ನಾಯಿಗಳಿಗೂ ಮಾಂಸ ಹಾಕಿದ್ದ...
ಬಾಗಿಲು ಒಡೆದು ಫ್ಲ್ಯಾಟ್‌ನ ಅಡುಗೆ ಮನೆಗೆ ತೆರಳಿದ ಪೊಲೀಸರು ಅಲ್ಲಿನ ಚಿತ್ರಣ ಕಂಡು ಬೆಚ್ಚಿಬಿದ್ದಿದ್ದಾರೆ. ಕುಕ್ಕರ್‌ನಲ್ಲಿ ಕತ್ತರಿಸಿದ್ದ ಅಂಗಾಂಗಗಳನ್ನು ಹಾಕಿ ಬೇಯಿಸಿದ್ದರೆ, ಮಹಿಳೆಯ ಕೂದಲು ನೆಲದ ಮೇಲೆ ಚೆಲ್ಲಾಡಿತ್ತು. ಅಲ್ಲದೆ, ಕೆಲವು ಪಾತ್ರೆಗಳಲ್ಲೂ ಮಾಂಸವನ್ನು ತುಂಬಿಡಲಾಗಿತ್ತು. ಭಾಗಶಃ ಬೇಯಿಸಿದ್ದ ಮೂಳೆಗಳು ಹಾಗೂ ಮಹಿಳೆ ದೇಹದ ಮಾಂಸವನ್ನು ಪಾತ್ರೆ ತೊಳೆಯುವ ಸಿಂಕ್‌ನಲ್ಲಿ ಇಡಲಾಗಿತ್ತು. ಬಕೆಟ್‌ಗಳು, ಪ್ಲಾಸ್ಟಿಕ್ ಟಬ್‌ನಲ್ಲಿಯೂ ಮಾಂಸ ತುಂಬಿಡಲಾಗಿತ್ತು. ಆರೋಪಿ ಸಾನೆಯು ಒಂದೆರಡು ದಿನಗಳಿಂದ ಬೀದಿ ನಾಯಿಗಳಿಗೆ ಮಾಂಸ ತಿನ್ನಿಸುತ್ತಿದ್ದನ್ನು ತಾವು ಗಮನಿಸಿದ್ದಾಗಿ ನೆರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿಂದೆಂದೂ ಆತ ನಾಯಿಗಳಿಗೆ ಮಾಂಸ ತಿನ್ನಿಸಿದ್ದನ್ನು ನೋಡಿರಲಿಲ್ಲ ಎಂದು ತಿಳಿಸಿದ್ದಾರೆ. ಮೊದಲಿಗೆ ಮನೆಯಿಂದ ವಾಸನೆ ಬರುತ್ತಿರುವ ಗಮನೆಳೆದಾಗ ಆರೋಪಿಯು, ವಾಸನೆ ತಗ್ಗುವಂತೆ ರೂಮ್ ಫ್ರೆಷನರ್ ಸಿಂಪಡಿಸಿ ತೆರಳಿದ್ದ ಎಂದು ಸಮುಚ್ಚಯದ ನಿವಾಸಿ ವಿಕಾಸ್ ಶ್ರೀವಾತ್ಸವ ಹೇಳಿದರು. ಜೋಡಿಯು ಮೂರು ವರ್ಷದಿಂದ ಬಾಡಿಗೆಗೆ ಇದ್ದು, ಬಹುತೇಕ ಒಳಗೆ ಇರುತ್ತಿದ್ದರು. ಅಕ್ಕಪಕ್ಕದವರ ಜೊತೆಗೆ ಬೆರೆಯುತ್ತಿರಲಿಲ್ಲ. ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರಲಿಲ್ಲ. ಏನು ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿಯೂ ಇರಲಿಲ್ಲ ಎಂದು ತಿಳಿಸಿದರು. ‘ಫ್ಲ್ಯಾಟ್‌ನಿಂದ ಸಂಗ್ರಹಿಸಲಾಗಿರುವ ಅಂಗಾಂಗಗಳ ಮಾದರಿಯನ್ನು ಜೆ.ಜೆ. ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಡಿಸಿಪಿ ಜಯಂತ್ ಬಜ್‌ಬಲೆ ತಿಳಿಸಿದ್ದಾರೆ.