ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್ ಚರ್ಚೆ: ಲೋಕಸಭೆ, ರಾಜ್ಯಸಭೆಯಲ್ಲಿ ಸಿಗದ ಅವಕಾಶ, ಉಭಯ ಸದನಗಳಲ್ಲೂ ಕೋಲಾಹಲ

ಬಿಗಿ ಪಟ್ಟು
Published 29 ಜೂನ್ 2024, 0:05 IST
Last Updated 29 ಜೂನ್ 2024, 0:05 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ದ್ರೌ‍ಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಗೂ ಮೊದಲು ನೀಟ್‌ ಅಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಶುಕ್ರವಾರ ಬಿಗಿ ಪಟ್ಟು ಹಿಡಿದಿದ್ದರಿಂದ ಉಭಯ ಸದನಗಳಲ್ಲೂ ಕೋಲಾಹಲ ಉಂಟಾಯಿತು.

ಲೋಕಸಭೆಯಲ್ಲಿ ನೀಟ್ ಅಕ್ರಮಗಳ ಬಗ್ಗೆ ಮಾತನಾಡಲು ತಮಗೆ ಅವಕಾಶ ನೀಡದೆ ಮೈಕ್‌ ಬಂದ್‌ ಮಾಡಲಾಗಿದೆ ಎಂದು ವಿರೋಧ ‍ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು. ಈ ಬಗ್ಗೆ ಮಾತನಾಡಲು ತಮಗೂ ಸಭಾಪತಿಯವರು ಅವಕಾಶ ಕೊಟ್ಟಿಲ್ಲ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ವಿರೋಧ ಪಕ್ಷಗಳ ಮುಖಂಡರು ಸಭಾಪತಿ ಪೀಠದ ಮುಂಭಾಗಕ್ಕೆ ಬಂದು ಪ್ರತಿಭಟನೆ ನಡೆಸಿ, ಕಲಾಪ ಬಹಿಷ್ಕರಿಸಿದರು.

ಹಿಂದಿನ ಅವಧಿಯಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿದ್ದ ಬಿಜೆಡಿ, ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕಲಾಪ ಬಹಿಷ್ಕರಿಸಿತು.

ನಡೆಯದ ಕಲಾಪ: ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ನೀಟ್‌ ಅಕ್ರಮದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಕೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ಓಂ ಬಿರ್ಲಾ, ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚೆಯ ಬಳಿಕ ಈ  ಬಗ್ಗೆ ಪ್ರಸ್ತಾಪಿಸಿ’ ಎಂದು ಹೇಳಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಕೂಡ ಧ್ವನಿಗೂಡಿಸಿದರು. 

ಇದಕ್ಕೆ ಒಪ್ಪದ ರಾಹುಲ್‌, ನೀಟ್ ಬಗ್ಗೆ ಮಾತು ಮುಂದುವರಿಸುತ್ತಾ ಮೈಕ್‌ ಬಂದ್‌ ಮಾಡಬಾರದು ಎಂದು ಹೇಳಿದರು. ‘ನನ್ನ ಬಳಿ ಅದರ ಸ್ವಿಚ್ ಇಲ್ಲ’ ಎಂದು ಸ್ಪೀಕರ್‌ ಹೇಳಿದರು. 

ಅದಾಗಿ ಕೆಲ ಹೊತ್ತಿನಲ್ಲಿ ರಾಹುಲ್‌ ಮಾತನಾಡುವಾಗ ಮೈಕ್‌ ಬಂದ್‌ ಆಯಿತು. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು.  

ಸದನವನ್ನು ಮಧ್ಯಾಹ್ನ 12ರವರೆಗೆ ಸ್ಪೀಕರ್‌ ಮುಂದೂಡಿದರು. ಕಲಾಪ ಮತ್ತೆ ಆರಂಭವಾದಾಗ, ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸುವುದಕ್ಕಾಗಿ ನೀಟ್‌ ವಿಚಾರದ ಬಗ್ಗೆ ‘ಗೌರವಯುತ’ ಚರ್ಚೆ ನಡೆಯಬೇಕು ಎಂದು ರಾಹುಲ್‌ ಒತ್ತಾಯಿಸಿದರು. 

ಸದನದ ನಿಯಮಗಳನ್ನು ಪಾಲಿಸುವಂತೆ ರಾಹುಲ್‌ ಅವರಿಗೆ ಸ್ಪೀಕರ್‌ ಬಿರ್ಲಾ ಸಲಹೆ ನೀಡಿದರು. 

ಆದರೆ, ರಾಹುಲ್‌ ಗಾಂಧಿ ಮತ್ತು ವಿರೋಧ ಪಕ್ಷಗಳ ಸದಸ್ಯರು ತಮ್ಮ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದರು. ಆ ನಂತರ ಬಿರ್ಲಾ ಅವರು ಕಲಾಪವನ್ನು ಸೋಮವಾರದವರೆಗೆ ಮುಂದೂಡಿದರು. 

ಮೇಲ್ಮನೆಯಲ್ಲೂ ಕೋಲಾಹಲ: ನೀಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಕಲಾಪ ಮುಂದೂಡಿಕೆಗೆ ಸಾಕ್ಷಿಯಾದ ರಾಜ್ಯಸಭೆಯಲ್ಲಿ ಶುಕ್ರವಾರ ಹಲವು ನಾಟಕೀಯ ಬೆಳವಣಿಗೆಗಳು ಮತ್ತು ಇದುವರೆಗೂ ಕಂಡು ಕೇಳರಿಯದ ಘಟನೆಗಳು ನಡೆದವು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸರ್ಕಾರದ ಪರವಾಗಿ ಮಾತನಾಡಿದರೆ, ಕಾಂಗ್ರೆಸ್‌ ಸದಸ್ಯೆ ಫೂಲೊ ನೇತಾಂ ದೇವಿ ಅವರು ಸದನದ ಒಳಗಡೆ ತಲೆ ಸುತ್ತು ಬಂದು ಬಿದ್ದರು. ನಂತರ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು. 

ನೋಟಿಸ್‌ ತಿರಸ್ಕಾರ: ಸದನದ ಎಲ್ಲ ಕಲಾಪಗಳನ್ನೂ ಬದಿಗೊತ್ತಿ ನೀಟ್‌ ಅಕ್ರಮದ ಕುರಿತ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ತೃಣಮೂಲ ಕಾಂಗ್ರೆಸ್‌ನ 11 ಸೇರಿದಂತೆ ವಿರೋಧ ಪಕ್ಷಗಳ 22 ನೋಟಿಸ್‌ಗಳನ್ನು ಸಭಾಪತಿ ಜಗದೀಪ್‌ ಧನಕರ್‌ ತಿರಸ್ಕರಿಸಿದರು. ಇದರಿಂದ ಅಸಮಾಧಾನಗೊಂಡ ವಿರೋಧ ಪಕ್ಷಗಳ ಸದಸ್ಯರು ತಮ್ಮ ಆಸನಗಳಿಂದ ಎದ್ದು, ಘೋಷಣೆಗಳನ್ನು ಕೂಗಿದರಲ್ಲದೇ ಸಭಾಪತಿ ಪೀಠದ ಮುಂದೆ ಜಮಾಯಿಸಿದರು. ಹಾಗಾಗಿ, ಮಧ್ಯಾಹ್ನ 12 ಗಂಟೆಯವರೆಗೆ ಸದನವನ್ನು ಮಂದೂಡಲಾಯಿತು. 

ಕಲಾಪ ಮತ್ತೆ ಆರಂಭಗೊಂಡಾಗ ಉಪ ಸಭಾಪತಿ ಹರಿವಂಶ್ ಅವರು ಬಿಜೆಪಿ ಸದಸ್ಯ ಸುಧಾಂಶು ತ್ರಿವೇದಿ ಅವರಿಗೆ ವಂದನಾ ನಿರ್ಣಯ ಮಂಡಿಸುವಂತೆ ಸೂಚಿಸಿದರು. ವಿರೋಧ ಪಕ್ಷಗಳು ಆಗಲೂ ಪ್ರತಿಭಟನೆ ಮುಂದುವರಿಸಿದವು.

ದೇವೇಗೌಡ ಬೆಂಬಲ: ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು, ‘ನೀಟ್‌ ಬಗ್ಗೆ ತನಿಖೆ ನಡೆಯುತ್ತಿರುವಾಗ, ಹೊಣೆಗಾರಿಕೆಯನ್ನು ಯಾರ ಮೇಲೆ ನಿಗದಿ ಮಾಡುವುದಕ್ಕೆ ಆಗುತ್ತದೆ? ಶಿಕ್ಷಣ ಸಚಿವರಿಗೆ ಈಗ ಜವಾಬ್ದಾರಿಯನ್ನು ನಿಗದಿ ಪಡಿಸಲು ಸಾಧ್ಯವಿಲ್ಲ. ತನಿಖೆಯಿಂದ ಮಾತ್ರ ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿರುವುದು ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ’ ಎಂದು ಹೇಳಿದರು. 

ಕಲಾಪ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸೊಪ್ಪುಹಾಕದ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. 

ಸಭಾಪತಿ ಧನಕರ್‌ ಅವರು ಆಸನಕ್ಕೆ ಮರಳಿದ ನಂತರ ಖರ್ಗೆಯವರು ಮಾತನಾಡಲು ಮುಂದಾದರು. ಇದಕ್ಕೆ ಅವರು ಅವಕಾಶ ನೀಡಲಿಲ್ಲ. ಖರ್ಗೆ ಸೇರಿದಂತೆ ಇತರ ಸದಸ್ಯರು ಮತ್ತೆ ಪೀಠದ ಮುಂದೆ ಪ್ರತಿಭಟನೆ ನಡೆಸಿದರು. 

ನೀಟ್‌ ಚರ್ಚೆಗೆ ಸರ್ಕಾರ ಸಿದ್ಧವಿದೆ. ಎಲ್ಲವೂ ನಿಯಮಾವಳಿಯಂತೆ ನಡೆಯಬೇಕು ವಿರೋಧ ಪಕ್ಷಗಳು ಸಭ್ಯತೆ ಮೀರಬಾರದು
-ಧರ್ಮೇಂದ್ರ ಪ್ರಧಾನ್‌ ಶಿಕ್ಷಣ ಸಚಿವ
‘ಇಂಡಿಯಾ’ ಕೂಟವು ನೀಟ್‌ ಬಗ್ಗೆ ರಚನಾತ್ಮಕ ಚರ್ಚೆ ಬಯಸಿದೆ. ಆದರೆ ನಮಗೆ ಅವಕಾಶ ನೀಡದಿರುವುದು ದುರದೃಷ್ಟಕರ
-ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ
ಯಾರಿಗೂ ತೊಂದರೆ ಕೊಡಲು ನಾವು ಬಯಸಿಲ್ಲ. ವಿದ್ಯಾರ್ಥಿಗಳ ವಿಚಾರ ಪ್ರಸ್ತಾಪಿಸಲು ಬಯಸಿದ್ದೆವು. ಸಭಾಪತಿ ಅವಕಾಶ ನೀಡಲಿಲ್ಲ
-ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ

ಖರ್ಗೆ–ಧನಕರ್‌ ಏಟು ಎದಿರೇಟು

ಕಲಾಪ ಮುಂದೂಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ‘ಮಾತನಾಡಲು ಅವಕಾಶ ನೀಡುವಂತೆ ನಾನು ಮಾಡಿದ ಮನವಿಯನ್ನು ಸಭಾಪತಿಯವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರು. ಅವರ ಗಮನ ಸೆಳೆಯುವುದಕ್ಕಾಗಿ ನಾನು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಹೋದೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಲಕ್ಷಾಂತರ ಮಕ್ಕಳು ಆತಂಕಗೊಂಡಿದ್ದಾರೆ’ ಎಂದು ಹೇಳಿದರು.  ಸದನದಲ್ಲಿ ಖರ್ಗೆ ಮತ್ತು ವಿರೋಧ ಪಕ್ಷಗಳ ಸದಸ್ಯರ ವರ್ತನೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಭಾಪತಿ ಜಗದೀಪ್‌ ಧನಕರ್‌ ‘ಇದು ಅತ್ಯಂತ ಹೀನ ಮತ್ತು ಅಶಿಸ್ತಿನ ವರ್ತನೆ’ ಎಂದರಲ್ಲದೆ ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಇದು ‘ಕಳಂಕಿತ’ ದಿನ’ ಎಂದು ಹೇಳಿದರು.  ‘ಈ ಸಂಸ್ಥೆಗೆ ಕಳಂಕ ಹಚ್ಚಿರುವುದನ್ನು ಅಗೌರವ ತೋರಿದ್ದನ್ನು ನಾನು ಕಂಡೆ. ಇದು ಪ್ರಜಾಪ್ರಭುತ್ವದ ದೇವಾಲಯಕ್ಕೆ ಮಾಡಬಹುದಾದ ಅತ್ಯಂತ ಕೆಟ್ಟ ಅಪಚಾರ. ಆದೇಶವನ್ನು ಪಾಲನೆ ಮಾಡಬೇಕಾದವರಿಂದಲೇ ಇದು ನಡೆದಿದೆ ಎಂದರೆ ಇದಕ್ಕಿಂತ ದೊಡ್ಡ ದುರದೃಷ್ಟ ಬೇರೆ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT