ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೃತಪಟ್ಟ ಪತ್ನಿ, 4 ದಿನ ಬಳಿಕ 600 ಕಿ.ಮೀ ದೂರದಲ್ಲಿ ಪತ್ತೆ: ಒಂದಾದ ಜೋಡಿ

ಪತ್ತೆಯಾದ ಮಹಿಳೆಯ ಶವದ ಅಂತ್ಯಕ್ರಿಯೆ, ಮೊಬೈಲ್‌ ಸಂಖ್ಯೆಯಿಂದ ಪತ್ನಿ ಜೀವಂತವಾಗಿರುವುದು ದೃಢ
Published 23 ಜೂನ್ 2024, 16:44 IST
Last Updated 23 ಜೂನ್ 2024, 16:44 IST
ಅಕ್ಷರ ಗಾತ್ರ

ಗೋರಖಪುರ (ಉತ್ತರ ಪ್ರದೇಶ): ಪತ್ನಿ ಮೃತಪಟ್ಟಿದ್ದಾಳೆ ಎಂದು ಪತಿ ಆಕೆಯ ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ, ನಾಲ್ಕು ದಿನಗಳ ನಂತರ ಪತ್ನಿ 600 ಕಿ.ಮೀ. ದೂರದಲ್ಲಿ ಪತ್ತೆಯಾಗಿ, ಸತಿ ಪತಿ ಮತ್ತೆ ಒಂದಾಗಿರುವ ಪ್ರಕರಣ ಉತ್ತರ ‍ಪ್ರದೇಶದ ಗೋರಖಪುರ ಜಿಲ್ಲೆಯಲ್ಲಿ ನಡೆದಿದೆ.   

ಜಿಲ್ಲೆಯ ಬಾನ್ಸ್‌ಗಾಂವ್‌ನ ನಿವಾಸಿಯಾಗಿರುವ ರಾಮ್‌ ಸುಮೇರ್‌ (60) ಅವರು ತಮ್ಮ ಪತ್ನಿ ಫೂಲ್‌ಮತಿ ನಾಪತ್ತೆಯಾಗಿದ್ದಾರೆ ಎಂದು ಜೂನ್‌ 15ರಂದು ಪೊಲೀಸರಿಗೆ ದೂರು ನೀಡಿದ್ದರು.

‘ನಾಲ್ಕು ದಿನಗಳ ನಂತರ, ಜೂನ್‌ 19ರಂದು ಉರುವಾ ಬಾಜಾರ್‌ ಎಂಬಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಸುಮೇರ್‌ ಅವರು ಅದು ತಮ್ಮ ಪತ್ನಿಯ ಮೃತದೇಹ ಎಂದು ಗುರುತಿಸಿದ್ದರು. ಅಂತ್ಯ ಸಂಸ್ಕಾರವನ್ನೂ ನಡೆಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. 

ಆದರೆ, ಮರಣೋತ್ತರ ಪರೀಕ್ಷೆ ಬಂದಾಗ ಈ ಪ್ರಕರಣ ನಿಗೂಢ ತಿರುವು ಪಡೆಯಿತು. ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವರದಿ ಹೇಳಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದರು. 

ಕೊಲೆ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಫೂಲ್‌ಮತಿ ಅವರ ಮೊಬೈಲ್‌ ಸಂಖ್ಯೆ ಆಧಾರದಲ್ಲಿ ತನಿಖೆ ನಡೆಸಿದಾಗ, 600 ಕಿ.ಮೀ. ದೂರದಲ್ಲಿರುವ ಝಾನ್ಸಿ ಪ್ರದೇಶದಲ್ಲಿ ಮೊಬೈಲ್‌ ಸಂಖ್ಯೆ ಸಕ್ರಿಯವಾಗಿರುವುದು ತಿಳಿದುಬಂದಿತು. 

ಫೂಲ್‌ಮತಿ ಅವರು ಸುಲ್ತಾನ್‌ಪುರದ ಶುಭಮ್‌ ಎಂಬುವವರಿಗೆ ಸೇರಿದ ಸಂಖ್ಯೆಗೆ ಆಗಾಗ ಕರೆ ಮಾಡುತ್ತಿದ್ದುದು ಕರೆ ವಿವರಗಳನ್ನು ಪರಿಶೀಲಿಸಿದಾಗ ಗೊತ್ತಾಯಿತು.  

ಶುಭಮ್‌ ಅವರನ್ನು ಪೊಲೀಸರು ಪ್ರಶ್ನಿಸಿದಾಗ ಫೂಲ್‌ಮತಿ ಜೀವಂತವಾಗಿರುವುದು ಗೊತ್ತಾಯಿತು. ತಾನೇ ಕರೆದುಕೊಂಡು ಬಂದಿರುವುದಾಗಿ ಹೇಳಿದ ಶುಭಮ್‌, ಆಕೆ ಇರುವ ವಿಳಾಸವನ್ನು ತಿಳಿಸಿದರು.

‘ಮಹಿಳೆಯ ಹೇಳಿಕೆ ಪಡೆದು ಶನಿವಾರ ಆಕೆಯ ಪತಿಯೊಂದಿಗೆ ಕಳುಹಿಸಲಾಗಿದೆ. ಸುಮೇರ್, ಫೂಲ್‌ಮತಿ, ಶುಭಮ್‌ ಮತ್ತು ಮೃತಪಟ್ಟ ಮಹಿಳೆಯ ನಡುವಿನ ಸಂಬಂಧವನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್‌ ತೋಮರ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT