ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಗಳ ಸಾಮಾನ್ಯೀಕರಣ ಪ್ರಕ್ರಿಯೆ ಇಲ್ಲ: ಯುಜಿಸಿ ಮುಖ್ಯಸ್ಥ

Published 22 ಏಪ್ರಿಲ್ 2024, 15:31 IST
Last Updated 22 ಏಪ್ರಿಲ್ 2024, 15:31 IST
ಅಕ್ಷರ ಗಾತ್ರ

ನವದೆಹಲಿ: ಪದವಿ ಹಂತದಲ್ಲಿ ವಿಶ್ವವಿದ್ಯಾಲಯ ಪ್ರವೇಶಕ್ಕಾಗಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಯುಇಟಿ–ಯುಜಿ) ಹಾಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್‌ಇಟಿ) ‘ಅಂಕಗಳ ಸಾಮಾನ್ಯೀಕರಣ’ ಪ್ರಕ್ರಿಯೆಯನ್ನು ಈ ವರ್ಷದಿಂದ ಕೈಬಿಡಲಾಗುತ್ತದೆ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ಮುಖ್ಯಸ್ಥ ಜಗದೀಶ್ ಕುಮಾರ್ ಹೇಳಿದ್ದಾರೆ.

ಇವೆರಡಕ್ಕೂ, ವಿಷಯವೊಂದಕ್ಕೆ ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಹೀಗಾಗಿ ಅಂಕಗಳ ಸಾಮಾನ್ಯೀಕರಣವು ಈ ವರ್ಷದಿಂದ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಯೊಬ್ಬನ ಅಂಕವನ್ನು ಪರಿಷ್ಕರಿಸಿ, ಅದನ್ನು ಇನ್ನೊಬ್ಬ ವಿದ್ಯಾರ್ಥಿಯ ಅಂಕದ ಜೊತೆ ಹೋಲಿಸಲು ಸೂಕ್ತವಾಗುವಂತೆ ಮಾಡುವುದನ್ನು ‘ಅಂಕಗಳ ಸಾಮಾನ್ಯೀಕರಣ’ ಎಂದು ಕರೆಯಲಾಗುತ್ತದೆ.

ಒಂದೇ ವಿಷಯದ ಮೇಲಿನ ಪರೀಕ್ಷೆಯನ್ನು ಹಲವು ಅವಧಿಗಳಲ್ಲಿ, ಬೇರೆ ಬೇರೆ ಪ್ರಶ್ನೆಪತ್ರಿಕೆಗಳೊಂದಿಗೆ ನಡೆಸಿದಾಗ ಈ ಪ್ರಕ್ರಿಯೆ ಅಗತ್ಯವಾಗುತ್ತದೆ. ಆದರೆ, ಈ ಪ್ರಕ್ರಿಯೆಯು ಪರೀಕ್ಷೆಗಳಲ್ಲಿ ತಾವು ತೋರುವ ಸಾಧನೆಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

‘ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆಯ ಪರೀಕ್ಷಾ ಕೇಂದ್ರವನ್ನು ಸಾಧ್ಯವಾದಷ್ಟು ಮಟ್ಟಿಗೆ ಒದಗಿಸುವ ಉದ್ದೇಶದಿಂದ ನಾವು ಈ ಮೊದಲು ಒಂದೇ ವಿಷಯ ಕುರಿತ ಪರೀಕ್ಷೆಯನ್ನು ಎರಡು–ಮೂರು ದಿನಗಳಲ್ಲಿ ನಡೆಸಬೇಕಿತ್ತು. ಆದರೆ ಈ ವರ್ಷ ಒಎಂಆರ್‌ ಮಾದರಿಯನ್ನು ಅಳವಡಿಸಿಕೊಂಡಿರುವ ಕಾರಣ, ಶಾಲೆ ಮತ್ತು ಕಾಲೇಜುಗಳಲ್ಲಿ ಭಾರಿ ಸಂಖ್ಯೆಯಲ್ಲಿ ಪರೀಕ್ಷಾ ಕೇಂದ್ರಗಳು ಲಭ್ಯವಾಗಲಿವೆ. ಆಗ ನಮಗೆ ಇಡೀ ದೇಶದಲ್ಲಿ ಪರೀಕ್ಷೆಯನ್ನು ಒಂದೇ ದಿನ ನಡೆಸಲು ಆಗಲಿದೆ’ ಎಂದು ಅವರು ವಿವರಿಸಿದ್ದಾರೆ.

ಒಂದೇ ವಿಷಯಕ್ಕೆ ಪರೀಕ್ಷೆಯನ್ನು ಹಲವು ದಿನಗಳಲ್ಲಿ ನಡೆಸಿದಾಗ ಅಂಕಗಳ ಸಾಮಾನ್ಯೀಕರಣದ ಅಗತ್ಯ ಇರುತ್ತದೆ. ಅದು ವೈಜ್ಞಾನಿಕ ವಿಧಾನವೂ ಹೌದು ಎಂದು ಅವರು ಹೇಳಿದ್ದಾರೆ.

ಈ ವರ್ಷ ಸಿಯುಇಟಿ–ಯುಜಿ ಪರೀಕ್ಷೆಯನ್ನು ಮೇ 15ರಿಂದ 24ರವರೆಗೆ ನಡೆಸಲಾಗುತ್ತಿದೆ. ಯುಜಿಸಿ–ಎನ್‌ಇಟಿ ಪರೀಕ್ಷೆಯು ಜೂನ್ 16ರಂದು ನಡೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT