ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಪ್ರವೇಶ: ಮಮತಾ ಪಡೆಗೆ ತಡೆ

ವಿಮಾನ ನಿಲ್ದಾಣದಿಂದ ಹೊರಬಾರದಂತೆ ಸಂಸದರಿಗೆ ನಿರ್ಬಂಧ
Last Updated 3 ಆಗಸ್ಟ್ 2018, 5:08 IST
ಅಕ್ಷರ ಗಾತ್ರ

ಸಿಲ್ಚರ್‌ (ಅಸ್ಸಾಂ): ರಾಷ್ಟ್ರೀಯ ಪೌರತ್ವ ನೋಂದಣಿಯ (ಎನ್‌ಆರ್‌ಸಿ) ಅಂತಿಮ ಕರಡು ಪ್ರಕಟವಾದ ನಂತರ ಅಸ್ಸಾಂನ ಸ್ಥಿತಿಗತಿ ಏನು ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಸಿಲ್ಚರ್‌ ತಲುಪಿದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ.

ನಿಯೋಗದ ಭೇಟಿಯಿಂದಾಗಿ ಶಾಂತಿ–ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ತಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪೊಲೀಸರು ತಮ್ಮನ್ನು ಎಳೆದಾಡಿದ್ದಾರೆ ಎಂದು ನಿಯೋಗದಲ್ಲಿ ಇದ್ದ ಸಂಸದ ಸುಕೇಂದು ಶೇಖರ್‌ ರಾಯ್‌ ಹೇಳಿದ್ದಾರೆ.

ಪಕ್ಷದ ಸಂಸದರನ್ನು ತಡೆದು ನಿಲ್ಲಿಸಿರುವುದರಿಂದ ಟಿಎಂಸಿ ಅಧ್ಯಕ್ಷೆ ಮಮತಾ ಸಿಟ್ಟಾಗಿದ್ದಾರೆ. ನಿಯೋಗದಲ್ಲಿ ಮಹಿಳೆಯೂ ಇದ್ದರು. ನಿಯೋಗದ ಸದಸ್ಯರನ್ನು ಎಳೆದಾಡಲಾಗಿದೆ. ಬಿಜೆಪಿ ದೇಶದಲ್ಲಿ ‘ಸೂಪರ್‌ ಎಮರ್ಜೆನ್ಸಿ’ ಹೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಿಂದಾಗಿ ಬಿಜೆಪಿಯ ಬಣ್ಣ ಬಯಲಾಗಿದೆ. ಯಾವ ಕಾನೂನಿನ ಅಡಿಯಲ್ಲಿ ನಿಯೋಗವನ್ನು ತಡೆದು ನಿಲ್ಲಿಸಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಛಾರ್‌ ಜಿಲ್ಲೆಯಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 144 ಪ್ರಕಾರ ನಿಷೇಧಾಜ್ಞೆ ಹೇರಲಾಗಿದೆ. ಜಿಲ್ಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇದು ಕಾನೂನು–ಸುವ್ಯವಸ್ಥೆ ಕಾಪಾಡಲು ಕ್ರಮ. ಟಿಎಂಸಿ ನಿಯೋಗ ಭೇಟಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಎಡಿಜಿಪಿ ಪಲ್ಲವ್‌ ಭಟ್ಟಾಚಾರ್ಯತಿಳಿಸಿದ್ದಾರೆ.

ಮಮತಾ ವಿರುದ್ಧ ಆಕ್ರೋಶ:ಆದರೆ, ಆಲ್‌ ಅಸ್ಸಾಂ ಸ್ಟೂಡೆಂಟ್‌ ಯೂನಿಯನ್‌ (ಎಎಎಸ್‌ಯು) ಮಮತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರಗೆ ಹಾಕಬೇಕು ಎಂಬ ಆಂದೋಲನವನ್ನು ಆರಂಭಿಸಿದ್ದೇ ಎಎಎಸ್‌ಯು.ಎನ್ಆರ್‌ಸಿ ನೆಪದಲ್ಲಿ ಮಮತಾ ಅವರು ಮತಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದಾರೆ ಎಂದು ಎಎಎಸ್‌ಯು ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.

ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿರುವ ಐಪಿಎಫ್‌ಟಿ, ಎನ್‌ಆರ್‌ಸಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದೆ. ಆದರೆ ಅದರ ಅಗತ್ಯ ಇಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ಹೇಳಿದ್ದಾರೆ.

ನಡೆದದ್ದೇನು?

(ಗುವಾಹಟಿ ವರದಿ): ಎರಡು ದಿನಗಳ ಅಸ್ಸಾಂ ಭೇಟಿಗಾಗಿ ತೃಣಮೂಲ ಕಾಂಗ್ರೆಸ್‌ನ ಎಂಟು ಸದಸ್ಯರ ನಿಯೋಗ ಮಧ್ಯಾಹ್ನ 2ಕ್ಕೆ ವಿಮಾನ ನಿಲ್ದಾಣ ತಲುಪಿದೆ.ನಿಯೋಗವು ಸಿಲ್ಕಾರ್‌ನ ನಾಗರಿಕರೊಂದಿಗೆ ಮಾತುಕತೆ ನಂತರ ನಗಾಂವ್ ಮತ್ತು ಗುವಾಹಟಿಗೆ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ,‍ಪೊಲೀಸರು ವಿಮಾನ ನಿಲ್ದಾಣದಿಂದ ಕದಲದಂತೆ ಎಚ್ಚರಿಸಿ ಹಲ್ಲೆ ಕೂಡ ನಡೆಸಿದ್ದಾರೆ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ.

ಸುಕೇಂದು ಶೇಖರ್‌ ರಾಯ್‌, ಕಕೋಳಿ ಘೋಷ್‌ ದಾಸ್ತಿದಾರ್‌, ರತ್ನಾ ದೇ ನಾಗ್‌, ನದಿಮುಲ್‌ ಹಖ್‌, ಅರ್ಪಿತಾ ಘೋಷ್‌ ಹಾಗೂ ಮಮತಾ ಠಾಕೂರ್‌ ಸೇರಿ 6 ಸಂಸದರು, ಬಂಗಾಳದ ನಗರಾಭಿವೃದ್ಧಿ ಸಚಿವ ಫಿರ್ಹದ್‌ ಹಕಿಮ್‌ ಮತ್ತು ಶಾಸಕಿ ಮಹುವಾ ಮೊಯ್‌ತ್ರಾ ಅವರನ್ನು ನಿಯೋಗ ಒಳಗೊಂಡಿದೆ.

’ಸಿಆರ್‌ಪಿಸಿ ಸೆಕ್ಷನ್‌ 144 ಉಲ್ಲಂಘಿಸಿದರೂ ಬಿಜೆಪಿ ನಿಯೋಗವನ್ನುಕೋಮುಗಲಭೆ ಉಂಟಾಗಿದ್ದ ಆಸನ್ಸೋಲ್‌ ಭೇಟಿಗೆ ಇದೇ ಏಪ್ರಿಲ್‌ನಲ್ಲಿ ಅವಕಾಶ ಮಾಡಿಕೊಟ್ಟಿದ್ದನ್ನು ನೆನಪಿಸಿಕೊಳ್ಳಿ. ಆದರೆ ಇಂದು, ಕೇಂದ್ರ ಗೃಹ ಸಚಿವರ ಆಶ್ವಾಸನೆಯಿದ್ದರೂ ಮಹಿಳಾ ಸದಸ್ಯರನ್ನೂ ಒಳಗೊಂಡಿರುವ ನಮ್ಮ ನಿಯೋಗದ ಮೇಲೆ ದಾಳಿ ನಡೆಸಲಾಗಿದೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದರು.

ನಿರ್ದಿಷ್ಟ ಹೊಟೇಲ್‌ಗೆ ತೆರಳುವಂತೆ ಪೊಲೀಸರು ನಮ್ಮ ನಿಯೋಗಕ್ಕೆ ಒತ್ತಾಯಿಸಿದ್ದಾರೆ. ಜನ ಸಾಮಾನ್ಯರ ಭೇಟಿಗಾಗಿ ಬಂದಿರುವವರು ಹೊಟೇಲ್‌ಗೆ ಏಕೆ ಹೋಗಬೇಕು? ಅವರು ಮೋಜಿನ ಪ್ರವಾಸಕ್ಕಾಗಿ ತೆರಳಿದ್ದಾರೆಯೇ? ಎಂದು ಪ್ರಶ್ನಿಸಿದರು.

ನಮ್ಮ ನಿಯೋಗವನ್ನು ಸಿಲ್ಕಾರ್‌ ವಿಮಾನದಲ್ಲಿ ತಡೆಯಲಾಯಿತು. ಜನರನ್ನು ಭೇಟಿ ಮಾಡುವುದು ನಮ್ಮ ಪ್ರಜಾಸತ್ತಾತ್ಮಕ ಹಕ್ಕಾಗಿದೆ. ಆದರೆ, ಇದು ತೀವ್ರತರದ ತುರ್ತು ಪರಿಸ್ಥಿತಿಯಂತೆ ತೋರುತ್ತಿದೆ’ ಎಂದು ಪಕ್ಷದ ಸಂಸದ ಡೇರೆಕ್‌ ಒ ಬ್ರಯಾನ್‌ ಪ್ರತಿಕ್ರಿಯಿಸಿದರು.

’ವಿಮಾನದಿಂದ ಇಳಿದು ನಿಲ್ದಾಣದಿಂದ ಹೊರ ಹೋಗುವ ದಾರಿಯಲ್ಲಿ ಬರುತ್ತಿದ್ದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಹಾಗೂ ಪೊಲೀಸ್‌ ಅಧಿಕಾರಿಗಳು ಮುಖಾಮುಖಿಯಾಗಿ ತಡೆದರು. ಹೃದಯ ಸಮಸ್ಯೆಯಿರುವ ನನಗೆ ಎದೆಯ ಭಾಗಕ್ಕೆ ಪೊಲೀಸ್‌ ಅಧಿಕಾರಿಯೊಬ್ಬ ಹಲ್ಲೆ ಮಾಡಿದ್ದಾರೆ. ನಮ್ಮ ನಿಯೋಗದ ಇತರ ಸದಸ್ಯರನ್ನೂ ಪೊಲೀಸರು ಎಳೆದಾಡಿದರು’ ಎಂದುಸುಖೇಂದು ಶೇಖರ್‌ ರಾಯ್‌ ಘಟನೆ ವಿವರಿಸಿದರು.

ಮೊಬೈಲ್‌ ಫೋನ್‌ಗಳನ್ನೂ ಸಹ ಪೊಲೀಸರು ಕಸಿದುಕೊಂಡಿರುವುದಾಗಿ ಆರೋಪಿಸಲಾಗಿದೆ.

’ಅಸ್ಸಾಂಗೆ ತೆರಳಲು ತೃಣಮೂಲ ಕಾಂಗ್ರೆಸ್‌ನ ಸಂಸದರಿಗೆ ಯಾರು ಹೇಳಿದ್ದು? ಅವರೇ ಸಮಸ್ಯೆಯಾಗಿದ್ದಾರೆ, ಅಲ್ಲಿಂದ ಅವರೆಲ್ಲ ಮರಳಿ ಬರಲಿ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಪ್ರತ್ಯಾರೋಪ ಮಾಡಿದರು.

’ಅಸ್ಸಾಂನಲ್ಲಿ ನಿಯೋಗವು ತಳಮಳ ಸೃಷ್ಟಿಸುವ ಪ್ರಯತ್ನ ನಡೆಸಿದರೆ, ಆಡಳಿತವು ಸೂಕ್ತ ಕ್ರಮ ಕೈಗೊಳ್ಳಲಿದೆ. ಅವರನ್ನು ರಾಜ್ಯದಿಂದ ಹೊರ ಕಳುಹಿಸಬೇಕಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್‌ ಸಿನ್ಹಾ ಎಚ್ಚರಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಮಮತಾಗೆ ಭಿನ್ನಮತದ ಬಿಸಿ

ಎನ್‌ಆರ್‌ಸಿಯ ವಿರುದ್ಧ ನಿಲುವು ತಳೆದಿರುವ ಮಮತಾ ಬ್ಯಾನರ್ಜಿ ಅವರಿಗೆ ಪಕ್ಷದ ಒಳಗಿನಿಂದಲೇ ಪ್ರತಿರೋಧ ಎದುರಾಗಿದೆ. ಪಕ್ಷದ ಅಸ್ಸಾಂ ಘಟಕದ ಅಧ್ಯಕ್ಷ ದ್ವೀಪೇನ್‌ ಪಾಠಕ್‌ ಮತ್ತು ಇತರ ಇಬ್ಬರು ಹಿರಿಯ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಎನ್‌ಆರ್‌ಸಿ ಪ್ರಕಟವಾದ ಬಳಿಕ ರಾಜ್ಯದ ಪರಿಸ್ಥಿತಿ ಏನು ಎಂಬುದನ್ನು ಪಕ್ಷಕ್ಕೆ ತಿಳಿಸಲಾಗಿತ್ತು. ಇಲ್ಲಿನ ಸ್ಥಿತಿಯನ್ನು ಮತ್ತಷ್ಟು ವಿವರವಾಗಿ ಅರ್ಥ ಮಾಡಿಕೊಳ್ಳಲು ನಿಯೋಗ ಕಳುಹಿಸುವಂತೆ ಕೋರಲಾಗಿತ್ತು. ಆದರೆ ಪಕ್ಷವು ತಮ್ಮ ಸಲಹೆಗೆ ಬೆಲೆ ಕೊಡಲಿಲ್ಲ. ಅಸ್ಸಾಮಿ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಶ್ರಮಿಸಲಿಲ್ಲ. ಅಂತಹ ಪಕ್ಷದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಪಾಠಕ್‌ ಹೇಳಿದ್ದಾರೆ.

*ಎನ್‌ಆರ್‌ಸಿಯಲ್ಲಿ ಹೆಸರು ಇಲ್ಲದವರ ಜತೆ ಮಾತನಾಡಲು ಇಲ್ಲಿಗೆ ಬಂದಿದ್ದೇವೆ. ಸಮಸ್ಯೆ ಸೃಷ್ಟಿಸುವುದು ನಮ್ಮ ಉದ್ದೇಶವಲ್ಲ, ಆದರೆ ನಮ್ಮನ್ನು ಅವರು ಹಿಡಿದಿಟ್ಟಿದ್ದಾರೆ

ಸುಕೇಂದು ಶೇಖರ್‌ ರಾಯ್‌, ಟಿಎಂಸಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT