ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ದಾಳಿಗೆ ಸಂಚು: ಎಲ್‌ಇಟಿ 8 ಸದಸ್ಯರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌

ಕರ್ನಾಟಕದಲ್ಲಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಪ್ರಕರಣ
Published 13 ಜನವರಿ 2024, 0:36 IST
Last Updated 13 ಜನವರಿ 2024, 0:36 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ಆತ್ಮಾಹುತಿ ದಾಳಿ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಚು ಮಾಡಿದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇಬ್ಬರು ಸೇರಿ ಎಂಟು ಮಂದಿ ಲಷ್ಕರ್ ಎ ತಯಬಾ (ಎಲ್‌ಇಟಿ) ಸಂಘಟನೆಯ ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಕೇರಳದ ಕಣ್ಣೂರಿನ ಟಿ.ನಾಸೀರ್ ಎಂಬಾತ ಬೇರೊಂದು ಪ್ರಕರಣದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇನ್ನಿಬ್ಬರು ಆರೋಪಿಗಳಾದ ಜುನೈದ್ ಅಹ್ಮದ್ ಅಲಿಯಾಸ್ ಜೆಡಿ ಮತ್ತು ಸಲ್ಮಾನ್ ಖಾನ್ ವಿದೇಶಕ್ಕೆ ಪರಾರಿಯಾಗಿರುವ ಶಂಕೆ ಇದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಉಳಿದ ಆರೋಪಿಗಳು ಸೈಯದ್ ಸುಹೇಲ್ ಖಾನ್ ಅಲಿಯಾಸ್ ಸುಹೇಲ್, ಮೊಹಮ್ಮದ್ ಉಮರ್ ಅಲಿಯಾಸ್ ಉಮರ್, ಜಾಹಿದ್ ತಬ್ರೇಜ್ ಅಲಿಯಾಸ್ ಜಾಹಿದ್, ಸೈಯದ್ ಮುದಸ್ಸಿರ್ ಪಾಷಾ ಮತ್ತು ಮೊಹಮ್ಮದ್ ಫೈಸಲ್ ರಬ್ಬಾನಿ ಅಲಿಯಾಸ್ ಸಾದತ್ ಬಂಧನದಲ್ಲಿದ್ದಾರೆ. ಈ ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಕಳೆದ ವರ್ಷದ ಜುಲೈ 18ರಂದು ಬೆಂಗಳೂರು ನಗರ ಪೊಲೀಸರು ಇವರ ವಿರುದ್ಧ ಮೊದಲು ಪ್ರಕರಣ ದಾಖಲಿಸಿದ್ದರು. ಏಳು ಆರೋಪಿಗಳಿಂದ ಶಸ್ತ್ರಾಸ್ತ್ರ, ಮದ್ದುಗುಂಡು, ಗ್ರೆನೇಡ್‌ಗಳು ಮತ್ತು ವಾಕಿ ಟಾಕಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರೂವಾರಿ ಟಿ.ನಾಸೀರ್‌ನ ಕೈವಾಡವು ಈ ಸಂಚಿನಲ್ಲಿರುವ ಬಗ್ಗೆ ಇತರ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು. ಅದಾದ ಮೇಲೆ ಬಾಡಿ ವಾರಂಟ್‌ ಪಡೆದು ಜೈಲಿನಿಂದಲೇ ಸಿಸಿಬಿ ಪೊಲೀಸರು ನಾಸೀರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಪ್ರಕರಣವನ್ನು 2023ರ ಅಕ್ಟೋಬರ್‌ನಲ್ಲಿ ಎನ್‌ಐಎಗೆ ವಹಿಸಲಾಗಿತ್ತು. 

ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡ ನಂತರ ನಡೆದ ತನಿಖೆಯಲ್ಲಿ, ಹಲವು ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಸೀರ್, 2017ರಿಂದ ಬೆಂಗಳೂರು ಜೈಲಿನಲ್ಲಿದ್ದ ಇತರ ಆರೋಪಿಗಳ ಸಂಪರ್ಕಕ್ಕೆ ಬಂದಿದ್ದ. ಪೋಕ್ಸೊ ಪ್ರಕರಣದಲ್ಲಿ ಸಲ್ಮಾನ್‌ ಬಂಧಿತನಾಗಿ ಜೈಲಿನಲ್ಲಿದ್ದಾಗ, ಇತರ ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದರು. ಇವರನ್ನು ನಿಷೇಧಿತ ಭಯೋತ್ಪಾದಕ ಗುಂಪು ಎಲ್ಇಟಿಗೆ ನೇಮಕ ಮಾಡುವ ಉದ್ದೇಶದಿಂದ ನಾಸೀರ್ ತನ್ನ ಬ್ಯಾರಕ್‌ಗೆ ಸ್ಥಳಾಂತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಎಲ್ಇಟಿಯ ಚಟುವಟಿಕೆ ನಡೆಸಲು ಮೊದಲು ಅಹ್ಮದ್ ಮತ್ತು ಸಲ್ಮಾನ್ ಖಾನ್‌ನನ್ನು ನೇಮಕ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ನಾಸೀರ್‌ ನಂತರ ಇತರ ಆರೋಪಿಗಳಿಗೆ ಪ್ರಚೋದನೆ ನೀಡಿ ಸಂಘಟನೆಗೆ ನೇಮಕ ಮಾಡಲು ಅಹ್ಮದ್‌ನೊಂದಿಗೆ ಸಂಚು ರೂಪಿಸಿದ್ದ. ಅಹ್ಮದ್ ಜೈಲಿನಿಂದ ಬಿಡುಗಡೆಯಾದ ನಂತರ, ಇನ್ನೂ ಕೆಲವು ಅಪರಾಧಗಳನ್ನು ಎಸಗಿ ನಂತರ ವಿದೇಶಕ್ಕೆ ಪರಾರಿಯಾದ ಶಂಕೆ ಇದೆ. ಜೈಲಿನ ಒಳಗೆ ಮತ್ತು ಹೊರಗೆ ಎಲ್‌ಇಟಿ ಚಟುವಟಿಕೆಗಳನ್ನು ಉತ್ತೇಜಿಸಲು ವಿದೇಶದಿಂದ ತನ್ನ ಸಹ-ಆರೋಪಿಗಳಿಗೆ ಹಣ ಕಳುಹಿಸಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. 

ಅಲ್ಲದೆ, ಆತ್ಮಾಹುತಿ ದಾಳಿ ನಡೆಸುವ ಸಂಚಿನ ಭಾಗವಾಗಿ ಇತರ ಆರೋಪಿಗಳಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಗ್ರೆನೇಡ್‌ಗಳು ಮತ್ತು ವಾಕಿ ಟಾಕಿಗಳನ್ನು ತಲುಪಿಸಲು ಮತ್ತು ನ್ಯಾಯಾಲಯಕ್ಕೆ ಹೋಗುವ ಮಾರ್ಗದಲ್ಲಿ ನಾಸೀರ್‌ನನ್ನು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಲು ಸಲ್ಮಾನ್ ಖಾನ್‌ನೊಂದಿಗೆ ಅಹ್ಮದ್‌ ಸಂಚು ರೂಪಿಸಿದ್ದ. ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರಿಂದ ಅವರ ಸಂಚು ವಿಫಲವಾಗಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT