ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಸನ್‌ರೈಸರ್ಸ್‌ಗೆ ಇಂದು ‘ರಾಯಲ್ಸ್‌’ ಸವಾಲು

ಚೇಸಿಂಗ್ ವೇಳೆ ಎಡವುತ್ತಿರುವ ಕಮಿನ್ಸ್ ಬಳಗ
Published 2 ಮೇ 2024, 0:30 IST
Last Updated 2 ಮೇ 2024, 0:30 IST
ಅಕ್ಷರ ಗಾತ್ರ

ಹೈದರಾಬಾದ್: ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಹಿಂದಿನ ಎರಡು ಪಂದ್ಯಗಳಲ್ಲಿ ಎಡವಟ್ಟು ಮಾಡಿಕೊಂಡಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಗುರುವಾರ ತವರಿನಲ್ಲಿ ನಡೆಯುವ ಪಂದ್ಯದಲ್ಲಿ ಪ್ರಬಲ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ರಾಜಸ್ಥಾನ ರಾಯಲ್ಸ್‌ ಪ್ಲೇ ಆಫ್‌ಗೆ ಈಗಾಗಲೇ ಸ್ಥಾನ ಖಚಿತಪಡಿಸಿಕೊಂಡಿದ್ದು ಉತ್ಸಾಹದಿಂದ ಇದೆ. ಆದರೆ ಸನ್‌ರೈಸರ್ಸ್‌ ಪಾಲಿಗೆ ಪ್ಲೇ ಆಫ್‌ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದು.

ಕೆಲವೇ ದಿನಗಳ ಹಿಂದೆ ಅಗ್ರ ನಾಲ್ಕು ಮಂದಿ ಆಟಗಾರರ ಅಬ್ಬರದ ಆಟದಿಂದ ಅಮೋಘ ಫಾರ್ಮ್‌ನಲ್ಲಿದ್ದ ಸನ್‌ರೈಸರ್ಸ್‌ ಬೆನ್ನು ಬೆನ್ನಿಗೆ ಎರಡು ಸೋಲು ಕಂಡು ಪಾಯಿಂಟ್‌ ಪಟ್ಟಿಯಲ್ಲಿ ‘ಅಗ್ರ ನಾಲ್ಕರಿಂದ’ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ‘ಚೇಸ್‌’ ಮಾಡುವ ಸಂದರ್ಭದಲ್ಲಿ ತಂಡದ ದೌರ್ಬಲ್ಯ ಜಾಹೀರಾಗಿದೆ.

ಐದು ಗೆಲುವು, ನಾಲ್ಕು ಸೋಲು ಕಂಡಿರುವ ಸನ್‌ರೈಸರ್ಸ್ ಈಗ 10 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನಕ್ಕೆ ಸರಿದಿದೆ. ಪ್ಯಾಟ್ ಕಮಿನ್ಸ್ ಬಳಗದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಮೊತ್ತ ಬೆನ್ನಟ್ಟುವ ವೇಳೆ ವಿಫಲರಾಗುತ್ತಿದ್ದು, ಮುಖ್ಯ ಕೋಚ್‌ ಡೇನಿಯಲ್ ವೆಟೋರಿ ಚಿಂತೆಗೆ ಕಾರಣವಾಗಿದೆ. ಮೊದಲು ಆಡುವಾಗ ಮೂರು ಸಲ 250ಕ್ಕೂ ಹೆಚ್ಚು ಮೊತ್ತ ಕಲೆಹಾಕಿರುವ ಸನ್‌ರೈಸರ್ಸ್‌, ಎರಡನೆಯದಾಗಿ ಆಡುವ ವೇಳೆ 200ರ ಗುರಿದಾಟಲು ಒಮ್ಮೆಯೂ ಯಶಸ್ವಿಯಾಗಿಲ್ಲ.

‘ಗುರಿ ಬೆನ್ನಟ್ಟುವಲ್ಲೂ ತಂಡ ಶಕ್ತವಾಗಿದೆ. ಆದರೆ ಇನ್ನೂ ಯಾಕೊ ಯಶಸ್ಸು ಪಡೆದಿಲ್ಲ. ನಾವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ’ ಎಂದು ಸಿಎಸ್‌ಕೆಗೆ ಸೋತ ನಂತರ ಪ್ಯಾಟ್ ಕಮಿನ್ಸ್‌ ಹೇಳಿದ್ದರು.

ಹೈದರಾಬಾದ್ ತಂಡದ ಯಶಸ್ಸು ಟ್ರಾವಿಸ್‌ ಹೆಡ್‌ ಮತ್ತು ಅಭಿಷೇಕ್ ಶರ್ಮಾ ಅವರಿಂದ ಸಿಗುವ ಆರಂಭದ ಮೇಲೆ ಅವಲಂಬಿತವಾಗಿದೆ. ಅವರಿಬ್ಬರು ಕೈಕೊಟ್ಟ ವೇಳೆ ತಂಡ ಪರದಾಡಿದೆ.

ಇನ್ನೊಂದು ಕಡೆ ರಾಜಸ್ಥಾನ್ ರಾಯಲ್ಸ್ ಯಶಸ್ಸಿನ ಓಟದಲ್ಲಿದೆ. ತಂಡ 16 ಪಾಯಿಂಟ್ಸ್‌ ಕಲೆಹಾಕಿದ್ದು, ಎರಡನೇ ಸ್ಥಾನದಲ್ಲಿರುವ ಕೋಲ್ಕತ್ತಕ್ಕಿಂತ ನಾಲ್ಕು ಪಾಯಿಂಟ್ಸ್‌ ಮುಂದೆಯಿದೆ. ಜೋಸ್ ಬಟ್ಲರ್‌, ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಉತ್ತಮ ಲಯದಲ್ಲಿದ್ದಾರೆ. ಕೆಲ ಸಂದರ್ಭಗಳಲ್ಲಿ ರಿಯಾನ್ ಪರಾಗ್, ಶಿಮ್ರೊನ್ ಹೆಟ್ಮೆಯರ್‌ ಮತ್ತು ಧ್ರುವ್ ಜುರೇಲ್ ಕೂಡ ಗೆಲುವಿಗೆ ಕೊಡುಗೆ ನೀಡಿದ್ದಾರೆ.

ಯಜುವೇಂದ್ರ ಚಾಹಲ್, ಟ್ರೆಂಟ್‌ ಬೌಲ್ಟ್‌, ಆವೇಶ್ ಖಾನ್ ಮತ್ತು ಸಂದೀಪ್‌ ಶರ್ಮಾ ಅವರಿಂದ ತಂಡ ದಾಳಿಯಲ್ಲೂ ವೈವಿಧ್ಯ ಹೊಂದಿದೆ.

ಪಂದ್ಯ ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್ ಮತ್ತು ಜಿಯೊ ಸಿನಿಮಾ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT