ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಸೂಚ್ಯಂಕ: ರಾಜ್ಯದ ಸ್ಥಾನ ಕುಸಿತ-ಕರ್ನಾಟಕಕ್ಕೆ ಏಳನೇ ಸ್ಥಾನ

Last Updated 29 ಅಕ್ಟೋಬರ್ 2021, 21:09 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಆಡಳಿತ ಸೂಚ್ಯಂಕದಲ್ಲಿ (ಪಿಎಐ) ಈ ಬಾರಿ ಕೇರಳ ಅಗ್ರ ಸ್ಥಾನ ಪಡೆದಿದೆ.ಕೇರಳವು ದೊಡ್ಡ ರಾಜ್ಯಗಳ ವಿಭಾಗದಲ್ಲಿ ಈ ಸ್ಥಾನ ಪಡೆದಿದ್ದು, ಕರ್ನಾಟಕವು ಏಳನೇ ಸ್ಥಾನ ಪಡೆದಿದೆ. 2020ರಲ್ಲಿ ಕರ್ನಾಟಕ ಐದನೇ ಸ್ಥಾನ ಪಡೆದಿತ್ತು. ಹೀಗಾಗಿ, ಒಂದು ವರ್ಷದಲ್ಲಿ ಎರಡು ಸ್ಥಾನಗಳ ಕುಸಿತ ಕಂಡಂತಾಗಿದೆ.

ಸಣ್ಣ ರಾಜ್ಯಗಳ ವಿಭಾಗದಲ್ಲಿ ಸಿಕ್ಕಿಂ ಅಗ್ರಸ್ಥಾನ ಪಡೆದಿದೆ. ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಪುದುಚೇರಿ ಮೊದಲ ಸ್ಥಾನ ಪಡೆದಿದೆ.ಸಾರ್ವಜನಿಕ ಆಡಳಿತ ಕೇಂದ್ರದ (ಪಿಎಸಿ) ಮುಖ್ಯಸ್ಥ ಡಾ.ಎ. ರವಿಂದ್ರ ಅವರು, 2021ನೇ ಸಾಲಿನ ರಾಜ್ಯಗಳ ರ‍್ಯಾಂಕಿಂಗ್‌ ಪಟ್ಟಿಯನ್ನು ವರ್ಚುವಲ್‌ ವ್ಯವಸ್ಥೆ ಮೂಲಕ ಬಿಡುಗಡೆ ಮಾಡಿದರು.

‘ಆದಾಯದ ಅಸಮಾನತೆ ಹೆಚ್ಚುತ್ತಿರುವುದನ್ನು ತಡೆಯುವುದು ಇಂದಿನ ಮುಖ್ಯ ಸವಾಲು. ಜಗತ್ತಿನಾದ್ಯಂತ ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯಿಂದ ವಿಭಿನ್ನ ರೀತಿಯ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಬೇಕು. ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳಿಗೆ ಈ ಸಮಸ್ಯೆಗಳಿಗೆ ಸ್ಪಂದಿಸಿವೆ. ಆದರೆ, ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಾಗಿದೆ’ ಎಂದು ಡಾ. ಎ. ರವೀಂದ್ರ ಹೇಳಿದರು.

ಪಿಎಸಿ ಕಾರ್ಯಕ್ರಮ ಅಧಿಕಾರಿ ಸಮೃದ್ಧಿ ಪಾಂಡೆ, ‘ಕೇಂದ್ರ ಸರ್ಕಾರದ ಪ್ರಮುಖ ಐದು ಯೋಜನೆಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿರುವುದನ್ನು ಸಹ ಸೂಚ್ಯಂಕ ಸಿದ್ಧಪಡಿಸುವಾಗ ಪರಿಗಣಿಸಲಾಗಿದೆ’ ಎಂದು ವಿವರಿಸಿದರು.

‘ಕೇಂದ್ರ ಸರ್ಕಾರದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್‌(ಎನ್‌ಎಂಎಚ್‌), ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು(ಎಸ್‌ಎಂಎಸ್‌ಎ), ಸಮಗ್ರ ಶಿಕ್ಷಾ ಅಭಿಯಾನ (ಎಸ್‌ಎಂಎಸ್‌ಎ) ಹಾಗೂ ಮಧ್ಯಾಹ್ನದ ಬಿಸಿಯೂಟ (ಎಂಡಿಎಂಎಸ್‌) ಅನುಷ್ಠಾನದ ಕುರಿತು ವಿಶ್ಲೇಷಿಸಲಾಗಿದೆ’ ಎಂದುತಿಳಿಸಿದರು.

ದೇಶದಲ್ಲಿ ಸಾರ್ವಜನಿಕ ಆಡಳಿತ ಸುಧಾರಣೆಗೆ ಸಲಹೆ ನೀಡುವ ಉದ್ದೇಶದಿಂದ 1994ರಲ್ಲಿ ಪಿಎಸಿಯನ್ನು ಸ್ಥಾಪಿಸಲಾಗಿದೆ. ರಾಜ್ಯಗಳ ಆಡಳಿತಕ್ಕೆ ಸಂಬಂಧಿಸಿದ 14 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಹಾಗೂ 43 ಆದ್ಯತಾ ವಿಷಯಗಳನ್ನು ಆಧರಿಸಿ ಅಧ್ಯಯನ ನಡೆಸಿ ಸೂಚ್ಯಂಕ ಸಿದ್ಧಪಡಿಸಲಾಗುತ್ತಿದೆ.

ಪ್ರಸಕ್ತ ವರ್ಷ ಕೋವಿಡ್‌–19ಗೆ ಸಂಬಂಧಿಸಿದಂತೆ ರಾಜ್ಯಗಳು ಕೈಗೊಂಡ ಕ್ರಮಗಳು ಮತ್ತು ಈ ಸಾಂಕ್ರಾಮಿಕ ಕಾಯಿಲೆಯಿಂದ ಉಂಟಾದ ಪರಿಣಾಮಗಳ ಬಗ್ಗೆಯೂ ವಿಶ್ಲೇಷಿಸಲಾಗಿದೆ. ಕರ್ನಾಟಕವು ಕೆಲವು ವಲಯಗಳಲ್ಲಿ ಕಳಪೆ ಸಾಧನೆ ತೋರಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

--

ದೊಡ್ಡ ರಾಜ್ಯಗಳು ಶ್ರೇಯಾಂಕ

ಕೇರಳ;1

ತಮಿಳುನಾಡು;2

ತೆಲಂಗಾಣ;3

ಛತ್ತೀಸಗಡ;4

ಗುಜರಾತ್‌;5

ಪಂಜಾಬ್‌; 6

ಕರ್ನಾಟಕ;7

ಆಂಧ್ರಪ್ರದೇಶ; 8

ಜಾರ್ಖಂಡ;9

ಮಧ್ಯಪ್ರದೇಶ;10

---

ಸಣ್ಣ ರಾಜ್ಯಗಳು ಶ್ರೇಯಾಂಕ

ಸಿಕ್ಕಿಂ;1

ಗೋವಾ;2

ಮಿಜೋರಾಂ:3

ಹಿಮಾಚಲ ಪ್ರದೇಶ;4

ತ್ರಿಪುರಾ;5

ಮೇಘಾಲಯ;6

ಅರುಣಾಚಲ ಪ್ರದೇಶ 7

ನಾಗಾಲ್ಯಾಂಡ್‌;8

ದೆಹಲಿ;9

ಉತ್ತರಾಖಂಡ;10

ಮಣಿಪುರ;11

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT