ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಗಡಿಯಲ್ಲಿ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ

ಭಾರತ, ಮ್ಯಾನ್ಮಾರ್‌ ಸೇನೆಯಿಂದ ’ಆಪರೇಷನ್‌ ಸನ್‌ರೈಸ್‌‘
Last Updated 16 ಜೂನ್ 2019, 20:36 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಈಶಾನ್ಯ ಗಡಿಯಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆಗಳ ವಿರುದ್ಧ ಭಾರತ ಮತ್ತು ಮ್ಯಾನ್ಮಾರ್‌ ಸೇನೆ ಜಂಟಿ ಕಾರ್ಯಾಚರಣೆ ನಡೆಸಿವೆ.

’ಆಪರೇಷನ್‌ ಸನ್‌ರೈಸ್‌‘ ಹೆಸರಿನಡಿ ನಡೆಸಿದ ಈ ಕಾರ್ಯಾಚರಣೆ ಮೇ 16ರಿಂದ ಮೂರು ವಾರಗಳ ಕಾಲ ನಡೆದಿದ್ದು, ಮಣಿಪುರ, ನಾಗಾಲ್ಯಾಂಡ್‌ ಹಾಗೂ ಅಸ್ಸಾಂನಲ್ಲಿ 70ಕ್ಕೂ ಅಧಿಕ ಉಗ್ರರನ್ನು ಬಂಧಿಸಲಾಗಿದ್ದರೆ, ಕೆಲವು ಉಗ್ರರ ಶಿಬಿರಗಳನ್ನು ಈ ಜಂಟಿ ಕಾರ್ಯಾಚರಣೆಯಲ್ಲಿ ನಾಶ ಮಾಡಲಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಮೂರು ತಿಂಗಳ ಹಿಂದೆ ’ಆಪರೇಷನ್‌ ಸನ್‌ರೈಸ್‌‘ ಕಾರ್ಯಾಚರಣೆಯ ಮೊದಲ ಹಂತ ನಡೆದಿತ್ತು. ಇತ್ತೀಚೆಗೆ ನಡೆದ ಎರಡನೇ ಹಂತದ ಕಾರ್ಯಾಚರಣೆಯಲ್ಲಿ ಕಮ್ತಾಪುರ ಲಿಬರೇಷನ್‌ ಆರ್ಗನೈಜೇಶನ್‌ (ಕೆಎಲ್‌ಒ), ಎನ್‌ಎಸ್‌ಸಿಎನ್‌ (ಖಪ್ಲಾಂಗ್‌), ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸ್ಸಾಂ (ಐ) ಹಾಗೂ ನ್ಯಾಷನಲ್‌ ಡೆಮಾಕ್ರೆಟಿಕ್ ಫ್ರಂಟ್‌ ಆಫ್‌ ಬೋರೊಲ್ಯಾಂಡ್‌ಗೆ (ಎನ್‌ಡಿಎಫ್‌ಬಿ) ಸೇರಿದ ಶಿಬಿರಗಳನ್ನು ನಾಶಪಡಿಸಲಾಗಿದೆ.

ಗಡಿಗುಂಟ ಉಗ್ರರ ಚಟುವಟಿಕೆ ಇನ್ನೂ ನಡೆಯುತ್ತಿರುವ ಕುರಿತು ಗುಪ್ತಚರ ಇಲಾಖೆ ನೀಡುವ ಮಾಹಿತಿಯನ್ನು ಆಧರಿಸಿ ಮೂರನೇ ಹಂತದ ಜಂಟಿ ಕಾರ್ಯಾಚರಣೆಯನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಭದ್ರತಾ ಪಡೆಗಳ ಪ್ರಕಾರ ಈಶಾನ್ಯ ಗಡಿ ಭಾಗದಲ್ಲಿ 50ಕ್ಕೂ ಹೆಚ್ಚು ಉಗ್ರಗಾಮಿಗಳ ಶಿಬಿರಗಳಿವೆ ೆಎಂದು ಸೇನಾ ಮೂಲಗಳು ತಿಳಿಸಿವೆ.

ಮಹತ್ವದ ಕಾರ್ಯಾಚರಣೆ: ವ್ಯೂಹಾತ್ಮಕ ದೃಷ್ಟಿಯಿಂದ ಮ್ಯಾನ್ಮಾರ್‌ ಪ್ರಮುಖ ನೆರೆ ರಾಷ್ಟ್ರವಾಗಿದ್ದು, ಭಾರತದ ಈಶಾನ್ಯ ರಾಜ್ಯಗಳೊಂದಿಗೆ 1,640 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಳ್ಳುತ್ತದೆ.

ಈ ರಾಜ್ಯಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ನಿರತ ಸಂಘಟನೆಗಳನ್ನು ಮಟ್ಟ ಹಾಕುವ ಸಲುವಾಗಿ ಮ್ಯಾನ್ಮಾರ್‌ ಜೊತೆ 2008ರಲ್ಲಿ ಭಾರತ ಒಪ್ಪಂದಕ್ಕೆ ಸಹಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT