ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಾ ರಾಜಕೀಯ ಬಿಕ್ಕಟ್ಟು ಪರಿಹಾರಕ್ಕೆ ಯತ್ನಿಸದ ಮೋದಿ: ರಾಹುಲ್‌ ಗಾಂಧಿ

Published 17 ಜನವರಿ 2024, 21:11 IST
Last Updated 17 ಜನವರಿ 2024, 21:11 IST
ಅಕ್ಷರ ಗಾತ್ರ

ಕೊಹಿಮಾ: 2015ರ ಒಪ್ಪಂದವಾಗಿ ಒಂಬತ್ತು ವರ್ಷಗಳು ಕಳೆದರೂ ನಾಗಾಲ್ಯಾಂಡ್‌ನ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರ ಆರೋಪಿಸಿದರು.

ಮಣಿಪುರದಿಂದ ಮುಂಬೈವರೆಗೆ ‘ಭಾರತ ಜೋಡೊ ನ್ಯಾಯ ಯಾತ್ರೆ’ ಕೈಗೊಂಡಿರುವ ಅವರು, ರಾಜ್ಯದ ಮೊಕೊಕ್‌ಚುಂಗ್‌ ಪಟ್ಟಣದಲ್ಲಿ ರ‍್ಯಾಲಿ ನಡೆಸಿದರು. ನಾಗಾ ಜನರ ವಿಶ್ವಾಸ ಸಂಪಾದಿಸದೇ ಮತ್ತು ಅವರ ಜೊತೆ ಚರ್ಚಿಸದೇ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದರು.

ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ನಿಮ್ಮ ಬಳಿ ಪರಿಹಾರವಿಲ್ಲದಿದ್ದರೆ, ಪರಿಹಾರ ಇದೆ ಎಂದು ಸುಳ್ಳು ಹೇಳಬೇಡಿ. ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿ’ ಎಂದು  ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂಬತ್ತು ವರ್ಷಗಳ ಹಿಂದೆ ಮೋದಿ ಕೇವಲ ಪೊಳ್ಳು ಭರವಸೆ ನೀಡಿದ್ದರು ಎಂದರು. ದಶಕಗಳಷ್ಟು ಹಳೆಯದಾದ ನಾಗಾ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್‌ ಬದ್ಧವಾಗಿದೆ ಎಂದು ಹೇಳಿದರು.

ಪರಸ್ಪರರ ಉಡುಗೆ ತೊಡುಗೆ, ಸಂಸ್ಕೃತಿ, ಆಹಾರ ಪದ್ಧತಿ, ಧಾರ್ಮಿಕ ಆಚರಣೆಗಳನ್ನು ಎಲ್ಲಾ ಭಾರತೀಯರೂ ಗೌರವಿಸಬೇಕು. ಆದರೆ ಅಂಥ ಸಂಸ್ಕೃತಿಗಳ ಮೇಲೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದಾಳಿ ನಡೆಸುತ್ತಿವೆ ಮತ್ತು ಅಗೌರವ ತೋರುತ್ತವೆ ಎಂದರು.

ಸಂಘರ್ಷಪೀಡಿತ ಮಣಿಪುರಕ್ಕೆ ಪ್ರಧಾನಿ ಭೇಟಿ ನೀಡದ ಕುರಿತು ನನಗೆ ನಾಚಿಕೆ ಆಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಗಾಲ್ಯಾಂಡ್‌ ಅನ್ನು ಭಾರತದಿಂದ ಬೇರ್ಪಡಿಸುವ ನಿಟ್ಟಿನಲ್ಲಿ 1947ರಿಂದಲೇ ಬಂಡಾಯ ಆರಂಭವಾಗಿದೆ. ಬಿಕ್ಕಟ್ಟು ಪರಿಹರಿಸುವ ದಿಸೆಯಲ್ಲಿ ನಾಗಾ ಬಂಡುಕೋರರ ಸಂಘಟನೆಯಾದ ‘ನ್ಯಾಷನಲ್‌ ಸೋಶಿಯಲಿಸ್ಟ್‌ ಕೌನ್ಸಿಲ್‌ ಆಫ್‌ ನಾಗಾಲ್ಯಾಂಡ್‌’ (ಎನ್‌ಎಸ್‌ಸಿಎನ್‌–ಐಎಂ) ಜೊತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2015ರಲ್ಲಿ ಒಪ್ಪಂದಕ್ಕೆ ಸಹಿ ಮಾಡಿತ್ತು. 

ಉತ್ತಮ ಸೌಲಭ್ಯಗಳಿರುವ ರಾಜ್ಯಗಳ ಯುವಜನರ ಜೊತೆ ನಾಗಾಲ್ಯಾಂಡ್‌ ಯುವಕರು ಹೇಗೆ ಸ್ಪರ್ಧಿಸುತ್ತಾರೆ. ಇಂಥ ರಸ್ತೆಗಳು ಇಲ್ಲಿಯ ಜನರ ಉತ್ತಮ ಭವಿಷ್ಯಕ್ಕೆ ದಾರಿಯಾಗುತ್ತವೆ ಎಂದು ಹೇಗೆ ನಿರೀಕ್ಷಿಸುವುದು?
ರಾಹುಲ್‌ ಗಾಂಧಿ ಕಾಂಗ್ರೆಸ್‌ ನಾಯಕ

-

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT