ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳಿಗೆ ಪರಿಹಾರ; ಜಗತ್ತಿನ ಚಿತ್ತ ಭಾರತದತ್ತ -ಮೋಹನ್ ಭಾಗವತ್

ಅಹಿಂಸೆ, ಸಾಮರಸ್ಯದ ಮಾರ್ಗ ಅನುಸರಿಸಲು ಮೋಹನ್ ಭಾಗವತ್ ಕರೆ
Published 12 ಫೆಬ್ರುವರಿ 2024, 15:33 IST
Last Updated 12 ಫೆಬ್ರುವರಿ 2024, 15:33 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ತತ್ತ್ವಶಾಸ್ತ್ರದ ಮಟ್ಟವು ಅತ್ಯುನ್ನತವಾಗಿದ್ದು, ಇಡೀ ಜಗತ್ತು ತಾನು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂಬ ಭರವಸೆಯೊಂದಿಗೆ ನಮ್ಮತ್ತ ನೋಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು. 

ಜೈನ ತೀರ್ಥಂಕರ ಮಹಾವೀರ ಅವರ 2,550ನೇ ‘ನಿರ್ವಾಣ’ ವರ್ಷದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಏಕತೆ, ಅಹಿಂಸೆ ಮತ್ತು ಸಾಮರಸ್ಯದ ಮಾರ್ಗವನ್ನು ಅನುಸರಿಸಲು ಕರೆ ನೀಡಿದರು. 

ತಾವು ಅನುಸರಿಸುತ್ತಿರುವ ಜೀವನ ವಿಧಾನದಿಂದ ಶಾಶ್ವತ ಸಂತೋಷ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ವಿದೇಶದ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತದತ್ತ ಚಿತ್ತ ನೆಟ್ಟಿದ್ದಾರೆ ಎಂದು ತಿಳಿಸಿದರು.

‘ಎಲ್ಲವೂ ನಮ್ಮದೇ. ಇದೇ ಸತ್ಯ. ಪ್ರಾಪಂಚಿಕ ಸಂಗತಿಗಳಲ್ಲಿ ನಮಗೆ ಯಾವುದೇ ಸಂತಸ ಕಂಡುಕೊಳ್ಳಲು ಸಾಧ್ಯವಿಲ್ಲ. ಅಹಂಕಾರವನ್ನು ತ್ಯಜಿಸಿರಿ. ನೀವು ಪ್ರತ್ಯೇಕವಾಗಿ ಬದುಕಬೇಕಾಗಿಲ್ಲ. ಎಲ್ಲರ ಜತೆ ಒಂದಾಗಿ ಸೌಹಾರ್ದಯುತವಾಗಿ ಬಾಳಿ, ಅಹಿಂಸಾ ಮಾರ್ಗವನ್ನು ಅನುಸರಿಸಿ, ತಾಳ್ಮೆಯಿಂದಿರಿ’ ಎಂದು ಸಲಹೆ ನೀಡಿದರು. 

‘ಸತ್ಯದ ಹುಡುಕಾಟಕ್ಕಾಗಿ ವಿವಿಧ ವರ್ಗದವರು ಭಿನ್ನ ಮಾರ್ಗಗಳನ್ನು ಆರಿಸಿಕೊಳ್ಳುವರು. ನಾವು ಆಯ್ದುಕೊಳ್ಳುವ ಮಾರ್ಗಗಳು ಭಿನ್ನವಾಗಿರಬಹುದು. ಆದರೆ, ಗಮ್ಯಸ್ಥಾನ ಒಂದೇ ಆಗಿರುತ್ತದೆ...  ಜೈನರು, ಸಿಖ್ಖರು– ಹೀಗೆ ನಮ್ಮ ಸಮಾಜದಲ್ಲಿ ಹಲವು ವರ್ಗಗಳಿವೆ. ಈ ದೇಶದ ಜನರಾಗಿದ್ದುಕೊಂಡು ನಾವೆಲ್ಲರೂ ಒಂದೇ ಆಗಿದ್ದೇವೆ. ಎಲ್ಲರೂ ಜತೆಯಾಗಿಯೇ ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಕರೆಕೊಟ್ಟರು. 

ಜನರು ಐಹಿಕ ಸುಖದ ಹಿಂದೆ ಓಡುತ್ತಿದ್ದಾರೆ. ಆದರೂ ಅದು ಅವರಿಗೆ ಸಾಕಾಗುತ್ತಿಲ್ಲ. ‘ಎಲ್ಲರಿಗೂ ಬದುಕಲು ಬೇಕಾಗುವಷ್ಟು ಈ ಜಗತ್ತಿನಲ್ಲಿ ಇದೆ. ಆದರೆ ಎಲ್ಲರ ದುರಾಸೆಯನ್ನು ಈಡೇರಿಸಲು ಜಗತ್ತಿಗೆ ಸಾಧ್ಯವಿಲ್ಲ ಎಂದು ಮಹಾತ್ಮಾ ಗಾಂಧಿ ಹೇಳುತ್ತಿದ್ದರು’ ಎಂದರು.

‘ಇಂದು ದೇಶ ಮತ್ತು ವಿದೇಶಗಳಲ್ಲಿ ಜನರು ಪರಸ್ಪರ ಕಚ್ಚಾಡುತ್ತಿದ್ದಾರೆ. ಒಗ್ಗಟ್ಟಿನಿಂದ ಇರುವ ಪ್ರವೃತ್ತಿ ಇಲ್ಲದಿರುವುದೇ ಇದಕ್ಕೆ ಕಾರಣ. ಅವರು ಪ್ರಾಪಂಚಿಕ ಸುಖವನ್ನಷ್ಟೇ ಬಯಸುವರು. ಆದ್ದರಿಂದಲೇ, ಸತ್ಯದ ಹೆಸರಿನಲ್ಲಿ ಈ ಹಿಂದೆ ಅನೇಕ ರಕ್ತಪಾತಗಳು ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ’ ಎಂದು ತಿಳಿಸಿದರು.

ನಾವು ತಾರತಮ್ಯ ಎಸಗುವುದಿಲ್ಲ ಸಮಾಜವನ್ನು ಒಡೆಯುವುದಿಲ್ಲ. ಇದೇ ಮಾರ್ಗವನ್ನು ಇಡೀ ಜಗತ್ತಿಗೆ ತೋರಿಸುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. 
ಮೋಹನ್‌ ಭಾಗವತ್ ಆರ್‌ಎಸ್‌ಎಸ್‌ ಸರಸಂಘಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT