ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಯಾತ್ರೆಗೆ ವಸುಂಧರಾ ರಾಜೇ ಗೈರು: ಗುಂಪುಗಾರಿಕೆ ಅಲ್ಲಗಳೆದ ಧಾಮಿ

Published 20 ಸೆಪ್ಟೆಂಬರ್ 2023, 13:46 IST
Last Updated 20 ಸೆಪ್ಟೆಂಬರ್ 2023, 13:46 IST
ಅಕ್ಷರ ಗಾತ್ರ

ಕೋಟಾ (ರಾಜಸ್ಥಾನ): ರಾಜಸ್ಥಾನದಲ್ಲಿ ಬಿಜೆಪಿಯ ಪರಿವರ್ತನಾ ಸಂಕಲ್ಪ ಯಾತ್ರೆಯಿಂದ ಹಿರಿಯ ನಾಯಕಿ ವಸುಂಧರಾ ರಾಜೇ ಹೊರಗುಳಿದ ನಂತರ ರಾಜ್ಯ ಘಟಕದಲ್ಲಿ ಗುಂಪುಗಾರಿಕೆ ಉಂಟಾಗಿದೆ ಎಂಬ ಊಹಾಪೋಹಗಳನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಬುಧವಾರ ಅಲ್ಲಗಳೆದರು.

ಜಾಲಾವಾಡವನ್ನು ಪ್ರವೇಶಿಸಿದ ಪಕ್ಷದ ಪರಿವರ್ತನಾ ಸಂಕಲ್ಪ ಯಾತ್ರೆಯಲ್ಲಿ ರಾಜೇ ಮತ್ತು ಅವರ ಪುತ್ರ, ಜಾಲಾವಾಡ–ಬಾರನ್‌ ಕ್ಷೇತ್ರದ ಸಂಸದ ದುಶ್ಯಂತ್ ಸಿಂಗ್ ಭಾಗವಹಿಸಲಿಲ್ಲ. ಮುಖ್ಯಮಂತ್ರಿ, ಕೇಂದ್ರ ಸಚಿವೆಯೂ ಆಗಿದ್ದ ರಾಜೇ ಅವರು ಸುಮಾರು 33 ವರ್ಷಗಳಿಂದ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅವರ ಈ ಗೈರು ಹಾಜರಿ ಪಕ್ಷದೊಳಗೆ ಅಸಮಾಧಾನ ಉಂಟಾಗಿದೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿನೀಡಿದೆ.   

ಯಾತ್ರೆಯಲ್ಲಿ ಭಾಗವಹಿಸಲು ಕೋಟಾಕ್ಕೆ ಬಂದಿಳಿದ ಧಾಮಿ ಅವರು, ಈ ಊಹಾಪೋಹಗಳನ್ನು ತಳ್ಳಿಹಾಕಿದರು. ‘ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎನ್ನುವುದನ್ನು ರಾಜೇ ಅವರ ಗೈರುಹಾಜರಿ ತೋರಿಸಿಕೊಟ್ಟಿದೆ ಎಂಬ ಕಾಂಗ್ರೆಸ್‌ ಹೇಳಿಕೆಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ಬಿಜೆಪಿ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿ ದೊಡ್ಡ ಪಕ್ಷ. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ (ರಾಜಸ್ಥಾನ) ಬಿಜೆಪಿ ಅಧಿಕಾರಕ್ಕೆ ಮರಳಲಿದೆ’ ಎಂದು ಧಾಮಿ ಉತ್ತರಿಸಿದರು. 

ಯಾತ್ರೆಯು ಮಂಗಳವಾರವೇ ಜಾಲವಾಡ ಪ್ರವೇಶಿಸಿದ್ದು, ರಾಮ್‌ಗಾಂಜ್‌ಮಂಡಿ, ಮೇದಕ್‌ ಮತ್ತು ಕಾನ್ವಾಸ್‌ ಮೂಲಕ ಗುರುವಾರ ಕೋಟಾ ಪ್ರವೇಶಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT