ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿಯಾದ ತಾಪಮಾನ; ಬಾಧಿತರಾದ 500 ಕೋಟಿ ಜನ

ಭಾರತದಲ್ಲೂ ಸಂಕಷ್ಟಕ್ಕೆ ಸಿಲುಕಿದ 65 ಕೋಟಿ ಜನರು: ವರದಿ
Published 29 ಜೂನ್ 2024, 0:25 IST
Last Updated 29 ಜೂನ್ 2024, 0:25 IST
ಅಕ್ಷರ ಗಾತ್ರ

ನವದೆಹಲಿ: ಭಾರತದ 61.9 ಕೋಟಿ ಸೇರಿದಂತೆ ಜಾಗತಿಕವಾಗಿ 500 ಕೋಟಿ ಜನರು ಜೂನ್‌ ತಿಂಗಳ 9 ದಿನಗಳ ಕಾಲ ಜಾಗತಿಕ ಹವಾಮಾನ ಬದಲಾವಣೆಯಯಿಂದ ಉಂಟಾದ ತೀವ್ರ ಶಾಖವನ್ನು ಅನುಭವಿಸಿದ್ದಾರೆ ಎಂದು ಅಮೆರಿಕ ಮೂಲದ ಸ್ವತಂತ್ರ ಗುಂಪಿನ ವಿಜ್ಞಾನಿಗಳ ತಂಡವು ನಡೆಸಿದ ಅಧ್ಯಯನದಲ್ಲಿ ತಿಳಿಸಿದೆ.

‘ಚೀನಾದ 57.9 ಕೋಟಿ, ಇಂಡೋನೇಷ್ಯಾದ 23.1 ಕೋಟಿ, ನೈಜೀರಿಯಾದ 20.6 ಕೋಟಿ, ಬ್ರೆಜಿಲ್‌ನ 17.6 ಕೋಟಿ, ಬಾಂಗ್ಲಾದೇಶದ 17.1 ಕೋಟಿ, ಅಮೆರಿಕದ 16.5 ಕೋಟಿ, ಯುರೋಪ್‌ನ 15.2 ಕೋಟಿ, ಮೆಕ್ಸಿಕೋದ 12.3 ಕೋಟಿ, ಇಥೋಪಿಯಾದ 12.1 ಕೋಟಿ, ಈಜಿಪ್ಟ್‌ನ 10.3 ಕೋಟಿ ಮಂದಿ ಜೂನ್‌ನಲ್ಲಿ ಉಂಟಾದ ಅತಿಯಾದ ಬಿಸಿಲಿನಿಂದ ಉಂಟಾದ ಪರಿಣಾಮಕ್ಕೆ ತುತ್ತಾಗಿದ್ದಾರೆ’ ಎಂದು ಹವಾಮಾನ ಕೇಂದ್ರದ ವರದಿ ತಿಳಿಸಿದೆ.

‘ವಿಶ್ವದ ಶೇಕಡ 60ರಷ್ಟು ಜನರು ಬಿಸಿಲಿನ ಪರಿಣಾಮ ಎದುರಿಸಿದ್ದು, ಜೂನ್‌ 16ರಿಂದ 24ರವರೆಗೆ ಹವಾಮಾನ ತೀವ್ರವಾಗಿ ಬದಲಾಗಿತ್ತು’ ಎಂದು ತಿಳಿಸಿದೆ.

‘ಒಂದು ಶತಮಾನಕ್ಕೂ ಹೆಚ್ಚು ಕಾಲ ಕಲ್ಲಿದ್ದಲು, ತೈಲ, ನೈಸರ್ಗಿಕ ಇಂಧನವನ್ನು ಅತೀ ಹೆಚ್ಚು ಸುಡುತ್ತಿರುವುದು ಇಡೀ ಜಗತ್ತಿಗೆ ಅಪಾಯಕಾರಿಯಾಗಿದೆ. ವಿಶ್ವದಲ್ಲೇ ಬೇಸಿಗೆ ಸಂದರ್ಭದಲ್ಲಿ ಬಿಸಿಗಾಳಿ ಸಾಮಾನ್ಯವಾಗಿದ್ದು, ಇಂಗಾಲದ ಮಾಲಿನ್ಯವೂ ನಿಲ್ಲುವವರೆಗೂ ಈ ಪರಿಸ್ಥಿತಿ ಇರಲಿದೆ’ ಎಂದು ಹವಾಮಾನ ಕೇಂದ್ರದ ಮುಖ್ಯ ಕಾರ್ಯಕ್ರಮ ಅಧಿಕಾರಿ ಆ್ಯಂಡ್ರ್ಯೂ ಪರ್ಶಿಂಗ್‌ ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ನಡೆಯುವ ತಾಪಮಾನ ಬದಲಾವಣೆಗಳನ್ನು ಹವಾಮಾನ ಬದಲಾವಣೆ ಸೂಚ್ಯಂಕ (ಸಿಎಸ್‌ಐ)ದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. 

‘ಜೂನ್‌ 16ರಿಂದ 24ರವರೆಗೆ ಸಿಎಸ್‌ಐನ ಪ್ರಮಾಣವು ಮೂರರಷ್ಟಿತ್ತು. ಇದು ಸಾಮಾನ್ಯ ದಿನಗಳಿಗಿಂತಲೂ ಬಿಸಿಲಿನ ಪ್ರಖರತೆ ಮೂರು ಪಟ್ಟು ಹೆಚ್ಚಾಗಿತ್ತು’ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಈ ವರ್ಷ ಭಾರತವು ಇತಿಹಾಸದಲ್ಲೇ ಅತಿಯಾದ ಬಿಸಿಲು ದಾಖಲಾಗಿದ್ದು, 40 ಸಾವಿರ ಬಿಸಿಲಿನ ಆಘಾತದ ಪ್ರಕರಣಗಳು ವರದಿಯಾಗಿತ್ತು. ಈ ಕಾರಣದಿಂದ 100 ಮಂದಿ ಸಾವನ್ನಪ್ಪಿದ್ದರು. ನೀರಿನ ತೀವ್ರ ಸಮಸ್ಯೆ ಜೊತೆಗೆ ಹೆಚ್ಚಿನ ವಿದ್ಯುತ್‌ ಬೇಡಿಕೆಯಿಂದ ಪವರ್‌ ಗ್ರಿಡ್‌ಗಳ ಮೇಲೂ ಅತೀಯಾದ ಒತ್ತಡ ಉಂಟಾಗಿತ್ತು.

ಏಪ್ರಿಲ್‌–ಜೂನ್‌ ತಿಂಗಳ ಅವಧಿಯಲ್ಲಿ ಶಾಖದ ತೀವ್ರ ಅಲೆಗಳ ಪ್ರಮಾಣವು ದುಪ್ಪಟ್ಟು ದಾಖಲಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದ ವರದಿಯಲ್ಲಿ ದೃಢಪಟ್ಟಿತ್ತು. ರಾಜಸ್ಥಾನದಲ್ಲಿ ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ದೇಶದ ವಿವಿಧ ನಗರಗಳಲ್ಲಿಯೂ ರಾತ್ರಿ ವೇಳೆ 35 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು ಎಂದು ತಿಳಿಸಿದೆ.

‘ದೆಹಲಿಯಲ್ಲಿ ಮೇ 13ರಿಂದ ಸತತ 40 ದಿನಗಳ ಕಾಲ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಬಿಸಿಲಿನ ಹೊಡೆತಕ್ಕೆ ಈ ವರ್ಷ 60 ಮಂದಿ  ಸಾವನ್ನಪ್ಪಿದ್ದಾರೆ’ ಎಂದು ಮಾಧ್ಯಮದ ವರದಿಗಳು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT