ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಪತ್ರಿಕೋದ್ಯಮ ಹತ್ತಿಕ್ಕುವ ಯತ್ನ: ಆರೋಪಗಳನ್ನು ತಳ್ಳಿಹಾಕಿದ ನ್ಯೂಸ್‌ಕ್ಲಿಕ್

Published 7 ಅಕ್ಟೋಬರ್ 2023, 15:48 IST
Last Updated 7 ಅಕ್ಟೋಬರ್ 2023, 15:48 IST
ಅಕ್ಷರ ಗಾತ್ರ

ನವದೆಹಲಿ: ‘ನ್ಯೂಸ್‌ಕ್ಲಿಕ್‌ ಸುದ್ದಿ ಪೋರ್ಟಲ್‌ ವಿರುದ್ಧ ದೆಹಲಿ ಪೋಲೀಸರು ತೆಗೆದುಕೊಂಡಿರುವ ಕ್ರಮವು ಭಾರತದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವನ್ನು ನಿರ್ಬಂಧಿಸುವ ದಿಸೆಯಲ್ಲಿ ನಡೆಸುತ್ತಿರುವ ನಾಚಿಕೆಗೇಡಿನ ಯತ್ನವಲ್ಲದೇ ಬೇರೇನಲ್ಲ’ ಎಂದು ಪೋರ್ಟಲ್‌ ಹೇಳಿದೆ. ದೆಹಲಿ ಪೊಲೀಸರು ಎಫ್‌ಐಆರ್‌ನಲ್ಲಿ ನಮೂದಿಸಿರುವ ಆರೋಪಗಳ ಕುರಿತು ನ್ಯೂಸ್‌ಕ್ಲಿಕ್‌ ಹೀಗೆ ಪ್ರತಿಕ್ರಿಯಿಸಿದೆ.

ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಹಾಗೂ ದೇಶದ ವಿರುದ್ಧ ಅವಿಶ್ವಾಸ ಮೂಡಿಸಲು ಚೀನಾದಿಂದ ಭಾರಿ ಪ್ರಮಾಣದಲ್ಲಿ ಹಣ ಸಂದಾಯವಾಗಿದೆ ಎಂದು  ನ್ಯೂಸ್‌ಕ್ಲಿಕ್‌ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನಲ್ಲಿ ದೆಹಲಿ ಪೊಲೀಸರು ಹೇಳಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಬಳಸುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ನ್ಯೂಸ್‌ಕ್ಲಿಕ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಆರೋಪಗಳನ್ನು ತಳ್ಳಿಹಾಕಿರುವ ನ್ಯೂಸ್‌ಕ್ಲಿಕ್‌ ‘ಎಕ್ಸ್‌’ನಲ್ಲಿ ಹೇಳಿಕೆ ಪ್ರಕಟಿಸಿದೆ. ‘ಚೀನಾ ಅಥವಾ ಚೀನಾದ ಸಂಸ್ಥೆಗಳ ಮೂಲಕ ಯಾವುದೇ ರೀತಿಯ ಬಂಡವಾಳ ಅಥವಾ ನಿರ್ದೇಶನ ಪಡೆದಿಲ್ಲ. ಹಿಂಸಾಚಾರ, ವಿಭಜನೆ ಅಥವಾ ಯಾವುದೇ ರೀತಿಯ ಕಾನೂನು ವಿರೋಧಿ ಕೃತ್ಯದಲ್ಲಿ ತೊಡಗಿಲ್ಲ. ಪೋರ್ಟಲ್‌ನಲ್ಲಿ ಪ್ರಕಟಣೆಯಾಗಿರುವ ಸುದ್ದಿಗಳು ಆನ್‌ಲೈನ್‌ನಲ್ಲಿ ಮುಕ್ತವಾಗಿ ಸಿಗುತ್ತವೆ. ಎಫ್‌ಐಆರ್‌ ಕುರಿತು ನ್ಯೂಸ್‌ಕ್ಲಿಕ್‌ ಮುಂದಿಟ್ಟಿರುವ ವಾದದಲ್ಲಿಯ ಸತ್ಯಾಸತ್ಯತೆಯನ್ನು ಅರಿತುಕೊಳ್ಳಲು ಅಷ್ಟು ಸಾಕು’ ಎಂದಿದೆ.

‘ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನ್ಯೂಸ್‌ಕ್ಲಿಕ್‌ಗೆ ಸಂಪೂರ್ಣ ಭರವಸೆ ಇದೆ. ಜೊತೆಗೆ, ಪೋರ್ಟಲ್‌ನ ಧೋರಣೆಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದಿದೆ.

ಎಫ್‌ಐಆರ್‌ನಲ್ಲಿ ಮಾಡಲಾಗಿರುವ ಆರೋಪಗಳು ನಕಲಿ ಮತ್ತು ಸಮರ್ಥನೀಯವಲ್ಲ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಜಾರಿ ನಿರ್ದೇಶನಾಲಯ, ಆರ್ಥಿಕ ಅಪರಾಧಗಳ ವಿಭಾಗ, ದೆಹಲಿ ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆಗಳು ತನಿಖೆ ನಡೆಸಿ, ಈ ರೀತಿಯ ಆರೋಪಗಳನ್ನು ಆಗಾಗ ಮಾಡಲಾಗುತ್ತದೆ. ಕಳೆದ ಮೂರು ವರ್ಷಗಳಿಂದ ತನಿಖೆಗಳು ನಡೆಯುತ್ತಿದ್ದರೂ ಆರೋಪಪಟ್ಟಿ ಸಲ್ಲಿಸಲಾಗಿಲ್ಲ. ಈ ಎಲ್ಲಾ ತನಿಖೆಗಳಲ್ಲೂ ನ್ಯೂಸ್‌ಕ್ಲಿಕ್‌ ಪ್ರಧಾನ ಸಂಪಾದಕ ಪ್ರಬೀರ್‌ ಪುರಕಾಯಸ್ಥ ಅವರಿಗೆ ಮಧ್ಯಂತರ ರಕ್ಷಣೆ ದೊರಕಿತ್ತು. ಈ ಬಾರಿ ರಕ್ಷಣೆ ಸಿಗಬಾರದು ಎಂಬ ಉದ್ದೇಶದಿಂದ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಅಕ್ರಮ ಬಂಧನಗಳನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. 

ಪ್ರಬೀರ್‌ ಮತ್ತು ಅಮಿತ್‌ ಅವರನ್ನು ಪೊಲೀಸರು ಮಂಗಳವಾರವೇ ಬಂಧಿಸಿತ್ತು. ಆದರೆ ಎಫ್‌ಐಆರ್‌ ಪ್ರತಿಯನ್ನು ಅವರಿಗೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಪೋರ್ಟಲ್‌, ಪಟಿಯಾಲ ಹೌಸ್‌ನ ವಿಶೇಷ ನ್ಯಾಯಾಧೀಶರು ನಿರ್ದೇಶನ ನೀಡಿದ ಬಳಿಕವೇ ಪ್ರಬೀರ್‌ ಅವರಿಗೆ ಎಫ್‌ಐಆರ್‌ ಪ್ರತಿಯನ್ನು ಗುರುವಾರ ರಾತ್ರಿ ನೀಡಲಾಗಿದೆ. ಎಫ್‌ಐಆರ್‌ ರದ್ದುಪಡಿಸುವಂತೆ ಮತ್ತು ಪ್ರಬೀರ್‌ ಮತ್ತು ಸಂಸ್ಥೆಯ ಎಚ್‌.ಆರ್‌. ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಅಕ್ರಮ ಬಂಧನದಿಂದ ಬಿಡುಗಡೆಗೊಳಿಸುವಂತೆ ಕೋರಿ ನಾವು ದೆಹಲಿ ಹೈಕೋರ್ಟ್‌ಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದೆ. 

ಯುಎಪಿಎಯ ಸೆಕ್ಷನ್‌ 13, 16, 17, 18 ಮತ್ತು 22ಸಿ ಅಡಿ ಮತ್ತು ಭಾರತೀಯ ದಂಡಸಂಹಿತೆಯ 153ಎ ಮತ್ತು 120ಎ ಅಡಿ ಪೊಲೀಸರು ಪ್ರಬೀರ್‌ ಮತ್ತು ಅಮಿತ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನ್ಯೂಸ್‌ಕ್ಲಿಕ್‌ನ ಹಿರಿಯ ಪತ್ರಕರ್ತರು ಮತ್ತು ಪೋರ್ಟಲ್‌ಗೆ ನೆರವು ನೀಡಿದವರು ಸೇರಿ ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖವಾಗಿರುವ ಇತರ 10 ಮಂದಿಯನ್ನು ದೆಹಲಿ ಪೊಲೀಸರು ಸೋಮವಾರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT