ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ಏಳು ಶಿಶುಗಳ ಸಾವು, ಆಸ್ಪತ್ರೆಯ ಮಾಲೀಕ ಬಂಧನ

Published 26 ಮೇ 2024, 12:59 IST
Last Updated 26 ಮೇ 2024, 12:59 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ದೆಹಲಿಯ ವಿವೇಕ್‌ ವಿಹಾರ್‌ ಪ್ರದೇಶದಲ್ಲಿರುವ ‘ಬೇಬಿ ಕೇರ್ ನ್ಯೂಬಾರ್ನ್’ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಏಳು ನವಜಾತ ಶಿಶುಗಳು ಮೃತಪಟ್ಟಿವೆ. ಪ್ರಕರಣ ಸಂಬಂಧ ಆಸ್ಪತ್ರೆ ಮಾಲೀಕ ನವೀನ್‌ ಕಿಚಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೇಬಿ ಕೇರ್ ನ್ಯೂಬಾರ್ನ್ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ 11.30ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ನಂತರ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿತು. 16 ಅಗ್ನಿ ಶಾಮಕ ವಾಹನಗಳನ್ನು ಬಳಸಿ, ಬೆಂಕಿಯನ್ನು ನಂದಿಸಲಾಯಿತು ಎಂದು ದೆಹಲಿ ಅಗ್ನಿ ಸೇವೆಗಳ (ಡಿಎಫ್‌ಎಸ್‌) ವಿಭಾಗೀಯ ಅಧಿಕಾರಿ ರಾಜೇಂದ್ರ ಅತ್ವಾಲ್‌ ಹೇಳಿದ್ದಾರೆ.

‘ಘಟನೆ ನಡೆದ ಬೆನ್ನಲ್ಲೇ ಆಸ್ಪತ್ರೆ ಮಾಲೀಕ ನವೀನ್‌ ಕಿಚಿ ಪರಾರಿಯಾಗಿದ್ದರು. ನವೀನ್‌ ವಿರುದ್ಧ ಐಪಿಸಿಯ ಸೆಕ್ಷನ್ 336 ಮತ್ತು 304A ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅವರನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಲಾಗಿತ್ತು’ ಎಂದು ಡಿಸಿಪಿ (ಶಾಹದರ) ಸುರೇಂದ್ರ ಚೌಧರಿ ಹೇಳಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಗೊತ್ತಾಗಿಲ್ಲ. ಆದರೆ, ಬೆಂಕಿ ಹೊತ್ತಿಕೊಂಡಿದ್ದ ವೇಳೆ, ಆಸ್ಪತ್ರೆಯಲ್ಲಿದ್ದ ಆಮ್ಲಜನಕ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಪಕ್ಕದ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

‘ಆಸ್ಪತ್ರೆಯಲ್ಲಿದ್ದ 12 ನವಜಾತ ಶಿಶುಗಳನ್ನು ರಕ್ಷಿಸಲಾಗಿದ್ದು, ಏಳು ಶಿಶುಗಳು ಮೃತಪಟ್ಟವು. ಗಾಯಗೊಂಡಿರುವ ಐದು ಶಿಶುಗಳಿಗೆ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಡಿಎಫ್‌ಎಸ್‌ ಮುಖ್ಯಸ್ಥ ಅತುಲ್‌ ಗರ್ಗ್‌ ತಿಳಿಸಿದ್ದಾರೆ.

ಮೃತ ಶಿಶುಗಳ ದೇಹಗಳನ್ನು ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನೆರವೇರಿಸಲಾಯಿತು ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT