ಮುಂಬೈ: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಉಲ್ಲಾಸ್‌ನಗರ ಟೌನ್‌ಶಿಪ್‌ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಏಳು ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೈಹಿಕ ಶಿಕ್ಷಣ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲಾ ಆವರಣದಲ್ಲಿ ಶಿಕ್ಷಕ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಷಕರು ನೀಡಿರುವ ದೂರು ಆಧರಿಸಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಸಾಮೂಹಿಕ ಅತ್ಯಾಚಾರಕ್ಕೆ ಯತ್ನ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಪಕ್ರಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಾಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ ಆರೋಪಿಗಳು ಬಾಲಕಿಯನ್ನು ಹತ್ತಿರದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.