ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ಪರಂಪರೆ ಕಾಪಾಡುವುದು ಎಲ್ಲರ ಜವಾಬ್ದಾರಿ: ಪ್ರಧಾನಿ ನರೇಂದ್ರ ಮೋದಿ

‘ಕಾಶಿ–ತಮಿಳು ಸಂಗಮ’ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ
Last Updated 19 ನವೆಂಬರ್ 2022, 14:20 IST
ಅಕ್ಷರ ಗಾತ್ರ

ವಾರಾಣಸಿ, ಉತ್ತರಪ್ರದೇಶ: ‘ತಮಿಳಿನ ಪರಂಪರೆಯನ್ನು ಉಳಿಸಿ ಬೆಳೆಸುವುದು 130 ಕೋಟಿ ಭಾರತೀಯರ ಜವಾಬ್ದಾರಿಯಾಗಿದೆ. ಇದನ್ನು ನಿರ್ಲಕ್ಷ್ಯಿಸಿದರೆ ಅದು ರಾಷ್ಟ್ರಕ್ಕೆ ಮಾಡುವ ದೊಡ್ಡ ಅಪಚಾರವಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ವಾರಾಣಸಿಯಲ್ಲಿ ಹಮ್ಮಿಕೊಂಡಿರುವ ‘ಕಾಶಿ–ತಮಿಳು ಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ‘ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ತಮಿಳು ಕೂಡ ಒಂದು. ಅದಕ್ಕೆ ಸೂಕ್ತ ಗೌರವ ನೀಡುವ ಕೆಲಸ ಆಗಿಲ್ಲ’ ಎಂದಿದ್ದಾರೆ.

‘ನಾವು ತಮಿಳು ಭಾಷೆಯನ್ನು ನಿರ್ಬಂಧಗಳಲ್ಲಿ ಇರಿಸಿದರೆ ಅದಕ್ಕೆ ದೊಡ್ಡ ಹಾನಿ ಮಾಡಿದಂತಾಗುತ್ತದೆ. ಭಾಷಾ ತಾರತಮ್ಯ ತೊಡೆದುಹಾಕಬೇಕು. ಭಾವನಾತ್ಮಕ ಏಕತೆ ಸ್ಥಾಪಿಸುವುದಕ್ಕೆ ಒತ್ತು ನೀಡಬೇಕು’ ಎಂದು ಪ್ರತಿಪಾದಿಸಿದ್ದಾರೆ.

‘ಕಾಶಿ ಮತ್ತು ತಮಿಳುನಾಡು, ಸಂಸ್ಕೃತಿ ಮತ್ತು ಸಭ್ಯತೆಯ ನೆಲೆಗಳಾಗಿವೆ. ಜಗತ್ತಿನ ಅತ್ಯಂತ ಹಳೆಯ ಭಾಷೆಗಳಾದ ಸಂಸ್ಕೃತ ಹಾಗೂ ತಮಿಳಿನ ನೆಲೆವೀಡಾಗಿವೆ. ನಮ್ಮ ದೇಶದಲ್ಲಿ ‘ಸಂಗಮ’ಕ್ಕೆ ಪವಿತ್ರ ಸ್ಥಾನವಿದೆ. ಅದು ನದಿಗಳ ಸಂಗಮವಾಗಿರಬಹುದು, ಜ್ಞಾನ–ವಿಜ್ಞಾನ, ಸಮಾಜ–ಸಂಸ್ಕೃತಿಯ ಸಂಗಮವಿರಬಹುದು. ಎಲ್ಲವನ್ನೂ ನಾವು ಸಂಭ್ರಮಿಸಬೇಕು. ಕಾಶಿ–ತಮಿಳು ಸಂಗಮವು ದೇಶದ ವೈವಿಧ್ಯತೆ ಮತ್ತು ಅನನ್ಯತೆಯ ಪ್ರತೀಕ. ಇದು ಗಂಗಾ ಮತ್ತು ಯಮುನಾ ನದಿಗಳ ಸಂಗಮದಷ್ಟೇ ಪವಿತ್ರವಾದುದು’ ಎಂದು ಹೇಳಿದ್ದಾರೆ.

‘ಸಾವಿರಾರು ವರ್ಷಗಳಷ್ಟು ಹಳೆಯದಾದ ನಮ್ಮ ಸಂಪ್ರದಾಯ ಹಾಗೂ ಪರಂಪರೆಯನ್ನು ಸಶಕ್ತಗೊಳಿಸುವ ಹಾಗೂ ದೇಶ ಒಗ್ಗೂಡಿಸುವ ಕೆಲಸ ಆಗಬೇಕಿದೆ. ದುರದೃಷ್ಟವಶಾತ್‌ ಈ ದಿಸೆಯಲ್ಲಿ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲ. ಆದರೆ ಕಾಶಿ–ತಮಿಳು ಸಂಗಮವು ಈ ಕಾರ್ಯಕ್ಕೆ ವೇದಿಕೆ ಕಲ್ಪಿಸುವ ಭರವಸೆ ಇದೆ’ ಎಂದಿದ್ದಾರೆ.

ಕಾಶಿ ಮತ್ತು ತಮಿಳುನಾಡಿನ ಸಾಂಸ್ಕೃತಿಕ ಬಾಂಧವ್ಯ ಗಟ್ಟಿಗೊಳಿಸುವ ಗುರಿಯೊಂದಿಗೆಐಐಟಿ ಮದ್ರಾಸ್‌ ಮತ್ತು ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ಆಯೋಜಿಸಿರುವ ಈ ಕಾರ್ಯಕ್ರಮ ಒಂದು ತಿಂಗಳು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT