ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂವಿಕಾಸದಲ್ಲಿ ನಮ್ಮದು ‘ಮೇಘಾಲಯ ಯುಗ’

Last Updated 19 ಜುಲೈ 2018, 18:59 IST
ಅಕ್ಷರ ಗಾತ್ರ

ಭೂಮಿಯ ವಿಕಾಸದ ಹಾಲಸೀನ್ ಯುಗದಲ್ಲಿ ಇನ್ನೂ ಮೂರು ಉಪಯುಗಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ತೀರಾ ಇತ್ತೀಚಿನ ಮತ್ತು ಈಗ ನಾವು ಬದುಕುತ್ತಿರುವ ಅವಧಿಯನ್ನು ‘ಮೇಘಾಲಯ ಯುಗ’ ಎಂದು ಕರೆದಿದ್ದಾರೆ. ವಿಜ್ಞಾನಿಗಳ ಈ ಹೊಸ ಸಂಶೋಧನೆಯನ್ನು ಅಂತರರಾಷ್ಟ್ರೀಯ ಭೂವಿಜ್ಞಾನ ಒಕ್ಕೂಟವು (ಐಯುಜಿಎಸ್) ಅನುಮೋದಿಸಿದೆ. ಸಂಸ್ಥೆಯ ‘ಭೂ ಇತಿಹಾಸ ವೇಳಾಪಟ್ಟಿ’ಯಲ್ಲಿ ಈ ಹೊಸ ಯುಗಗಳನ್ನು ಸೇರಿಸಲಾಗಿದೆ.ಈ ಯುಗಗಳು ಭೂಮಿಯ ವಾತಾವರಣದಲ್ಲಿ ಆದ ವ್ಯಾಪಕ ಬದಲಾವಣೆಗಳನ್ನು ಸೂಚಿಸುತ್ತವೆ.

ಹಾಲಸೀನ್

ಕ್ರಿಸ್ತ ಪೂರ್ವ 11,700ರಿಂದ ಈಗಿನವರೆಗಿನ ಅವಧಿಯನ್ನು ಹಾಲಸೀನ್ ಎಂದು ಕರೆಯಲಾಗುತ್ತದೆ. ಅದಕ್ಕೂ ಮೊದಲಿನ ಯುಗವನ್ನು ಹಿಮಯುಗ ಎಂದು ಪರಿಗಣಿಸಲಾಗಿದೆ. ಉಷ್ಣತೆ ಹೆಚ್ಚಿದ್ದರಿಂದ ಹಿಮಯುಗದಲ್ಲಿನ ಹಿಮಗಲ್ಲುಗಳು ಕರಗಲಾರಂಭಿಸಿದವು. ನಂತರದ ಅವಧಿಯನ್ನು ಹಾಲಸೀನ್‌ ಯುಗ ಎಂದು ಕರೆಯಲಾಗಿದೆ.

ಹಿಮಯುಗ
ಕ್ರಿ.ಪೂ. 11,701ಕ್ಕಿಂತ ಹಿಂದಿನ ಅವಧಿ.


ಗ್ರೀನ್‌ಲ್ಯಾಂಡೇನಿಯನ್ ಯುಗ
ಕ್ರಿ.ಪೂ.11,700–ಕ್ರಿ.ಪೂ.8,301
ಭೂಮಿಯು ಹಿಮಯುಗದಿಂದ ಹೊರಬರುವ ಅವಧಿ ಇದಾಗಿದೆ

ನಾರ್ಥ್‌ಗ್ರಿಪ್ಪಿಯನ್ ಯುಗ
ಕ್ರಿ.ಪೂ.8,300–ಕ್ರಿ.ಪೂರ್ವ4,201

ಈಗಿನ ಕೆನಡ ಇರುವ ಪ್ರದೇಶದಲ್ಲಿದ್ದ ಹಿಮಗಲ್ಲುಗಳು ಕರಗಿ, ನೀರು ಉತ್ತರ ಅಟ್ಲಾಂಟಿಕ್ ಸಾಗರದತ್ತ ಹರಿಯಿತು. ಇದರಿಂದ ಸಾಗರದಾಳದಲ್ಲಿನ ಬಿಸಿನೀರು ಮತ್ತು ತಣ್ಣೀರಿನ ಪ್ರವಾಹಗಳಲ್ಲಿ ವ್ಯತ್ಯಾಸ ಉಂಟಾಯಿತು. ಇದರಿಂದ ಮಳೆ ಮತ್ತು ಮತ್ತಿತರ ನೈಸರ್ಗಿಕ ಪ್ರಕ್ರಿಯೆಗಳಲ್ಲಿ ವ್ಯತ್ಯಯ ಉಂಟಾಯಿತು

ಮೇಘಾಲಯ ಯುಗ
ಕ್ರಿ.ಪೂ.4,200ರಿಂದ ಪ್ರಸ್ತುತ...

ಭೂಮಿಯಲ್ಲಿನ ಆರಂಭಿಕ ನಾಗರಿಕತೆಗಳನ್ನು ಬಾಧಿಸಿದ ಭಾರಿ ಬರಗಾಲ ಆರಂಭವಾದ ಅವಧಿ. ಆ ಅವಧಿಯಲ್ಲಿ ಉತ್ತುಂಗದಲ್ಲಿದ್ದ ಮೆಸಪಟೋಮಿಯಾ ನಾಗರಿಕತೆ, ನಂತರದ ಈಜಿಪ್ಟ್, ಗ್ರೀಕ್, ಸಿಂಧೂ ನಾಗರಿಕತೆಗಳಲ್ಲಿನ ಸಾಂಸ್ಕೃತಿಕ ಬದಲಾವಣೆಯನ್ನು ಈ ಬರಗಾಲ ಪ್ರಭಾವಿಸಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಈ ಮಹಾಬರದಿಂದ ಭೂಮಿಯಲ್ಲಿ ಸಂಭವಿಸಿದ ರಾಸಾಯನಿಕ ಬದಲಾವಣೆಗಳು ಗುಹಾಸ್ತಂಭ ಶಿಲೆಗಳಲ್ಲಿ (ಗುಹೆಯ ಚಾವಣಿಯಿಂದ ನೀರು ತೊಟ್ಟಿಕ್ಕಿ, ಆ ನೀರಿನಲ್ಲಿರುವ ಖನಿಜಾಂಶಗಳು ಒಂದೆಡೆ ಶೇಖರವಾಗುತ್ತವೆ. ಹಾಗೆ ಶೇಖರವಾಗುವುದರಿಂದ ಶಿಲಾಸ್ತಂಭಗಳು ರೂಪುಗೊಳ್ಳುತ್ತವೆ) ಅಚ್ಚಾಗಿವೆ. ಅಂತಹ ಒಂದು ಶಿಲೆ ಭಾರತದ ಮೇಘಾಲಯದ ಗುಹೆಯೊಂದರಲ್ಲಿ ಲಭ್ಯವಾಗಿದೆ. ಹೀಗಾಗಿಯೇ ಈ ಅವಧಿಗೆ ‘ಮೇಘಾಲಯ ಯುಗ’ ಎಂದು ಹೆರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT