಂದು ಬದಲಿಸಿಕೊಂಡ ಬೆನ್ನಲ್ಲೇ ಫಾತಿಮಾ ಅವರು ಟ್ವೀಟ್ ಮಾಡಿದರು.

‘ನೀವು ಕಾವಲುಗಾರರಾ, ಹಾಗಿದ್ದಲ್ಲಿ ನನ್ನ ಮಗ ನಜೀಬ್ ಎಲ್ಲಿದ್ದಾನೆ ಎಂಬುದನ್ನು ಹೇಳಿ. ಎಬಿವಿಪಿ ಗೂಂಡಾಗಳನ್ನು ಈವರೆಗೆ ಏಕೆ ಬಂಧಿಸಿಲ್ಲ? ’ ಎಂಬ ಪ್ರಶ್ನೆಗಳನ್ನು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟರು. ಆದರೆ ಇದಕ್ಕೆ ಪ್ರಧಾನಿಯಾಗಲೀ, ಬಿಜೆಪಿಯ ನಾಯಕರಾಗಲೀ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾನ್ಯ ಜನರು ಫಾತಿಮಾ ಅವರ ಟ್ವೀಟ್‌ ಅನ್ನು ಮರುಟ್ವೀಟ್ ಮಾಡಿ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ನಜೀಬ್ ಅಹಮದ್ ಜೈವಿಕವಿಜ್ಞಾನ ವಿದ್ಯಾರ್ಥಿಯಾಗಿದ್ದರು. 2016ರ ಅಕ್ಟೋಬರ್ 15ರಂದು ನಜೀಬ್ ಮತ್ತು ಎಬಿವಿಪಿಯ ಸದಸ್ಯರ ಮಧ್ಯೆ ಸಂಘರ್ಷ ನಡೆದಿತ್ತು. ನಜೀಬ್ ಮೇಲೆ ಹಲ್ಲೆಯೂ ನಡೆದಿತ್ತು. ಅಂದೇ ನಜೀಬ್ ಅವರು ತಮ್ಮ ಹಾಸ್ಟೆಲ್‌ನಿಂದ ಕಾಣೆಯಾಗಿದ್ದರು. ನಜೀಬ್ ಕಾಣೆಯಾಗಲು ಎಬಿವಿಪಿ ಸದಸ್ಯರೇ ಕಾರಣ ಎಂಬುದು ಫಾತಿಮಾ ಆರೋಪ. ಅವರು ಈವರೆಗೆ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT