ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಅನುಷ್ಠಾನ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Published 12 ಮಾರ್ಚ್ 2024, 13:59 IST
Last Updated 12 ಮಾರ್ಚ್ 2024, 13:59 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ– 2019ರ (ಸಿಎಎ) ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಗಳು ಇತ್ಯರ್ಥ ಆಗುವವರೆಗೂ ಪೌರತ್ವ ತಿದ್ದುಪಡಿ ನಿಯಮಗಳ (2024) ಅನುಷ್ಠಾನವನ್ನು ತಡೆಹಿಡಿಯಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿತು ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಅರ್ಜಿ ಸಲ್ಲಿಸಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಜನರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನಿರ್ದೇಶಿಸಬೇಕು ಎಂದೂ ಅದು ಕೋರಿದೆ. ಮುಸ್ಲಿಂ ಸುಮುದಾಯದವರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡುವಂತೆ ಮತ್ತು ಅವರ ಅರ್ಹತೆಯ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದೂ ಅದು ಮನವಿ ಮಾಡಿದೆ.

ಈಗಾಗಲೇ ಸಿಎಎ ನಿಬಂಧನೆಗಳನ್ನು ಪ್ರಶ್ನಿಸಿ ಸುಮಾರು 250 ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ ಎಂಬ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

‘ಒಂದು ವೇಳೆ ಸುಪ್ರೀಂ ಕೋರ್ಟ್‌ ಸಿಎಎ ಅನ್ನು ಅಸಂವಿಧಾನಿಕ ಎಂದು ನಿರ್ಧರಿಸಿದರೆ, ಈ ದೋಷಪೂರಿತ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಪೌರತ್ವ ಪಡೆದವರು ತಮ್ಮ ಪೌರತ್ವದಿಂದ ವಂಚಿತರಾಗುತ್ತಾರೆ. ಆಗ ಗೊಂದಲದ ಪರಿಸ್ಥಿತಿ ಸೃಷ್ಟಿಯಾಗುತ್ತದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಕುರಿತ ಅರ್ಜಿಗಳು ಇತ್ಯರ್ಥವಾಗುವವರೆಗೆ ಸಿಎಎ ಅನುಷ್ಠಾನವನ್ನು ಮುಂದೂಡುವುದು ಸೂಕ್ತ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ. 

‘ವಲಸಿಗರಿಗೆ ಪೌರತ್ವ ನೀಡುವುದಕ್ಕೆ ವಿರೋಧವಿಲ್ಲ. ಆದರೆ, ಒಂದು ಧರ್ಮವನ್ನು ಹೊರಗಿಟ್ಟು ಕಾಯ್ದೆ ಮಾಡಿರುವುದು ಸರಿಯಲ್ಲ. ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು ಸಂವಿಧಾನದ ಜಾತ್ಯತೀತ ಪರಿಕಲ್ಪನೆಗೆ ಧಕ್ಕೆ ತರುತ್ತದೆ’ ಎಂದು ಅದು ಹೇಳಿದೆ. 

ಪೌರತ್ವ ತಿದ್ದುಪಡಿ ನಿಯಮಗಳಿಗೆ ತಡೆ ಕೋರಿ ಡೆಮಾಕ್ರಟಿಕ್‌ ಯೂತ್‌ ಫೆಡರೇಷನ್‌ ಆಫ್‌ ಇಂಡಿಯಾ ಸಹ ಪ್ರತ್ಯೇಕ ಅರ್ಜಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT