ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುರಿ ಜಗನ್ನಾಥ ದೇವಾಲಯ: ರತ್ನ ಭಂಡಾರ ತೆರೆಯಲು ಸರ್ಕಾರಕ್ಕೆ ಶೀಘ್ರ ಶಿಫಾರಸು

ಪುರಿ ಜಗನ್ನಾಥ ದೇವಾಲಯ: ಉನ್ನತ ಸಮಿತಿಯಿಂದ ನಿರ್ಧಾರ
Published 9 ಜುಲೈ 2024, 15:34 IST
Last Updated 9 ಜುಲೈ 2024, 15:34 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ದಲ್ಲಿ ಇರಿಸಲಾಗಿರುವ ಬೆಲೆಬಾಳುವ ವಸ್ತುಗಳನ್ನು ಪಟ್ಟಿ ಮಾಡುವ ಸಲುವಾಗಿ ನೇಮಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು ಭಂಡಾರದ ಒಳಕೋಣೆಯನ್ನು ಜುಲೈ 14ರಂದು ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ.

ಪುರಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಿಸ್ವನಾಥ್‌ ರಥ್‌ ಅವರು ತಿಳಿಸಿದರು.  

 ರತ್ನ ಭಂಡಾರದ ನಕಲಿ ಕೀಲಿಕೈಯನ್ನು ಸಮಿತಿ ಎದುರು ಇರಿಸುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿಯ (ಎಸ್‌ಜೆಟಿಎ) ಮುಖ್ಯ ಆಡಳಿತಾಧಿಕಾರಿಗೆ ಸೂಚಿಸಲಾಯಿತು. ಆದರೆ, ಆಡಳಿತ ಮಂಡಳಿಯು ರಥಯಾತ್ರೆ ಆಯೋಜಿಸುವಲ್ಲಿ ನಿರತವಾಗಿರುವ ಕಾರಣ ಕೀಲಿಕೈ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು. ಹೀಗಾಗಿ ಜುಲೈ 14ರಂದು ಕೀಲಿಕೈ ನೀಡುವಂತೆ ಸಮಿತಿ ಹೇಳಿದೆ.    

ಒಂದುವೇಳೆ, ನಕಲಿ ಕೀಲಿಕೈ ಬಳಸಿ ಭಂಡಾರದ ಬೀಗವನ್ನು ತೆಗೆಯಲು ಸಾಧ್ಯವಾಗದಿದ್ದರೆ, ಅದನ್ನು ಒಡೆದು ತೆಗೆಯಲು ಸಮಿತಿ ನಿರ್ಧರಿಸಿದೆ. ಭಂಡಾರದಲ್ಲಿರುವ ಆಭರಣಗಳನ್ನು ಲೆಕ್ಕಹಾಕಲು ಮತ್ತು ಭಂಡಾರದ ದುರಸ್ತಿ ಕಾರ್ಯಕ್ಕೆ ಅನುಸರಿಸಬೇಕಾದ ಪ್ರಮಾಣೀಕೃತ ಕಾರ್ಯವಿಧಾನ (ಎಸ್‌ಒಪಿ) ಕುರಿತೂ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ನಿಯಮದ ಪ್ರಕಾರ ಸಭೆಯಲ್ಲಿ ನಿರ್ಧರಿಸಲಾದ ಅಂಶಗಳನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಕಳಿಸಲಾಗುವುದು ಮತ್ತು ಮಂಡಳಿಯು ಅದನ್ನು ಸರ್ಕಾರದ ಮುಂದಿಡಲಿದೆ. ಸರ್ಕಾರದಿಂದ ಅನುಮತಿ ದೊರೆತ ಬಳಿಕ ಕೋಣೆಯನ್ನು ತೆರೆಯಲಾಗುವುದು ಎಂದು ರಥ್‌ ಹೇಳಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರತ್ನ ಭಂಡಾರದ ದುರಸ್ತಿ ಕಾರ್ಯ ಮತ್ತು ಆಭರಣಗಳ ಎಣಿಕೆ ಕೈಗೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಆಶ್ವಾಸನೆ ನೀಡಿತ್ತು. 

ಈ ಭಂಡಾರವನ್ನು 1978ರಲ್ಲಿ ಕಡೆಯ ಬಾರಿ ತೆರೆಯಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT