ಕೋಲ್ಕತ್ತ: ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಇಂದು ದಿಢೀರ್ ಭೇಟಿ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವೈದ್ಯರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಮತ್ತು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ವೇಳೆ ಪ್ರತಿಭಟನಾನಿರತ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಮಮತಾ, ‘ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ನನಗೆ ನಂಬಿಕೆಯಿಲ್ಲ. ಹೀಗಾಗಿ ನಿಮ್ಮ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆ ರೀತಿ ಮಾಡಲು ಇದು ಉತ್ತರ ಪ್ರದೇಶವಲ್ಲ, ಬಂಗಾಳ’ ಎಂದರು.
‘ನಾನು ಹಿರಿಯ ಸಹೋದರಿಯಾಗಿ ಇಲ್ಲಿಗೆ ಭೇಟಿ ನೀಡಿದ್ದೇನೆಯೇ ವಿನಃ ಮುಖ್ಯಮಂತ್ರಿಯಾಗಿ ಅಲ್ಲ. ಮಳೆಯಲ್ಲಿಯೂ ರಸ್ತೆಯಲ್ಲಿ ನಿಂತು ವೈದ್ಯರು ಧರಣಿ ನಡೆಸುತ್ತಿರುವುದನ್ನು ಕಂಡು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ’ ಎಂದು ಹೇಳಿದರು.
‘ನಿಮ್ಮ ಬೇಡಿಕೆಗಳನ್ನು ಪರಿಶೀಲಿಸುತ್ತೇನೆ. ಯಾರಾದರೂ ತಪ್ಪಿಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡುತ್ತೇನೆ’ ಎಂದು ಹೇಳಿದರು. ಕೆಲಸಕ್ಕೆ ಮರುಳುವಂತೆಯೂ ವೈದ್ಯರಲ್ಲಿ ಮನವಿ ಮಾಡಿದರು.
‘ಎಲ್ಲಾ ಸರ್ಕಾರಿ ಆಸ್ಪತ್ರೆಗಳ ರೋಗಿಗಳ ಕಲ್ಯಾಣ ಸಮಿತಿಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ’ ಎಂದು ಇದೇ ವೇಳೆ ಹೇಳಿದರು.
‘ಬಿಕ್ಕಟ್ಟು ಪರಿಹರಿಸಲು ಇದು ನನ್ನ ಕೊನೆಯ ಪ್ರಯತ್ನವಾಗಿದೆ’ ಎಂದೂ ತಿಳಿಸಿದರು.
ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಮತ್ತು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವೈದ್ಯರು, ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಚೇರಿ ಸ್ವಾಸ್ಥ್ಯ ಭವನದ ಮುಂದೆ ಮೊಕ್ಕಾಂ ಹೂಡಿದ್ದಾರೆ.
ಒಂದು ತಿಂಗಳಿಂದ ನಡೆಯುತ್ತಿರುವ ವೈದ್ಯರ ಪ್ರತಿಭಟನೆಯಿಂದ ಸುಮಾರು 29 ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ.