ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಕಳಮಶ್ಶೇರಿ ಸರಣಿ ಬಾಂಬ್ ಸ್ಫೋಟ: ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

ಕೇರಳದ ಎರ್ನಾಕುಳಂ ಬಳಿಯ ಕಳಮಶ್ಶೇರಿ ಎಂಬ ಪ್ರದೇಶದ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ಫೋಟ
Published 29 ಅಕ್ಟೋಬರ್ 2023, 6:38 IST
Last Updated 30 ಅಕ್ಟೋಬರ್ 2023, 2:53 IST
ಅಕ್ಷರ ಗಾತ್ರ

ಕೊಚ್ಚಿ: ಕೇರಳದ ಎರ್ನಾಕುಳಂ ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರು ಕಳಮಶ್ಶೇರಿ ಎಂಬಲ್ಲಿ ಪ್ರಾರ್ಥನಾ ಸಭೆ ನಡೆಸುತ್ತಿದ್ದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಇಬ್ಬರು ಮಹಿಳೆಯರು ಹಾಗೂ ಒಬ್ಬ ಬಾಲಕಿ ಸತ್ತಿದ್ದಾರೆ.

ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎರ್ನಾಕುಳಂ ಜಿಲ್ಲೆಯ ಮಲಯತ್ತೂರಿನ ಲಿಬಿನಾ ಎನ್ನುವ 12 ವರ್ಷದ ಬಾಲಕಿ ತಡರಾತ್ರಿ 12.05 ರ ಸುಮಾರು ಕಳಮಶ್ಶೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರಾದರು. ಅವರಿಗೆ ಶೇ 95 ರಷ್ಟು ಸುಟ್ಟ ಗಾಯಗಳಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಚ್ಚಿಯಿಂದ ಈಶಾನ್ಯಕ್ಕೆ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕಲಮಶೇರಿಯ ‘ಯಹೋವನ ಸಾಕ್ಷಿಗಳು’ ಪಂಥದ ಕಾರ್ಯಕ್ರಮ ನಡೆಯುತ್ತಿದ್ದ ಸಭಾ ಭವನದಲ್ಲಿ ಬೆಳಿಗ್ಗೆ 9.40ಕ್ಕೆ ಈ ಸ್ಫೋಟ ನಡೆದಿದೆ. ಮೂರು ದಿನಗಳ ಸಮಾವೇಶದ ಕೊನೆಯ ದಿನವಾದ ಭಾನುವಾರ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಸಭಾ ಭವನದ ಒಳಗೆ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

ಘಟನೆ ನಡೆದ ಕೆಲವು ತಾಸುಗಳ ಬಳಿಕ, ಯಹೋವನ ಸಾಕ್ಷಿಗಳು ಪಂಥದ ಸದಸ್ಯನೆಂದು ಹೇಳಿಕೊಂಡ 48 ವರ್ಷ ವಯಸ್ಸಿನ ಡಾಮಿನಿಕ್ ಮಾರ್ಟಿನ್‌ ಎಂಬಾತ ಕೊಡಕರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ‘ಸ್ಫೋಟಕ್ಕೆ ನಾನೇ ಕಾರಣ’ ಎಂದು ಹೇಳಿಕೊಂಡಿದ್ದಾನೆ ಎಂದು ಕೇರಳದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ತಿಳಿಸಿದ್ದಾರೆ. 

ಕೇರಳದಲ್ಲಿ ನಡೆದ ಸ್ಫೋಟದ ಕಾರಣ ದಕ್ಷಿಣ ಕನ್ನಡದ ಗಡಿಗಳಲ್ಲಿ ಜಾಗೃತರಾಗಿ ಇರುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ಜಿ. ಪರಮೇಶ್ವರ, ಗೃಹ ಸಚಿವ

ಗಾಯಗೊಂಡ 51 ಜನರ ಪೈಕಿ 30 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಅವರಲ್ಲಿ 18 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಅವರಲ್ಲಿ ಮೂವರಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ. ತ್ರಿಶ್ಶೂರ್ ಮತ್ತು ಕೋಟಯಂ ವೈದ್ಯಕೀಯ ಕಾಲೇಜುಗಳಿಂದ ತಜ್ಞ ವೈದ್ಯರ ತಂಡಗಳು ಕಲಮಶೇರಿ ವೈದ್ಯಕೀಯ ಕಾಲೇಜಿಗೆ ಬಂದಿವೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

‘ಕಲಮಶೇರಿಯ ಜಮ್ರಾ ಇಂಟರ್‌ನ್ಯಾಷನಲ್‌ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸ್ಫೋಟಕ್ಕೆ ಕಚ್ಚಾ ಬಾಂಬ್ ಬಳಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು ಕೇರಳ ಪೊಲೀಸ್ ಮಹಾನಿರ್ದೇಶಕ ಶೇಖ್ ದರ್ವೇಶ್ ಸಾಹೇಬ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದು ಭಯೋತ್ಪಾದಕ ದಾಳಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಜಿಪಿ, ‘ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ತನಿಖೆ ಬಳಿಕವೇ ಖಚಿತಪಡಿಸ ಬಹುದು. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಕಣ್ಮುಂದೆ ಬೆಂಕಿ ಉಂಡೆ..
‘ಮೊದಲ ಸ್ಫೋಟದ ಶಬ್ದ ಕೇಳಿದ ನಂತರ ಕಣ್ಣು ತೆರೆದಾಗ, ನನ್ನ ಮುಂದೆ ಕಂಡಿದ್ದು ಬೆಂಕಿ ಉಂಡೆ ಮಾತ್ರ. ಎಲ್ಲರೂ ಚದುರಿ, ಓಡಿ ಹೋದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಇದ್ದರು’ ಎಂದು ವೃದ್ಧೆಯೊಬ್ಬರು ಘಟನೆಯನ್ನು ವಿವರಿಸಿದರು. ‘ನಾನು ಸಭಾಂಗಣದ ಬದಿಯಲ್ಲಿ ನಿಂತು ಕಣ್ಣುಮುಚ್ಚಿ ಪ್ರಾರ್ಥಿಸುತ್ತಿದ್ದೆ. ಇದ್ದಕ್ಕಿದ್ದಂತೆ ಸ್ಫೋಟದ ಶಬ್ದ ಕೇಳಿಸಿತು. ಸುತ್ತಲೂ ಬೆಂಕಿ ಮಾತ್ರ ನೋಡಿದೆ. ಇತರರೊಂದಿಗೆ ಬಾಗಿಲ ಬಳಿ ಓಡಿದೆ. ಇಷ್ಟು ವರ್ಷಗಳಲ್ಲಿ ಈ ರೀತಿಯ ಘಟನೆ ನಡೆದಿರಲಿಲ್ಲ’ ಎಂದು 70 ವರ್ಷದ ವ್ಯಕ್ತಿ ಕಣ್ಣೀರು ಒರೆಸುತ್ತಾ ಹೇಳಿದರು.

ಶಾಂತಿ ಕಾಪಾಡಬೇಕು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಅಥವಾ ದ್ವೇಷದ ಸಂದೇಶಗಳನ್ನು ಹರಡಬಾರದು ಎಂದು ಡಿಜಿಪಿ ಮನವಿ ಮಾಡಿದ್ದಾರೆ. ರಾಜ್ಯದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 

ಸ್ಫೋಟಕಗಳನ್ನು ಪ್ಯಾಕ್ ಮಾಡಲು ಟಿಫಿನ್ ಬಾಕ್ಸ್‌ ಬಳಸಲಾಗಿದೆಯೇ ಎಂಬ ಪ್ರಶ್ನೆಗೆ, ಸ್ಫೋಟದ ಸ್ಥಳವನ್ನು ರಾಜ್ಯ ಭಯೋತ್ಪಾದನಾ ನಿಗ್ರಹ ದಳ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪರಿಶೀಲಿಸುತ್ತಿರುವುದರಿಂದ ಈ ಹಂತದಲ್ಲಿ ಅದನ್ನು ದೃಢೀಕರಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಸ್ಫೋಟದ ಶಬ್ದ ಕೇಳುತ್ತಿದ್ದಂತೆ ಸಭಾಂಗಣದಲ್ಲಿದ್ದ ಮಕ್ಕಳು, ಮಹಿಳೆಯರು ಭಯಭೀತರಾಗಿ ಕಿರುಚಿದರು. ಕುರ್ಚಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಹಲವು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ನೆರವಾದರು. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿ, ಸ್ಫೋಟದ ನಂತರದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ. ಗೃಹ ಸಚಿವರ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರಕ್ಕೆ ನೆರವಾಗಲು ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್‌ಸಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ.

ಈ ಘಟನೆ ದುರದೃಷ್ಟಕರ, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ವಿಜಯನ್ ಅವರು ಸೋಮವಾರ ಬೆಳಿಗ್ಗೆ 10 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ.  

‘ಪ್ರಾರ್ಥನೆ ಮುಗಿದ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟ ಸಂಭವಿಸಿದೆ. ಮೊದಲ ಸ್ಫೋಟವು ಸಭಾಂಗಣದ ಮಧ್ಯದಲ್ಲಿ ಆಗಿದೆ. ಸೆಕೆಂಡುಗಳ ನಂತರ, ಸಭಾಂಗಣದ ಎರಡೂ ಬದಿಗಳಲ್ಲಿ ಏಕಕಾಲದಲ್ಲಿ ಇನ್ನೂ ಎರಡು ಸ್ಫೋಟಗಳು ನಡೆದವು’ ಎಂದು ಯಹೋವನ ಸಾಕ್ಷಿಗಳ ಪ್ರಾದೇಶಿಕ ವಕ್ತಾರ ಟಿ.ಎ. ಶ್ರೀಕುಮಾರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಯಹೋವನ ಸಾಕ್ಷಿಗಳು 1870ರ ಸುಮಾರಿಗೆ ಅಮೆರಿಕದಲ್ಲಿ ಸ್ಥಾಪಿತವಾದ ಅಂತರರಾಷ್ಟ್ರೀಯ ಕ್ರೈಸ್ತ ಪಂಥವಾಗಿದೆ. ಭಾರತದಲ್ಲಿ ಸುಮಾರು 60,000 ಅನುಯಾಯಿಗಳನ್ನು ಹೊಂದಿದೆ ಎನ್ನಲಾಗಿದೆ.

ಚರ್ಚ್‌ಗಳಿಗೆ ಬಿಗಿ ಭದ್ರತೆ

ನವದೆಹಲಿ: ಕೇರಳದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದ ಕಾರಣ ಚರ್ಚ್ ಮತ್ತು ಮೆಟ್ರೊ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ನಗರದ ಪ್ರಮುಖ ಮಾರುಕಟ್ಟೆಗಳು, ಚರ್ಚ್‌ಗಳು, ಮೆಟ್ರೊ ನಿಲ್ದಾಣಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಉತ್ತರ ಪ್ರದೇಶ ಮತ್ತು ಹರಿಯಾಣ ಕಡೆಯಿಂದ ಗಡಿ ಪ್ರದೇಶದಾದ್ಯಂತ ಬ್ಯಾರಿಕೇಡ್‌ ಗಳನ್ನು ಹಾಕಲು ತಂಡಗಳಿಗೆ ತಿಳಿಸಲಾಗಿದೆ. ಪೊಲೀಸರಿಗೆ ಜಾಗರೂಕರಾಗಿರಲು ಮತ್ತು ಯಾವುದೇ ಮಾಹಿತಿಯನ್ನು ನಿರ್ಲಕ್ಷಿಸದಂತೆ ಸೂಚಿಸಲಾಗಿದೆ. ಕಿಕ್ಕಿರಿದ ಮಾರುಕಟ್ಟೆಗಳಲ್ಲಿ ಹೆಚ್ಚುವರಿ ತುಕಡಿ ನಿಯೋಜನೆ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಮೂಲಗಳ ಪ್ರಕಾರ, ದೆಹಲಿ ಪೊಲೀಸರ ವಿಶೇಷ ಘಟಕ ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಇದನ್ನೂ ಓದಿ

ನಾನೇಕೆ ಸ್ಫೋಟಿಸಿದೆ: ಕೊಚ್ಚಿ ಸ್ಫೋಟದ ಬಗ್ಗೆ ಮಾರ್ಟಿನ್ ಎಂಬಾತನ ವಿಡಿಯೊ ಸಂದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT