ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿರಿಯ ವೈದ್ಯರಿಗೆ ಬೆದರಿಕೆ: ಆರೋಪ ಅಲ್ಲಗಳೆದ ಮಮತಾ ಬ್ಯಾನರ್ಜಿ

Published : 29 ಆಗಸ್ಟ್ 2024, 12:38 IST
Last Updated : 29 ಆಗಸ್ಟ್ 2024, 12:38 IST
ಫಾಲೋ ಮಾಡಿ
Comments

ಕೋಲ್ಕತ್ತ: ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳ ಕಿರಿಯ ವೈದ್ಯರಿಗೆ ತಾವು ಬೆದರಿಕೆ ಒಡ್ಡಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಸ್ಪಷ್ಟಪಡಿಸಿದ್ದಾರೆ. ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆಯನ್ನು ಖಂಡಿಸಿ ಕಿರಿಯ ವೈದ್ಯರು 21 ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.‌

ಪ್ರತಿಭಟನೆಯಲ್ಲಿ ತೊಡಗಿರುವ ಕಿರಿಯ ವೈದ್ಯರಿಗೆ ತಾವು ಬೆದರಿಕೆ ಒಡ್ಡಿರುವುದಾಗಿ ಕೆಲವರು ಮಾಡಿರುವ ಆರೋಪವು ‘ದುರುದ್ದೇಶದಿಂದ ತಪ್ಪು ಮಾಹಿತಿ ನೀಡುವ ಅಭಿಯಾನದ ಒಂದು ಭಾಗ’ ಎಂದು ಮಮತಾ ದೂರಿದ್ದಾರೆ.

‘ವಿದ್ಯಾರ್ಥಿಗಳ (ವೈದ್ಯಕೀಯ ಇತ್ಯಾದಿ) ವಿರುದ್ಧ ನಾನು ಒಂದು ಪದವನ್ನೂ ಆಡಿಲ್ಲ ಎಂಬುದನ್ನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಅವರ ಚಳವಳಿಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದೇನೆ. ಅವರದ್ದು ಸಕಾರಣದ ಹೋರಾಟ. ಕೆಲವರು ನನ್ನನ್ನು ಗುರಿಯಾಗಿಸಿಕೊಂಡು ಆರೋಪಿಸಿರುವಂತೆ, ನಾನು ಅವರನ್ನು ಯಾವತ್ತೂ ಬೆದರಿಸಿಲ್ಲ. ಆರೋಪಗಳು ಸಂಪೂರ್ಣವಾಗಿ ಸುಳ್ಳು’ ಎಂದು ಮಮತಾ ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.

ತೃಣಮೂಲ ಕಾಂಗ್ರೆಸ್ ಛಾತ್ರ ಪರಿಷತ್ ಆಯೋಜಿಸಿದ್ದ ರ್‍ಯಾಲಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ್ದ ಮಮತಾ ಅವರು, ಪ್ರತಿಭಟನೆಯಲ್ಲಿ ತೊಡಗಿರುವ ಕಿರಿಯ ವೈದ್ಯರು ಕರ್ತವ್ಯಕ್ಕೆ ಮರಳುವ ಬಗ್ಗೆ ತುರ್ತಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು. ಪ್ರತಿಭಟನೆಯಲ್ಲಿ ತೊಡಗಿರುವ ವೈದ್ಯರ ಭವಿಷ್ಯವನ್ನು ಪರಿಗಣಿಸಿ, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ತಮಗೆ ಇಷ್ಟವಿಲ್ಲ ಎಂದೂ ಮಮತಾ ಹೇಳಿದ್ದರು.

ಈ ಮಾತನ್ನು ಈ ವೈದ್ಯರು ‘ಪರೋಕ್ಷ ಬೆದರಿಕೆ’ ಎಂದು ಅರ್ಥೈಸಿಕೊಂಡಿದ್ದರು. ಕೆಲಸಕ್ಕೆ ಮರಳಲು ನಿರಾಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT