ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ | ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ; ರಾಹುಲ್‌, ಕೇಜ್ರಿವಾಲ್‌, ಸ್ಮೃತಿ ಖಂಡನೆ

Published 20 ಜುಲೈ 2023, 2:42 IST
Last Updated 20 ಜುಲೈ 2023, 2:42 IST
ಅಕ್ಷರ ಗಾತ್ರ

ನವದೆಹಲಿ: ಮಣಿಪುರದಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿದ ಹಳೆ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಘಟನೆ ಖಂಡಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಹುಲ್‌ ಗಾಂಧಿ, ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಮಣಿಪುರದಲ್ಲಿ ಮೇ 3ರಂದು ಎರಡು ಸಮುದಾಯಗಳ ನಡುವೆ (ಕುಕಿ ಮತ್ತು ಮೈತೇಯಿ) ಹಿಂಸಾಚಾರ ಭುಗಿಲೆದ್ದಿದ್ದು, ಮೇ 4ರಂದು ಈ ಅಮಾನುಷ ಘಟನೆ ನಡೆದಿದೆ. ಕಾಂಗ್‌ಪೊಕ್ಪಿ ಜಿಲ್ಲೆಯ ಕುಕಿ–ಜೋ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯರಿಬ್ಬರನ್ನು ಬೆತ್ತಲೆಗೊಳಿಸಿ ಭತ್ತದ ಗದ್ದೆ ಕಡೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಈ ವಿಡಿಯೊದಲ್ಲಿ ಸೆರೆಯಾಗಿದೆ. ಇಬ್ಬರು ಮಹಿಳೆಯರು ಸಹಾಯಕ್ಕಾಗಿ ಅಂಗಲಾಚುತ್ತಿರುವುದು ದೃಶ್ಯದಲ್ಲಿ ಕಾಣಬಹುದು. ಬುಧವಾರ(ಜುಲೈ 19) ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದೊಂದು ಪೈಶಾಚಿಕ ಕೃತ್ಯ ಎಂದು ವಿಪಕ್ಷದ ನಾಯಕರು ಸೇರಿ ಹಲವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸ್ಮೃತಿ ಇರಾನಿ, 'ಮಣಿಪುರದಲ್ಲಿ ನಡೆದ ಮಹಿಳೆಯರಿಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಅಮಾನವೀಯವಾಗಿದೆ. ಇದನ್ನು ಬಲವಾಗಿ ಖಂಡಿಸುತ್ತೇನೆ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರೊಂದಿಗೆ ಮಾತನಾಡಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಅಪರಾಧಿಗಳನ್ನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲವೆಂದು ಹೇಳಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ನಾಚಿಗೇಡಿನ ಸಂಗತಿ: ಕೇಜ್ರಿವಾಲ್‌

ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. 'ಇದೊಂದು ನಾಚಿಗೇಡಿನ ಸಂಗತಿಯಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಭಾರತೀಯ ಸಮಾಜ ಇಂತಹ ಹೇಯ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ.

'ಮಣಿಪುರದ ಪರಿಸ್ಥಿತಿ ಚಿಂತಾಜನಕವಾಗಿದೆ. ಮಣಿಪುರದ ಪರಿಸ್ಥಿತಿಯ ಬಗ್ಗೆ ಗಮನ ಹರಿಸುವಂತೆ ಪ್ರಧಾನಿಗೆ ಮನವಿ ಮಾಡುತ್ತೇನೆ. ದಯವಿಟ್ಟು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಿ. ಇಂತಹ ಅಪರಾಧ ಪ್ರವೃತ್ತಿ ಹೊಂದಿರುವವರಿಗೆ ಭಾರತದಲ್ಲಿ ಜಾಗವಿಲ್ಲ' ಎಂದು ಹೇಳಿದರು.

ಪ್ರಧಾನಿ ಮೌನವೇ ಅರಾಜಕತೆಗೆ ಕಾರಣ: ರಾಹುಲ್‌ ಗಾಂಧಿ

'ಮಣಿಪುರ ವಿಷಯದಲ್ಲಿ ಪ್ರಧಾನಿ ಮೌನವಾಗಿರುವುದೇ ಅಲ್ಲಿ ಅರಾಜಕತೆ ನಲೆಸಲು ಕಾರಣವಾಗಿದೆ. ಮಣಿಪುರದಲ್ಲಿ ಅಖಂಡ ಭಾರತದ ಕಲ್ಪನೆಗೆ ಧಕ್ಕೆಯಾಗುತ್ತಿರುವುದನ್ನು I.N.D.I.A ಸಹಿಸುವುದಿಲ್ಲ. ನಾನು ಮಣಿಪುರದ ಜೊತೆ ನಿಲ್ಲುತ್ತೇನೆ. ಶಾಂತಿಯೊಂದೇ ಮುಂದಿನ ದಾರಿ' ಎಂದು ರಾಹುಲ್‌ ಗಾಂಧಿ ಘಟನೆ ಖಂಡಿಸಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT