ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥ ಯಾತ್ರೆ ಮೇಲೆ ಪಾಕ್ ಉಗ್ರರ ಕಣ್ಣು; ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್

ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ತಡರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್‌–ಎ–ತಯಬಾ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಜೂನ್‌ 30ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಎನ್‌ಕೌಂಟರ್‌ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಒಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕಣಿವೆ ನಾಡಿನಲ್ಲಿ ನಾಗರಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿರುವ ಬೆನ್ನಲ್ಲೇ ಭಯೋತ್ಪಾದಕರ ನಿಗ್ರಹಕ್ಕೆ ಶೋಧ ಕಾರ್ಯಾಚರಣೆ ಹೆಚ್ಚಿಸಲಾಗಿದೆ.

ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲು ಮೂವರು ಉಗ್ರರು ಯೋಜನೆ ರೂಪಿಸಿದ್ದರು. ಪಾಕಿಸ್ತಾನದ ಇಬ್ಬರು ಉಗ್ರರು ಹಾಗೂ ಒಬ್ಬ ಸ್ಥಳೀಯ ಉಗ್ರ ಸೇರಿ ರೂಪಿಸಿದ್ದ ಯೋಜನೆಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

ಕಾರ್ಯಾಚರಣೆಯ ಕುರಿತು ಟ್ವೀಟಿಸಿರುವ ಕಾಶ್ಮೀರ ವಲಯದ ಪೊಲೀಸರು, 'ಪಾಕಿಸ್ತಾನ ಮೂಲದ ಪಿತೂರಿಗಾರರು ಸ್ಥಳೀಯ ಉಗ್ರ ಆದಿಲ್‌ ಹುಸೇನ್‌ ಮಿರ್‌ ಜೊತೆಗೆ ಪಾಕಿಸ್ತಾನದ ಲಷ್ಕರ್‌–ಎ–ತಯಬಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಕಳುಹಿಸಿದ್ದರು. 2018ರಿಂದ ಪಾಕಿಸ್ತಾನದಲ್ಲಿದ್ದ ಆದಿಲ್‌ ಹುಸೇನ್‌ ಅನಂತ್‌ನಾಗ್‌ನ ಪಹಲ್‌ಗಾಮ್‌ ಮೂಲದವನು. ಮೂವರೂ ಉಗ್ರರು ಯಾತ್ರೆಯ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದರು' ಎಂದು ಮಾಹಿತಿ ನೀಡಿದ್ದಾರೆ.

ಈಗ ಮೂವರೂ ಉಗ್ರರೂ ಸಾವಿಗೀಡಾಗಿದ್ದಾರೆ. ಆದಿಲ್‌ ಹುಸೇಲ್‌ ವಾಘಾ ಗಡಿಯ ಮೂಲಕ 2018ರಲ್ಲಿ ಪಾಕಿಸ್ತಾನಕ್ಕೆ ತೆರಳಿರುವುದು ಪೊಲೀಸ್‌ ದಾಖಲೆಗಳಿಂದ ತಿಳಿದು ಬಂದಿರುವುದಾಗಿ ಟ್ವೀಟಿಸಲಾಗಿದೆ.

ಕಾರ್ಯಾಚರಣೆಯನ್ನು 'ದೊಡ್ಡ ಯಶಸ್ಸು' ಎಂದು ಕರೆದುಕೊಂಡಿರುವ ಕಾಶ್ಮೀರ ಪೊಲೀಸರು, ಐಜಿಪಿ ವಿಜಯ್‌ ಕುಮಾರ್‌ ಅವರ ಹೇಳಿಕೆಯನ್ನು ಟ್ವೀಟಿಸಿದ್ದಾರೆ. 'ಬಲಿಯಾಗಿರುವ ಉಗ್ರರ ಪೈಕಿ ಒಬ್ಬನನ್ನು ಪಾಕಿಸ್ತಾನ ಮೂಲದ ಫೈಸಲಾಬಾದ್‌ನ ಅಬ್ದುಲ್ಲಾ ಗೌಜರಿ ಎಂದು ಗುರುತಿಸಲಾಗಿದೆ. ಎನ್‌ಕೌಂಟರ್‌ ನಂತರ ದಾಖಲೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದ ಇಬ್ಬರು ಉಗ್ರರು ಸೊಪೋರ್‌ನ ಎನ್‌ಕೌಂಟರ್‌ನಿಂದ ತಪ್ಪಿಸಿಕೊಂಡಿದ್ದರು. ಅವರ ಚಲನವಲನದ ಮೇಲೆ ನಿಗಾ ಇಡಲಾಗಿತ್ತು' ಎಂದು ಪ್ರಕಟಿಸಲಾಗಿದೆ.

ಎರಡು ಎಕೆ–47 ರೈಫಲ್‌ಗಳು, 10 ಮ್ಯಾಗಜೀನ್‌ಗಳು, ಲೈವ್‌ ರೌಂಡ್ಸ್‌ ಹಾಗೂ ವೈ–ಎಸ್‌ಎಂಎಸ್‌ ಸಾಧನ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ ಕಾಶ್ಮೀರದ ಅಮರನಾಥ ಯಾತ್ರೆಯು ಜೂನ್‌ 30ರಿಂದ ಆರಂಭವಾಗಲಿದ್ದು, 43 ದಿನ ಯಾತ್ರೆಗೆ ಅವಕಾಶ ಇರಲಿದೆ. ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ ಅವರು ಯಾತ್ರೆಯ ಸಿದ್ಧತೆಗೆ ಸಂಬಂಧಿಸಿದಂತೆ ಕಳೆದ ವಾರ ಉನ್ನತಮಟ್ಟದ ಸಭೆ ನಡೆಸಿದ್ದರು. ಅದಕ್ಕೂ ಮುನ್ನ ಗೃಹ ಸಚಿವ ಅಮಿತ್‌ ಶಾ ಸಹ ಅಧಿಕಾರಿಗಳ ಸಭೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT