ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ | ಚುನಾವಣಾ ಪ್ರಚಾರಕ್ಕೆ ಮೋದಿ ನಾಂದಿ

Published 1 ಅಕ್ಟೋಬರ್ 2023, 17:08 IST
Last Updated 1 ಅಕ್ಟೋಬರ್ 2023, 17:08 IST
ಅಕ್ಷರ ಗಾತ್ರ

ಮೆಹಬೂಬ್‌ ನಗರ (ತೆಲಂಗಾಣ): ‍ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ ಮತ್ತು ಭರ‍ಪೂರ ಕೊಡುಗೆಗಳನ್ನು ಘೋಷಿಸುತ್ತಿದ್ದಾರೆ. ಮೋದಿ ಅವರು ತೆಲಂಗಾಣಕ್ಕೆ ಭಾನುವಾರ ಭೇಟಿ ನೀಡಿದ್ದು ₹13, 545 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದರು. 

ಮೋದಿ ಅವರು ಮಧ್ಯ ಪ್ರದೇಶ ಮತ್ತು ರಾಜಸ್ಥಾನಕ್ಕೆ ಸೋಮವಾರ ಭೇಟಿ ನೀಡಲಿದ್ದಾರೆ. ರಾಜಸ್ಥಾನದಲ್ಲಿ ₹7,000 ಕೋಟಿ ಮತ್ತು ಮಧ್ಯ ‍ಪ್ರದೇಶದಲ್ಲಿ ₹19,260 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಅಥವಾ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯವು ತಿಳಿಸಿದೆ. 

ಈ ಮೂರೂ ರಾಜ್ಯಗಳ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. 

ಪ್ರಧಾನಿ ಮೋದಿ ಅವರು ತೆಲಂಗಾಣದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಿದರು. ಮೆಹಬೂಬ್‌ ನಗರದಲ್ಲಿ ನಡೆದ ‘ಪಾಲಮೂರು ಪ್ರಜಾ ಘರ್ಜನಾ’ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಆಡಳಿತಾರೂಢ ಬಿಆರ್‌ಎಸ್‌ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿಯ ಉನ್ನತ ನಾಯಕರ ಪೈಕಿ ಮೋದಿ ಅವರೇ ಇಲ್ಲಿಗೆ ಮೊದಲಿಗೆ ಭೇಟಿ ನೀಡಿ ಪ್ರಚಾರ ಆರಂಭಿಸಿದರು.

‘ರಾಜ್ಯದಲ್ಲಿರುವ ಭ್ರಷ್ಟ ಸರ್ಕಾರದ ಬದಲು ಜನರಿಗೆ ಪಾರದರ್ಶಕ ಮತ್ತು ಪ್ರಾಮಾಣಿಕ ಸರ್ಕಾರ ಬೇಕಿದೆ. ಸುಳ್ಳು ಭರವಸೆಗಳಿಗಿಂತ ತಳಮಟ್ಟದಲ್ಲಿ ಕೆಲಸಗಳು ಆಗುವುದು ಬೇಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೇಕಿರುವುದರಿಂದ ತೆಲಂಗಾಣಕ್ಕೆ ಬದಲಾವಣೆ ಅಗತ್ಯವಿದೆ’ ಎಂದು ಮೋದಿ ಹೇಳಿದರು.

‘ರೈತರಿಗೆ ನಿಗದಿಯಾಗಿದ್ದ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ಹಣ ಮಾಡುತ್ತಿದೆ. ತೆಲಂಗಾಣದಲ್ಲಿ ನೀರಾವರಿ ಯೋಜನೆ ನೆಪದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನೀರಾವರಿ ಯೋಜನೆ ಉದ್ಘಾಟನೆಯಾದದ್ದನ್ನು ಎಂದಾದರೂ ಕೇಳಿದ್ದೀರಾ? ರೈತರಿಗೆ ಇಲ್ಲಿ ನೀರಿಲ್ಲ’ ಎಂದು ಆರೋಪಿಸಿದರು.

ತೆಲಂಗಾಣದಲ್ಲಿ ರೈತರ ಸಾಲ ಮನ್ನಾದ ಭರವಸೆ ನೀಡಲಾಗಿತ್ತು. ಆದರೆ, ಸುಳ್ಳು ಭರವಸೆಯಿಂದಾಗಿ ಅನೇಕ ರೈತರು ಜೀವ ತೆತ್ತರು. ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಎಂದೂ ಗಮನ ನೀಡಲಿಲ್ಲ. ಇಲ್ಲಿ ಸರ್ಕಾರವೇ ಇಲ್ಲ. ಆದರೆ, ನಾವು ರೈತರಿಗೆ ಎಲ್ಲಾ ನೆರವು ನೀಡಿದೆವು. ಮುಚ್ಚಿದ್ದ ರಾಮಗುಂಡಂ ರಸಗೊಬ್ಬರ ಘಟಕ ಪುನರಾರಂಭಿಸಿದೆವು’ ಎಂದು ವಿವರಿಸಿದರು.

‘ಇಲ್ಲಿ ಕಾರು (ಬಿಆರ್‌ಎಸ್‌ನ ಚಿಹ್ನೆ) ಸರ್ಕಾರವನ್ನು ನಡೆಸುತ್ತದೆ. ಈ ಕಾರಿನ ಸ್ಟೇರಿಂಗ್‌ ಯಾರ ಬಳಿ ಇದೆ ಎಂಬುದು ಎಲ್ಲರಿಗೂ ಗೊತ್ತು. ಈ ಕುಟುಂಬಗಳು ಖಾಸಗಿ ಕಂಪನಿಗಳನ್ನು ನಡೆಸುವ ರೀತಿ ರಾಜಕೀಯ ಪಕ್ಷಗಳನ್ನು ನಡೆಸುತ್ತಿವೆ. ಅಧ್ಯಕ್ಷ, ಸಿಇಒ, ಪ್ರಧಾನ ವ್ಯವಸ್ಥಾಪಕನಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಎಲ್ಲರೂ ಒಂದೇ ಕುಟುಂಬದಿಂದ ಬಂದವರು. ಸಿಬ್ಬಂದಿ ಮಾತ್ರ ಹೊರಗಿನವರು ತೋರಿಕೆಗಾಗಿ ಇರುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

ಅಕ್ಟೋಬರ್ 2ಕ್ಕೆ ಮಧ್ಯಪ್ರದೇಶ ರಾಜಸ್ಥಾನಕ್ಕೆ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 2 ರಂದು ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದು ಅಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಹಲವಾರು ರೈಲ್ವೆ ಯೋಜನೆಗಳು ಪ್ರವಾಸೋದ್ಯಮ ಸೌಲಭ್ಯಗಳು ಮತ್ತು ಕೋಟಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಶಾಶ್ವತ ಕ್ಯಾಂಪಸ್ ಅನ್ನು ಮೋದಿ ಉದ್ಘಾಟಿಸಲಿದ್ದಾರೆ. ಸವಾಯಿ ಮಾಧೋಪುರದಲ್ಲಿ ರೈಲು ಮೇಲ್ಸೇತುವೆ ಎರಡು ಪಥಗಳಿಂದ ನಾಲ್ಕು ಪಥಗಳಿಗೆ ವಿಸ್ತರಣೆಗೆ ಶಂಕುಸ್ಥಾಪನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ದೆಹಲಿ–ವಡೋದರಾ ಎಕ್ಸ್‌‍ ‍ಪ್ರೆಸ್‌ ವೇ ಲೋಕಾರ್ಪಣೆ ಐದು ವಿವಿಧ ರಸ್ತೆ ಯೋಜನೆಗಳಿಗೂ ಶಂಕುಸ್ಥಾಪನೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ ನಿರ್ಮಿಸಿರುವ ಮನೆಗಳ ಉದ್ಘಾಟನೆ ಜಲ ಜೀವನ್ ಮಿಷನ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವರು.   ಈ ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. 

ಅರಿಶಿನ ಮಂಡಳಿ, ಕೇಂದ್ರೀಯ ಗಿರಿಜನರ ವಿವಿ ಸ್ಥಾಪನೆ

ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಮತ್ತು ಮುಲುಗು ಜಿಲ್ಲೆಯಲ್ಲಿ ಸಮ್ಮಕ್ಕ– ಸಾರಕ್ಕ ಹೆಸರಿನಲ್ಲಿ ಕೇಂದ್ರೀಯ ಗಿರಿಜನರ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದರು. ಈ ವಿಶ್ವವಿದ್ಯಾಲಯವು ₹900 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ಎಂದು ಮೋದಿ ಹೇಳಿದರು. ತಂಬಾಕು ಮಾದರಿಯಲ್ಲೇ ಅರಿಶಿನ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂಬುದು ತೆಲಂಗಾಣ ರೈತರ ದೀರ್ಘಕಾಲದ ಬೇಡಿಕೆ. ರಾಜ್ಯದಲ್ಲಿ ವಿಶೇಷವಾಗಿ ನಿಜಾಮಾಬಾದ್‌ ಜಿಲ್ಲೆಯಲ್ಲಿ ಕನಿಷ್ಠ 50 ಸಾವಿರ ಎಕರೆಯಲ್ಲಿ ಅರಿಶಿನ ಬೆಳೆಯಲಾಗುತ್ತದೆ. ಭಾರತದಿಂದ ರಫ್ತಾಗುವ ಒಟ್ಟು ಅರಿಶಿನದಲ್ಲಿ ಕನಿಷ್ಠ ಶೇ 30ರಷ್ಟು ಇಲ್ಲಿಂದಲೇ ಪೂರೈಕೆಯಾಗುತ್ತದೆ. ದರ ಏರಿಳಿತ ಮತ್ತು ಇತರ ಸಂಕಷ್ಟಗಳ ಮಧ್ಯೆ ಅರಿಶಿನ ಬೆಳೆವ ರೈತರು ಸಮರ್ಪಕ ಮಾರುಕಟ್ಟೆಗಾಗಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸುತ್ತಿದ್ದರು. 2019ರಲ್ಲಿ ನಿಜಾಮಾಬಾದ್‌ನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧರ್ಮಪುರಿ ಅರವಿಂದ್‌ ಅವರು ಅರಿಶಿನ ಮಂಡಳಿ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ ಅವರ ಗೆಲುವಿನ ಬಳಿಕ ಇದು ಸಾಧ್ಯವಾಗದ್ದಕ್ಕೆ ರೈತರು ಇತರ ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT