ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ: ನರ್ಸ್‌ ಮೇಲೆ ವೈದ್ಯನಿಂದ ಅತ್ಯಾಚಾರ

Published 19 ಆಗಸ್ಟ್ 2024, 15:10 IST
Last Updated 19 ಆಗಸ್ಟ್ 2024, 15:10 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಮುರಾದಾಬಾದ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಮೇಲೆ ವೈದ್ಯರೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ನರ್ಸ್‌ ದಲಿತ ಸಮುದಾಯದವರು.

ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಡಾ.ಶಹನವಾಜ್‌ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಜಿಲ್ಲಾ ಆರೋಗ್ಯಾಧಿಕಾರಿಯು ಆಸ್ಪತ್ರೆಯ ಪರವಾನಗಿ ರದ್ದುಗೊಳಿಸಿ, ಬೀಗ ಜಡಿದಿದ್ದಾರೆ.

ಮುರಾದಾಬಾದ್‌ನ ಠಾಕೂರ್‌ದ್ವಾರ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಸಂತ್ರಸ್ತೆಯು (20 ವರ್ಷ) ಶನಿವಾರ ರಾತ್ರಿಪಾಳಿಗೆ ಬಂದಿದ್ದರು. ಮಧ್ಯರಾತ್ರಿಯ ವೇಳೆ ಶಹನವಾಜ್‌ ತಮ್ಮ ಕೊಠಡಿಗೆ ಕರೆಸಿ, ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

‘ವೈದ್ಯರ ಕೊಠಡಿಗೆ ತೆರಳಲು ನಿರಾಕರಿಸಿದರೂ ಆಸ್ಪತ್ರೆಯ ಇಬ್ಬರು ಸಿಬ್ಬಂದಿ ಬಲವಂತವಾಗಿ ಕೊಠಡಿಗೆ ಎಳೆದೊಯ್ದಿದ್ದಾರೆ’ ಎಂದು ಸಂತ್ರಸೆಯು ದೂರಿನಲ್ಲಿ ತಿಳಿಸಿದ್ದಾರೆ. ಸಿಬ್ಬಂದಿಯನ್ನು ಮೆಹನಾಜ್ (ದಾದಿ) ಮತ್ತು ಜುನೈದ್‌ (ವಾರ್ಡ್‌ ಬಾಯ್) ಎಂದು ಗುರುತಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

‘ಮೆಹನಾಜ್‌ ಮತ್ತು ಜುನೈದ್‌, ಕೊಠಡಿಯ ಬಾಗಿಲನ್ನು ಹೊರಗಿನಿಂದ ಲಾಕ್‌ ಮಾಡಿ ತೆರಳಿದ್ದಾರೆ. ಸಂತ್ರಸ್ತೆಯ ಮೊಬೈಲ್‌ ಫೋನ್‌ ಕೂಡಾ ಕೊಂಡೊಯ್ದಿದ್ದಾರೆ. ನರ್ಸ್‌ ಜೋರಾಗಿ ಕಿರುಚಾಡಿದರೂ ಆಕೆಯ ನೆರವಿಗೆ ಯಾರೂ ಬರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಆರೋಪಿಗಳು ಸಂತ್ರಸ್ತೆಯನ್ನು ಬೆದರಿಸಿದ್ದು, ವಿಷಯ ಬಹಿರಂಗಪಡಿಸದಂತೆ ಹಣದ ಆಮಿಷ ಕೂಡಾ ಒಡ್ಡಿದ್ದಾರೆ. ಆದರೆ, ಸಂತ್ರಸ್ತೆಯು ಘಟನೆಯನ್ನು ಹೆತ್ತವರಿಗೆ ತಿಳಿಸಿದ್ದು, ಅವರು ಭಾನುವಾರ ದೂರು ನೀಡಿದ್ದಾರೆ.

ಕೆಲ ದಿನಗಳ ಹಿಂದೆ ನೆರೆಯ ಉತ್ತರಾಖಂಡ ರಾಜ್ಯದಲ್ಲಿ ನರ್ಸ್‌ ಒಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು.  ಸಂತ್ರಸ್ತೆಯ ಮೃತದೇಹ ಉತ್ತರ ಪ್ರದೇಶದ ಬಿಲಾಸಪುರ ಪ್ರದೇಶದಲ್ಲಿ ಪತ್ತೆಯಾಗಿತ್ತು. ಆರೋಪಿಯನ್ನು ರಾಜಸ್ಥಾನದ ಜೋಧಪುರದಲ್ಲಿ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT