ಇಂಫಾಲ್: ಮಣಿಪುರದ ಪಶ್ಚಿಮ ಇಂಫಾಲ್ ಜಿಲ್ಲೆಯಲ್ಲಿ ಶಂಕಿತ ಬಂಡುಕೋರರು ಭಾನುವಾರ ಬಂದೂಕು ಮತ್ತು ಬಾಂಬ್‌ಗಳಿಂದ ನಡೆಸಿದ ದಾಳಿಯಲ್ಲಿ ಒಬ್ಬ ಮಹಿಳೆ ಮೃತಪಟ್ಟು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು 31 ವರ್ಷದ ನಂಗ್‌ಬಮ್ ಸುರ್ಬಲಾ ದೇವಿ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ 8 ವರ್ಷದ ಮಗಳು, ಪೊಲೀಸ್ ಅಧಿಕಾರಿ ಎನ್.ರಾಬರ್ಟ್ ಸೇರಿದಂತೆ ಇತರ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಇಲ್ಲಿನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿದೆ.
ತಗ್ಗು ಪ್ರದೇಶದಲ್ಲಿರುವ ಕೌತ್ರುಕ್ ಮತ್ತು ಕಡಂಗ್‌ಬಾಂಡ್ ಗ್ರಾಮಗಳನ್ನು ಗುರಿಯಾಗಿಸಿ, ಗುಡ್ಡದ ಮೇಲಿನಿಂದ ಬಂಡುಕೋರರು ದಾಳಿ ನಡೆಸಿದ್ದಾರೆ. ಇದರಿಂದ ಭೀತಿಗೊಳಗಾದ ಜನರು ಸುರಕ್ಷಿತ ಸ್ಥಳಗಳತ್ತ ಓಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಗೆ ಒಳಗಾದ ಪ್ರದೇಶದಲ್ಲಿ ರಾಜ್ಯ ಪೊಲೀಸರು ಹಾಗೂ ಭದ್ರತಾ ಪಡೆಗಳ ಯೋಧರನ್ನು ನಿಯೋಜಿಸಲಾಗಿದೆ.