ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಚಾಂಗ್‌ ಚಂಡಮಾರುತ: ಚೆನ್ನೈನಲ್ಲಿ ಎಲ್ಲೆಲ್ಲೂ ನೀರು- ವಿದ್ಯುತ್‌ ವ್ಯತ್ಯಯ

ಸಂಕಷ್ಟದ‌ಲ್ಲಿ ನಾಗರಿಕರು: ಪರಿಹಾರ ಕಾರ್ಯ ಚುರುಕು
Published 6 ಡಿಸೆಂಬರ್ 2023, 16:41 IST
Last Updated 6 ಡಿಸೆಂಬರ್ 2023, 16:41 IST
ಅಕ್ಷರ ಗಾತ್ರ

ಚೆನ್ನೈ: ಎರಡು ದಿನಗಳ ಹಿಂದೆ ಅಬ್ಬರಿಸಿದ್ದ ಚಂಡಮಾರುತ ಮಿಚಾಂಗ್‌ನಿಂದ ಚೆನ್ನೈ ನಗರದ ಹಲವು ಪ್ರದೇಶಗಳು ಮುಳುಗಡೆಯಾಗಿವೆ.

ಇದರಿಂದ, ಜನ ಜೀವನಕ್ಕೆ ತೊಂದರೆಯಾಗಿದೆ. ವಿದ್ಯುತ್‌ ವ್ಯವಸ್ಥೆಯೂ ಹದಗೆಟ್ಟಿದ್ದು, ನಾಗರಿಕರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಹಲವು ಕಡೆಗಳಲ್ಲಿ ವಿದ್ಯುತ್‌ ಕೇಬಲ್‌ಗಳು ನೀರಿನಲ್ಲಿ ಮುಳುಗಡೆಯಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್‌ ಸರಬರಾಜು ಕಡಿತಗೊಳಿಸಿರುವುದಾಗಿ ಸರ್ಕಾರ ಹೇಳಿದೆ. ಶೀಘ್ರದಲ್ಲೇ ವ್ಯವಸ್ಥೆ ಸಹಜ ಸ್ಥಿತಿಗೆ ಬರಲಿದೆ ಎಂದು ತಿಳಿಸಿದೆ.  

ಪ್ರಬಲ ಚಂಡಮಾರುತದ ರುದ್ರನರ್ತನದಿಂದಾಗಿ ಚೆನ್ನೈನ ವೇಲಾಚೇರಿ ಮತ್ತು ತಾಂಬರಂ ಪ್ರದೇಶಗಳು ನೀರಿನಲ್ಲಿ ಬಹುತೇಕ ಮುಳುಗಡೆಯಾಗಿವೆ. ಚಂಡಮಾರುತದ ಅಬ್ಬರ ತಗ್ಗಿದರೂ, ಮಳೆ ನೀರು ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ  ಬುಧವಾರವೂ ನಾಗರಿಕರು ಸುರಕ್ಷಿತ ಪ್ರದೇಶಗಳಿಗೆ ತಮ್ಮ ಮಕ್ಕಳೊಂದಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಹಲವರು ಸಹಾಯಕ್ಕಾಗಿ ಅಧಿಕಾರಿಗಳನ್ನು ಅಂಗಲಾಚುತ್ತಿದ್ದರು. ಮತ್ತಷ್ಟು ದೋಣಿಗಳ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.  

ಶಾಲೆ–ಕಾಲೇಜುಗಳಿಗೆ ನೀಡಲಾಗಿದ್ದ ರಜೆಯನ್ನು ಡಿ.7ರವರೆಗೆ ವಿಸ್ತರಿಸಲಾಗಿದೆ.  ಚೆನ್ನೈನ 11 ಅಂಡರ್‌ಪಾಸ್‌ಗಳಲ್ಲಿ ಇನ್ನೂ ನೀರು ನಿಂತಿದ್ದು, ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಹಲವು ರೈಲುಗಳ ಸಂಚಾರ ವ್ಯತ್ಯಯಗೊಂಡಿದೆ. ಕೆಲವು ರದ್ದಾಗಿವೆ. ಚೆನ್ನೈ ಉಪನಗರ ರೈಲುಗಳ ಸಂಚಾರವನ್ನು 30–45 ನಿಮಿಷಗಳ ಅಂತರದಲ್ಲಿ ನಿಗದಿ ಮಾಡಲಾಗಿದೆ. ಕೆಲವು ಮಾರ್ಗಗಳಲ್ಲಿ ಒಂದು ಗಂಟೆ ಅಂತರದಲ್ಲಿ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ, ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಎಂದಿನಂತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸಂತ್ರಸ್ತರನ್ನು ಬುಧವಾರ ಭೇಟಿಯಾದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ಆಹಾರ, ಅಗತ್ಯ ವಸ್ತುಗಳನ್ನು ವಿತರಿಸಿದರು. ಜತೆಗೆ, ನಗರ ಸ್ಥಳಿಯಾಡಳಿತಗಳಿಂದ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಗ್ರೇಟರ್‌ ಚೆನ್ನೈಕಾರ್ಪೊರೇಷನ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಹಾರ, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. 

ಚೆನ್ನೈ ನಗರದ ವಿವಿಧ ಕಡೆಗಳಲ್ಲಿ 200 ದೋಣಿಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ. ಒಟ್ಟು 372 ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, ಅದರಲ್ಲಿ 41,400  ಮಂದಿ ಆಶ್ರಯ ಪಡೆದಿದ್ದಾರೆ. ಅಲ್ಲಿಗೆ ಆಹಾರ ಪೂರೈಕೆ ಆಗುತ್ತಿದೆ. ಚೆನ್ನೈ, ತಿರುವಳ್ಳೂರ್‌, ಕಂಚಿಪುರಮ್‌, ಚೆಂಗಲ್‌ಪೇಟ್‌ನ 800 ಪ್ರದೇಶಗಳಲ್ಲಿ ನೀರು ನಿಂತಿದೆ. 19 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಚೆನ್ನೈನ ಹಲವು ಕಡೆಗಳಲ್ಲಿ ಹೆಲಿಕಾಪ್ಟರ್‌ ಮೂಲಕ ಆಹಾರದ ಪೊಟ್ಟಣಗಳನ್ನು ಪೂರೈಕೆ ಮಾಡಲಾಗಿದೆ ಎಂದು ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಶಿವದಾಸ್ ಮೀನಾ ತಿಳಿಸಿದ್ದಾರೆ. 

ಚೆನ್ನೈಗೆ ನಿತ್ಯ 19 ಲಕ್ಷ ಲೀಟರ್‌ ಹಾಲು ಬೇಕು. ಸದ್ಯ 14 ಲಕ್ಷ ಲೀ. ಹಾಲು ಪೂರೈಕೆಯಾಗುತ್ತಿದೆ. ಸರ್ಕಾರಿ ಸಂಸ್ಥೆ ’ಆವಿನ್‌’ನಿಂದಲೇ 10 ಲಕ್ಷ ಲೀ. ಹಾಲು ಪೂರೈಕೆಯಾಗಿದೆ. ಗುರುವಾರದಿಂದ ನಿಗದಿಯಂತೆ ಹಾಲು ಸರಬರಾಜು ಆಗಲಿದೆ ಎಂದು ಮೀನಾ ಭರವಸೆ ನೀಡಿದರು.  

ಹಾಲನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಮನೋ ತಂಗರಾಜು ಎಚ್ಚರಿಕೆ ನೀಡಿದ್ದಾರೆ.

ಪರಿಹಾರಕ್ಕಾಗಿ ಪತ್ರ: ನೆರೆ ಪರಿಸ್ಥಿತಿಯನ್ನು ಎದುರಿಸಲು ₹5,060 ಕೋಟಿ ಮಧ್ಯಂತರ ನೆರೆ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

ಸಂಕಷ್ಟ ಹಂಚಿಕೊಂಡ ನಾಗರಿಕರು

ಚೆನ್ನೈನ ಹಲವು ಪ್ರದೇಶಗಳಲ್ಲಿ ನೀರು ಮನೆಗಳನ್ನು ಸುತ್ತುವರಿದಿರುವುದು, ಜನ ಹೊರ ಬರಲಾಗದೇ ಪರದಾಡುತ್ತಿರುವ ವಿಡಿಯೊ, ಫೊಟೊಗಳನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.  

’ನಮ್ಮ ಸಂಬಂಧಿಗಳು ಕಳೆದ ಮೂರು ದಿನಗಳಿಂದ ಮನೆಯಿಂದ ಹೊರಬರಲಾಗದೆ, ಆಹಾರ, ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿದ್ದಾರೆ‘ ಎಂದು ’ಎಕ್ಸ್‌‘ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದಾರೆ.  

ಹಲವು ಪ್ರದೇಶಗಳಲ್ಲಿ ಹಾಲು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ನೆರೆಪೀಡಿತ ವೇಲಾಚೇರಿ ಮತ್ತು ತಾಂಬರಂನಲ್ಲಂತೂ ಹೆಚ್ಚಿನ ದರಕ್ಕೆ ಹಾಲು ಮಾರಾಟ ಮಾಡಲಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.  

ಮಿಚಾಂಗ್‌ ಪರಿಣಾಮವಾಗಿ ಪ್ರಾಣ ಕಳೆದುಕೊಂಡವರ ಕುಟುಂಬಗಳ ದುಃಖದಲ್ಲಿ ನಾನೂ ಭಾಗಿ. ಪರಿಹಾರ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದೆ. ಪರಿಸ್ಥಿತಿ ತಹಬದಿಗೆ ಬರುವವರೆಗೆ ಪರಿಹಾರ ಕಾರ್ಯ ಮುಂದುವರಿಲಿದೆ.

ನರೇಂದ್ರ ಮೋದಿ ಪ್ರಧಾನಿ 

ನಾನಿರುವ ಪ್ರದೇಶದಲ್ಲಿ 30 ಗಂಟೆಗಳಿಂದ ವಿದ್ಯುತ್‌ ಇಲ್ಲ. ಪರಿಸ್ಥಿತಿ ಹೇಗಿರಬಹುದು ನೀವೇ ಊಹಿಸಿ. ಮುಂದಿನ ಆಯ್ಕೆ ಏನೆಂದೂ ತಿಳಿಯುತ್ತಿಲ್ಲ. ಮಳೆ ನಿಂತಿರಬಹುದು. ಎಲ್ಲವೂ ಸರಿಹೋಗಲು ಇನ್ನಷ್ಟು ಸಮಯ ಬೇಕಾಗುತ್ತದೆ. ಜನ ಮತ್ತೂ ಒಂದು ದಿನ ಸಹಿಸಿಕೊಳ್ಳಬೇಕು

– ರವಿಚಂದ್ರನ್‌ ಆಶ್ವಿನ್‌ ಕ್ರಿಕೆಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT