ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಭದ್ರತೆ ನನ್ನ ಜವಾಬ್ದಾರಿ: ಸ್ಪೀಕರ್ ಓಂ ಬಿರ್ಲಾ

Published 14 ಡಿಸೆಂಬರ್ 2023, 16:50 IST
Last Updated 14 ಡಿಸೆಂಬರ್ 2023, 16:50 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನಲ್ಲಿ ಭದ್ರತಾ ವೈಫಲ್ಯದ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷಗಳ ನಾಯಕರು ಒತ್ತಾಯಿಸುತ್ತಿರುವ ಬೆನ್ನಲ್ಲೇ ಸಂಸತ್ ಭವನದ ಸಂಕೀರ್ಣ ನನ್ನ ಸುಪರ್ದಿಯಲ್ಲಿದ್ದು, ಅಲ್ಲಿ ಭದ್ರತೆ ಖಚಿತಪಡಿಸುವುದು ನನ್ನ ಜವಾಬ್ದಾರಿ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ಅಮಿತ್ ಶಾ ಹೇಳಿಕೆಗೆ ಒತ್ತಾಯಿಸಿ ವಿಪಕ್ಷಗಳು ತೀವ್ರ ಗದ್ದಲವೆಬ್ಬಿಸಿದ್ದರಿಂದ ಇಂದು ಲೋಕಸಭಾ ಕಲಾಪ ಪದೇ ಪದೇ ಮುಂದೂಡಲ್ಪಟ್ಟಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಸ್ಪೀಕರ್ ಪೀಠದ ಮುಂದೆ ಗದ್ದಲವೆಬ್ಬಿಸಿದರು.

‘ಗೃಹಸಚಿವರು ಉತ್ತರ ಕೊಡಲೇಬೇಕು’ ಎಂದು ಬರೆದಿದ್ದ ಭಿತ್ತಿ ಪತ್ರಗಳನ್ನು ಹಿಡಿದು ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಮತ್ತೆ ಕೆಲವರು, ಲೋಕಸಭೆಗೆ ನುಗ್ಗಿದವರಿಗೆ ಪಾಸ್ ಕೊಡಿಸಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

'ಇಡೀ ಸಂಸತ್ತಿನ ಕಾರ್ಯಾಲಯಗಳು ಸಂಸತ್ ಭವನದ ವ್ಯಾಪ್ತಿಗೆ ಬರುತ್ತವೆ. ವಿಶೇಷವಾಗಿ ಲೋಕಸಭೆಯ ಅಡಿಯಲ್ಲಿ ಬರುತ್ತವೆ. ಇದು ನನ್ನ ಅಧಿಕಾರ ವ್ಯಾಪ್ತಿ. ಲೋಕಸಭಾ ಸ್ಪೀಕರ್ ಆಗಿ, ಪ್ರತಿಯೊಬ್ಬರ ಭದ್ರತೆಯನ್ನು ಖಚಿತಪಡಿಸುವುದು ನನ್ನ ಜವಾಬ್ದಾರಿಯಾಗಿದೆ. ನಾನು ನಿಮ್ಮೊಂದಿಗೆ ಕುಳಿತು ಚರ್ಚಿಸುತ್ತೇನೆ’ ಎಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ವಿಪಕ್ಷಗಳ ಸದಸ್ಯರಿಗೆ ಸ್ಪೀಕರ್ ಓಂ ಬಿರ್ಲಾ ಹೇಳಿದರು.

‘ಸರ್ಕಾರವು ಲೋಕಸಭೆಯ ಕಾರ್ಯಾಲಯದ ಕಾರ್ಯಚಟುವಟಿಕೆಯಲ್ಲಿ ಎಂದಿಗೂ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಾವು ಅದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ’ ಎಂದು ಬಿರ್ಲಾ ಹೇಳಿದರು.

‘ಭವಿಷ್ಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ ಸದಸ್ಯರು ಎಚ್ಚರಿಕೆಯಿಂದ ಇರಬೇಕು. ಸಂಸತ್ ಭವನದ ಒಳಗೆ ತೊಡಕನ್ನು ಉಂಟುಮಾಡುವಂತಹ ವ್ಯಕ್ತಿಗಳಿಗೆ ನಾವು ಪಾಸ್ ನೀಡುವುದಿಲ್ಲ ಎಂಬುದನ್ನು ಎಲ್ಲ ಸದಸ್ಯರು ಖಚಿತಪಡಿಸಬೇಕಿದೆ’ ಎಂದು ಅವರು ಹೇಳಿದರು.

ಹಳೆಯ ಸಂಸತ್ ಭವನದಲ್ಲೂ ಕಾಗದ ಎಸೆಯುವುದು, ಜಿಗಿಯುವುದು ಮುಂತಾದ ಘಟನೆಗಳು ನಡೆದಿವೆ. ಅದಕ್ಕಾಗಿ ಸದನದಲ್ಲಿ ಗದ್ದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಪ್ರಮುಖ ಭದ್ರತಾ ವೈಫಲ್ಯದಲ್ಲಿ ಬುಧವಾರ ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಜಿಗಿದ ಇಬ್ಬರು ಯುವಕರು ಹಳದಿ ಬಣ್ಣದ ಹೊಗೆ ಸಿಂಪಡಿಸಿದ್ದರು. ಸಂಸತ್ತಿನ ಹೊರಗೂ ಪ್ರತಿಭಟನೆ ನಡೆಸಿ ಬಣ್ಣದ ಹೊಗೆ ಸಿಂಪಡಿಸಿದ್ದ ಮತ್ತಿಬ್ಬರೂ ಸೇರಿ ನಾಲ್ವರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು.

ಸಾಗರ್, ಮನೋರಂಜನ್, ಅಮೋಲ್ ಮತ್ತು ನೀಲಂ ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದ್ದು, ಅವರ ಜೊತೆ ಕೈಜೋಡಿಸಿದ್ದ ಮತ್ತೊಬ್ಬ ಆರೋಪಿ ವಿಶಾಲ್‌ನನ್ನು ಬಳಿಕ ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿಗಳು ಸಂಸತ್ತಿಗೆ ಬರುವ ಮೊದಲು ವಿಶಾಲ್ ಅವರ ಗುರುಗ್ರಾಮದ ಮನೆಯಲ್ಲೇ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಸಂಚುಕೋರ ಲಲಿತ್ ಝಾ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT