ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳ ಒಗ್ಗಟ್ಟಿಗೆ ತರ್ಕಬದ್ಧ ನಿರೂಪಣೆ ಅಗತ್ಯ: ಪ್ರಶಾಂತ್‌ ಕಿಶೋರ್‌

Published 4 ಜುಲೈ 2023, 16:39 IST
Last Updated 4 ಜುಲೈ 2023, 16:39 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ದೇಶದ ವಿರೋಧ ಪಕ್ಷಗಳು ರಾಜಕೀಯ ಅಂಕಗಣಿತವನ್ನೇ ನೆಚ್ಚಿಕೊಂಡು ಕೂರುವ ಬದಲಿಗೆ ತರ್ಕಬದ್ಧ ನಿರೂಪಣೆಯೊಂದಿಗೆ ಒಗ್ಗಟ್ಟು ಪ್ರದರ್ಶಿಸಿ ಮುಂದೆ ಸಾಗಬೇಕು ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ತಿಳಿಸಿದರು.

ಬಿಹಾರದ ಸಮಸ್ತೀಪುರ ಜಿಲ್ಲೆಯ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಡಳಿತ ನಡೆಸುವವರ ವಿರುದ್ಧ ವಿರೋಧ ಪಕ್ಷಗಳು ಸಂಯೋಜಿತವಾಗಿ ಹೋರಾಡಬೇಕು. ತುರ್ತು ಪರಿಸ್ಥಿತಿ ಮತ್ತು ಜಯಪ್ರಕಾಶ್‌ ನಾರಾಯಣ್‌ ಅವರ ಸಾಮೂಹಿಕ ಚಳವಳಿಯ ಹಿನ್ನೆಲೆಯಲ್ಲಿ ಜನತಾ ಪಕ್ಷದ ಪ್ರಯೋಗ ಬಂದಿತು. ಹಾಗೆಯೇ ವಿ.ಪಿ.ಸಿಂಗ್‌ ಅವರ ಆಳ್ವಿಕೆಯಲ್ಲಿ ಬೋಫೋರ್ಸ್‌ ಹಗರಣವು ಸಾರ್ವಜನಿಕರ ಗಮನ ಸೆಳೆಯಿತು ಎಂದು ಹೇಳಿದರು.

‘ತರ್ಕಬದ್ಧ ನಿರೂಪಣೆಯಿಲ್ಲದೆ, ಕೇವಲ ರಾಜಕೀಯ ಅಂಕಗಣಿತದ ಮೂಲಕ ಜನರ ಮನ ಗೆಲ್ಲಲು ಆಗದು’ ಎಂದು ಅವರು ತಿಳಿಸಿದರು.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಸೂಕ್ತವೋ ಅಲ್ಲವೋ ಎಂಬುದನ್ನು ಆ ರಾಜ್ಯದ ಜನರು ನಿರ್ಧರಿಸುತ್ತಾರೆ. ಆದರೆ ಕೆಲ ಶಾಸಕರು ಪಕ್ಷಾಂತರ ಮಾಡಿದ ಮಾತ್ರಕ್ಕೆ ಪಕ್ಷವು ಜನ ಬೆಂಬಲ ಕಳೆದುಕೊಳ್ಳುವುದಿಲ್ಲ. ಈ ಬೆಳವಣಿಗೆಯು ಎನ್‌ಸಿಪಿ ಮೇಲೆ ಗಂಭೀರ ಪರಿಣಾಮ ಬೀರುವಂತೆ ಕಾಣುತ್ತಿಲ್ಲ’ ಎಂದರು.

ಎನ್‌ಸಿಪಿಗೆ ಬಂದ ಸ್ಥಿತಿ ಜೆಡಿಯುಗೂ ಎದುರಾಗಬಹುದು ಎಂಬ ಮಾಧ್ಯಮಗಳ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದ ಬೆಳವಣಿಗೆಯು ಅನ್ಯ ರಾಜ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ. ಕಳೆದ ವರ್ಷ ಬಿಹಾರದಲ್ಲಿ ಉಂಟಾದ ಕ್ರಾಂತಿಯು ಬೇರೆಡೆ ಪರಿಣಾಮ ಬೀರಿರಲಿಲ್ಲ ಎಂದರು.

ಆದರೆ, ‘ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಬಿಹಾರದಲ್ಲಿ ಮಹಾ ಘಟಬಂಧನ್‌ ಉಳಿಯುವುದಿಲ್ಲ ಎಂಬುದನ್ನು ನಾನು ಪುನರುಚ್ಚರಿಸುತ್ತೇನೆ. ಈಗಾಗಲೇ ಈ ಹಾದಿಯಲ್ಲಿ ಮಾಜಿ ಮುಖ್ಯಮಂತ್ರಿ ಜಿತನ್‌ ರಾಂ ಮಾಂಝಿ ಅವರ ನಿರ್ಗಮನವೂ ಆಗಿದೆ’ ಎಂದು ಹೇಳಿದರು.

Highlights -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT