ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿನ್ನಿಸ್‌ ಪುಸ್ತಕದ ಹೊಸ ಆವೃತ್ತಿಯಲ್ಲಿ ಭಾರತದ 60ಕ್ಕೂ ಹೆಚ್ಚು ಸಾಧನೆಗಳ ಪಟ್ಟಿ

Published 14 ಅಕ್ಟೋಬರ್ 2023, 16:26 IST
Last Updated 14 ಅಕ್ಟೋಬರ್ 2023, 16:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗಿನೆಸ್ ವಿಶ್ವ ದಾಖಲೆಗಳ 2024ನೇ ಸಾಲಿನ ಅಂತಿಮ ಆವೃತ್ತಿಯ ಪುಸ್ತಕ ಬಿಡುಗಡೆಯಾಗಿದ್ದು, ಜಗತ್ತಿನ 2,638 ಸಾಧನೆ/ದಾಖಲೆಗಳನ್ನು ಪಟ್ಟಿ ಮಾಡಲಾಗಿದೆ. ಅತ್ಯಂತ ಹೆಚ್ಚು ಮಳೆ ಬೀಳುವ ಮೇಘಾಲಯದ ಚಿರಾಪುಂಜಿ ಸೇರಿದಂತೆ ಭಾರತದ 60ಕ್ಕೂ ಹೆಚ್ಚು ದಾಖಲೆಗಳು ಈ ಪುಸ್ತಕದಲ್ಲಿ ಸ್ಥಾನ ಪಡೆದಿವೆ.

ಗಿನ್ನಿಸ್‌ ದಾಖಲೆಯ ಪುಸ್ತಕವನ್ನು ಭಾರತದಲ್ಲಿ ‘ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌’ ಪ್ರಕಾಶನ ಪ್ರಕಟಿಸಿದ್ದು, 9 ಅಧ್ಯಾಯಗಳನ್ನು ಒಳಗೊಂಡಿದೆ. ಪುಸ್ತಕದ ಮುಖಪುಟವನ್ನು ಪ್ರಶಸ್ತಿ ವಿಜೇತ ಕಲಾವಿದ ರಾಡ್‌ ಹಂಟ್‌ ಚಿತ್ರಿಸಿದ್ದಾರೆ.  

ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ಮಳೆಯಾಗುವ ಚಿರಾಪುಂಜಿಯು ಅತ್ಯಂತ ಹಳೇ ದಾಖಲೆಗಳ ಪೈಕಿ ಒಂದೆನಿಸಿಕೊಂಡಿದೆ. 1995ರ ಜೂನ್ 15-16 ರಂದು ಚಿರಾಪುಂಜಿಯು 48 ಗಂಟೆಗಳ ಅವಧಿಯಲ್ಲಿ 2.493 ಮೀ (8 ಅಡಿ 2 ಇಂಚು) ಮಳೆಯನ್ನು ಕಂಡಿತ್ತು. ಈ ಪ್ರದೇಶದಲ್ಲಿ ಹೆಚ್ಚು ಮಳೆಯಾಗುವುದು ಸಾಮಾನ್ಯವೇ ಆದರೂ, ಕೇವಲ 48 ಗಂಟೆಗಳ ಅವಧಿಯಲ್ಲಿ ಈ ಪರಿಯ ಮಳೆಯಾಗಿದ್ದು ವಿರಳ. ಇದನ್ನು ವಿಶ್ವ ಹವಾಮಾನ ಸಂಘಟನೆಗಳು ಖಾತ್ರಿಪಡಿಸಿವೆ’ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.  

ಭಾರತೀಯ ಶಿಲ್ಪಿ ಕನಾಯಿ ಕುಂಜಿರಾಮನ್ ಅವರು ರೂಪಿಸಿದ ‘ಜಲಕನ್ಯಕಾ’ (ಮತ್ಸ್ಯಕನ್ಯೆ) ಪ್ರತಿಮೆಯನ್ನೂ ಪುಸ್ತಕದಲ್ಲಿ ದಾಖಲಿಸಲಾಗಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಮತ್ಸಕನ್ಯೆಯ ಶಿಲ್ಪವೆನಿಸಿಕೊಂಡಿದೆ. ಕೇರಳದ ತಿರುವನಂತಪುರಂನ ಶಂಕುಮುಖಂ ಬೀಚ್‌ನಲ್ಲಿರುವ ಮತ್ಸ್ಯಕನ್ಯೆ 26.5 ಮೀ (87 ಅಡಿ) ಉದ್ದ ಮತ್ತು 7.6 ಮೀ (25 ಅಡಿ) ಎತ್ತರವಿದೆ.

ತಮ್ಮ ಹಳೇ ಕಾರಿನಲ್ಲಿ 1989–1991 ನಡುವಿನ ಅವಧಿಯಲ್ಲಿ ವಿಶ್ವ ಪರ್ಯಾಟನೆ ಮಾಡಿ, ಆರು ಖಂಡಗಳನ್ನು ಸುತ್ತು ಹಾಕಿದ ಭಾರತದ ದಂಪತಿ ಚೌಧರಿ ಮತ್ತು ಅವರ ಪತ್ನಿ ನೀನಾ ಚೌಧರಿಯವರೂ ಗಿನಿಸ್‌ ದಾಖಲೆ ಪುಸ್ತಕದ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ದಂಪತಿ 1989ರ ನ.17ರಂದು ತಮ್ಮ ಕಾಂಟೆಸ್ಸಾ ಕಾರಿನಲ್ಲಿ ಪರ್ಯಾಟನೆ ಆರಂಭಿಸಿದ್ದರು. 69 ದಿನ 19 ಗಂಟೆಗಳ ಕಾಲ ಜಗತ್ತಿನಾದ್ಯಂತ ಸಂಚಾರ ನಡೆಸಿದ್ದರು. ಅವರ ಯಾನ ದೆಹಲಿಯಲ್ಲಿ ಅಂತ್ಯಗೊಂಡಿತ್ತು.    

ಜಾನಪದ ಸಂಗೀತಗಾರ, ಪದ್ಮಶ್ರೀ ಪುರಸ್ಕೃತ ತಂಗಾ ಡಾರ್ಲಾಂಗ್ ಅವರು ಗಿನಿಸ್‌ ದಾಖಲೆ ಪುಸ್ತದಲ್ಲಿ ಸ್ಥಾನ ಪಡೆದಿದ್ದಾರೆ. ತ್ರಿಪುರಾದ ಮುರುಯಿ ಗ್ರಾಮದವರಾದ ಡಾರ್ಲಾಂಗ್ ಅವರು ಕೊನೆಯ ಬುಡಕಟ್ಟು ಸಂಗೀತಗಾರ. ತ್ರಿಪುರಾದ ಡಾರ್ಲಾಂಗ್ ಬುಡಕಟ್ಟು ಜನರ ವಾದ್ಯ ‘ರೋಸೆಮ್’ ರಕ್ಷಣೆಯಲ್ಲಿ ಅವರು ನಿರತರಾಗಿದ್ದಾರೆ.

62.8 ಸೆಂ.ಮೀ (24.7 ಅಂಗುಲ)ನ ನಾಗಪುರದ ಜ್ಯೋತಿ ಅಮ್ಗೆ ಎಂಬುವವರು ಅತ್ಯಂತ ಕುಬ್ಜ ಮಹಿಳೆ ಎನಿಸಿಕೊಂಡಿದ್ದು, ಇವರಿಗೂ ಗಿನಿಸ್‌ ದಾಖಲೆ ಮನ್ನಣೆ ದೊರೆತಿದೆ. 

ಅವಧಿ ಪೂರ್ವವಾಗಿ ಜನಿಸಿದ್ದ 445 ಜನ ಹೈದರಾಬಾದ್‌ನ ‘ರೈನ್‌ಬೋ ಹಾಸ್ಪಿಟಲ್ಸ್ ಇಂಡಿಯಾ‘ದಲ್ಲಿ 2016ರ ನವೆಂಬರ್ 17ರಂದು ಒಟ್ಟಾಗಿ ಸೇರಿದ್ದರು. ಈ ಘಟನೆಯನ್ನು ದಾಖಲೆಯಾಗಿ ಪರಿಗಣಿಸಲಾಗಿದೆ. 

‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿಯು 2022 ಜುಲೈ 2ಕ್ಕೆ 3500 ಸಂಚಿಕೆಗಳನ್ನು ಕಂಡಿದೆ. ಇದು ಅತೀ ದೀರ್ಘ ಧಾರಾವಾಹಿ ಎನಿಸಿಕೊಂಡಿದ್ದು, ದಾಖಲೆ ಬರೆದಿದೆ. 

ಉದ್ಯಮಿ ಮುಕೇಶ್ ಅಂಬಾನಿಯವರ 27 ಅಂತಸ್ತಿನ ಗಗನಚುಂಬಿ ನಿವಾಸ ವಿಶ್ವದ ಅತಿದೊಡ್ಡ, ಎತ್ತರದ ಮತ್ತು ಅತ್ಯಂತ ದುಬಾರಿ ಖಾಸಗಿ ನಿವಾಸವೆನಿಸಿಕೊಂಡಿದೆ. 

ಯುನೆಸ್ಕೊ ಗುರುತಿಸಿರುವ 1,154 ಪಾರಂಪರಿಕ ತಾಣಗಳ ಪೈಕಿ ಆಗ್ರಾದಲ್ಲಿರುವ ತಾಜ್‌ಮಹಲ್‌ 2022ರ ಮಾರ್ಚ್‌ನಲ್ಲಿ 1.4 ದಶಲಕ್ಷ ಹುಡುಕಾಟಗಳನ್ನು ಕಂಡಿದ್ದು, ಇದನ್ನೂ ಗಿನಿಸ್‌ ಪುಸ್ತಕದಲ್ಲಿ ಸೇರಿಸಲಾಗಿದೆ. 

ಇನ್ನು, ತಮಿಳುನಾಡಿನ ಜೆ. ಜೆಸ್ಸಿಕಾ (ಒಂದು ಪಾದದ ಮೇಲೆ ನಿಂತು ಒಂದು ನಿಮಿಷದಲ್ಲಿ 213 ಹುಲಾ ಹೂಪ್‌ ತಿರುಗಿಸಿದ ಸಾಧನೆ) ಮತ್ತು ರೂಪಾ ಗಣೇಶನ್ (1 ಗಂಟೆ, 15 ನಿಮಿಷ 5 ಸೆಕೆಂಡ್‌ ಕಾಲ ಮತ್ಸ್ಯಕನ್ಯೆ ಯೋಗ ಭಂಗಿ ಪ್ರದರ್ಶನ) ಮಧ್ಯಪ್ರದೇಶದ ಆದಿತ್ಯ ಪಚೋಲಿ (ದೊಡ್ಡ ಪೇಟ) ಮತ್ತು ಗಿನ್ನೆಸ್ ರಿಷಿ (ದೇಹದ ಮೇಲೆ 366ಕ್ಕೂ ಹೆಚ್ಚು ಧ್ವಜದ ಹಚ್ಚೆ ಹೊಂದಿರುವ ವ್ಯಕ್ತಿ ) ಅವರ ಹೆಸರು ಗಿನಿಸ್‌ ಪುಸ್ತಕದಲ್ಲಿ ಸ್ಥಾನ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT