ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಸಭೆಯಲ್ಲಿ ಬಹುಮತ ಗಳಿಸುವತ್ತ ಎನ್‌ಡಿಎ

Published 22 ಆಗಸ್ಟ್ 2024, 0:55 IST
Last Updated 22 ಆಗಸ್ಟ್ 2024, 0:55 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭೆಯ 12 ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ 11 ಸ್ಥಾನಗಳನ್ನು ಗೆದ್ದುಕೊಳ್ಳುವ ಹುರುಪಿನಲ್ಲಿ ಇದೆ. ಇಷ್ಟು ಸ್ಥಾನಗಳನ್ನು ಗೆದ್ದುಕೊಂಡರೆ, ಎನ್‌ಡಿಎ ಮೈತ್ರಿಕೂಟವು ಮೇಲ್ಮನೆಯಲ್ಲಿ ಬಹುಮತ ಪಡೆಯಲಿದೆ.

12 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ತೆಲಂಗಾಣದ ಒಂದು ಸ್ಥಾನವನ್ನು ಮಾತ್ರ ಗೆದ್ದುಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಅಲ್ಲಿ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಕಣದಲ್ಲಿದ್ದಾರೆ. ಬಿಜೆಪಿಯು ಒಂಬತ್ತು ಸ್ಥಾನಗಳನ್ನು ಗೆಲ್ಲಲಿದೆ. ಎನ್‌ಡಿಎ ಕೂಟದ ಪಕ್ಷಗಳಾದ ಎನ್‌ಸಿಪಿ ಹಾಗೂ ‘ರಾಷ್ಟ್ರೀಯ ಲೋಕ ಮಂಚ್’ ತಲಾ ಒಂದು ಸ್ಥಾನ ಗೆಲ್ಲಲಿವೆ.

ಈಗ ಎನ್‌ಡಿಎ ಮೈತ್ರಿಕೂಟವು ಮೇಲ್ಮನೆಯಲ್ಲಿ 110 ಸದಸ್ಯರ ಬೆಂಬಲವನ್ನು ಹೊಂದಿದೆ. ಇದರಲ್ಲಿ ಆರು ಮಂದಿ ನಾಮನಿರ್ದೇಶಿತ ಸದಸ್ಯರು ಹಾಗೂ ಹರಿಯಾಣದ ಒಬ್ಬ ಪಕ್ಷೇತರ ಸದಸ್ಯರೂ ಸೇರಿದ್ದಾರೆ. ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಘೋಷಣೆಯಾದ ನಂತರ ಈ ಸಂಖ್ಯೆಯು 121ಕ್ಕೆ ಏರಲಿದೆ. ಈಗ ರಾಜ್ಯಸಭೆಯ ಒಟ್ಟು ಸದಸ್ಯಬಲ 237. ಎನ್‌ಡಿಎ ಮೈತ್ರಿಕೂಟದ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ನಾಮನಿರ್ದೇಶನದ ಮೂಲಕ ನೇಮಕ ಮಾಡುವ ಸ್ಥಾನಗಳನ್ನು ಸರ್ಕಾರವು ಭರ್ತಿ ಮಾಡಿದಾಗ, ರಾಜ್ಯಸಭೆಯಲ್ಲಿ ಎನ್‌ಡಿಎ ಸದಸ್ಯ ಬಲವು 125ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. ಅಂದರೆ, ಇದು ರಾಜ್ಯಸಭೆಯು ಪೂರ್ಣ ಸದಸ್ಯಬಲದೊಂದಿಗೆ ಕಾರ್ಯನಿರ್ವಹಿಸುವಾಗ ಬಹುಮತಕ್ಕೆ ಬೇಕಿರುವ ಕನಿಷ್ಠ ಸ್ಥಾನಕ್ಕಿಂತ ಎರಡು ಸ್ಥಾನ ಹೆಚ್ಚು. ಎಂಟು ಮಂದಿ ನಾಮನಿರ್ದೇಶಿತ ಸದಸ್ಯರ ಪೈಕಿ ಇಬ್ಬರು ಬಿಜೆಪಿ ಸೇರಿದ್ದಾರೆ, ಇನ್ನುಳಿದ ಆರು ಮಂದಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಿಂದ ಆಯ್ಕೆ ನಡೆಯುವ ನಾಲ್ಕು ಸ್ಥಾನಗಳು 2021ರ ಫೆಬ್ರುವರಿಯಿಂದ ಖಾಲಿ ಇವೆ. ಅಕ್ಟೋಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ರಚನೆ ಆದ ನಂತರದಲ್ಲಿ, ಈ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣೆ ನಡೆದ ನಂತರದಲ್ಲಿ ಬಿಜೆಪಿಯ ಸದಸ್ಯರ ಸಂಖ್ಯೆ 96, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಸಂಖ್ಯೆ 27 ಆಗಲಿದೆ. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸದಸ್ಯಬಲವು ಈಗ 88. ಬಿಜೆಡಿ ಪಕ್ಷದ ಎಂಟು ಮಂದಿಯ ಬೆಂಬಲ ಕೂಡ ಕೆಲವು ಸಂದರ್ಭಗಳಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಸಿಗುತ್ತದೆ.

ವೈಎಸ್‌ಆರ್ ಕಾಂಗ್ರೆಸ್ (11 ಸದಸ್ಯರು), ಎಐಎಡಿಎಂಕೆ (4) ಮತ್ತು ಬಿಆರ್‌ಎಸ್‌ (4) ಯಾವುದೇ ಮೈತ್ರಿಕೂಟದ ಜೊತೆ ಗುರುತಿಸಿಕೊಂಡಿಲ್ಲ. ಆದರೆ ಇವು ಸರ್ಕಾರದ ಪರ ಒಲವು ಹೊಂದಿವೆ. ಎಐಎಡಿಎಂಕೆ ಪಕ್ಷವು ಮೈತ್ರಿಕೂಟದಿಂದ ಹೊರನಡೆದ ನಂತರ, ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ಸೋತ ನಂತರ, ಆಡಳಿತಾರೂಢ ಬಿಜೆಪಿಗೆ ರಾಜ್ಯಸಭೆಯಲ್ಲಿ ಸಂಖ್ಯಾಬಲದ ಸಮಸ್ಯೆ ಆಗುತ್ತಿದೆ.

ಹತ್ತು ಮಂದಿ ರಾಜ್ಯಸಭಾ ಸದಸ್ಯರು ಲೋಕಸಭೆಗೆ ಆಯ್ಕೆಯಾದ ಪರಿಣಾಮ, ಈ ಸ್ಥಾನಗಳಿಗೆ ಉಪಚುನಾವಣೆ ಅನಿವಾರ್ಯವಾಯಿತು. ಹಾಗೆಯೇ, ಬಿಆರ್‌ಎಸ್‌ನ ಕೆ. ಕೇಶವ ರಾವ್ ಮತ್ತು ಬಿಜೆಡಿ ಪಕ್ಷದ ಮಮತಾ ಮೊಹಾಂತ ಅವರು ಪಕ್ಷ ತೊರೆಯುವ ಮೊದಲು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT