ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ‘ಸುಪ್ರೀಂ’ಗೆ ಮರುಪರಿಶೀಲನಾ ಅರ್ಜಿ: ಫಡ್ನವೀಸ್ ಸಲಹೆ

Last Updated 14 ಮೇ 2021, 15:52 IST
ಅಕ್ಷರ ಗಾತ್ರ

ನಾಗ್ಪುರ: ಮೀಸಲಾತಿಯ ಶೇ 50ರಷ್ಟು ಮಿತಿಯನ್ನು ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಬಿಜೆಪಿಯ ಮುಖಂಡ ದೇವೇಂದ್ರ ಫಡ್ನವೀಸ್ ಶುಕ್ರವಾರ ಹೇಳಿದ್ದಾರೆ.

ನಾಗ್ಪುರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು ಮರಾಠಾ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಸುಮ್ಮನೆ ಹಾದುಹೋಗಿದೆ ಅಷ್ಟೇ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರವು ಮೀಸಲಾತಿ ವಿಚಾರದಲ್ಲಿ ಈಗಾಗಲೇ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ. ಆದರೆ, ಮಹಾರಾಷ್ಟ್ರ ಸರ್ಕಾರವು ಇನ್ನೂ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿಲ್ಲ’ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

‘ಉದ್ಯೋಗ ಮತ್ತು ಶಿಕ್ಷಣದಲ್ಲಿನ ಮೀಸಲಾತಿಗೆ ಇತರ ಹಿಂದುಳಿದ ವರ್ಗದವರನ್ನು (ಒಬಿಸಿ) ಗುರುತಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ’ ಎಂದು ಇದೇ ತಿಂಗಳ 5ರಂದು ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಮರಾಠಾ ಸಮುದಾಯದವರಿಗೆ ನೀಡಿದ್ದ ಮಿಸಲಾತಿಯನ್ನು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ನ್ಯಾಯಪೀಠ ರದ್ದುಪಡಿಸಿತ್ತು. ಅಲ್ಲದೆ ಹಿಂದುಳಿದ ವರ್ಗಗಳನ್ನು ಗುರುತಿಸುವ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಪೀಠ ಭಿನ್ನ ತೀರ್ಪು ನೀಡಿತ್ತು. ಮೂವರು ನ್ಯಾಯಮೂರ್ತಿಗಳು ರಾಜ್ಯಗಳಿಗೆ ಈ ಅಧಿಕಾರ ಇಲ್ಲ ಎಂದು ಹೇಳಿದ್ದರೆ, ಇಬ್ಬರು ನ್ಯಾಯಮೂರ್ತಿಗಳು ರಾಜ್ಯಗಳಿಗೆ ಈ ಅಧಿಕಾರ ಇದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT