ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಒಕೆ ಭಾರತಕ್ಕೆ ಸೇರಿದ್ದು,ಯಾವುದೇ ಬೆಲೆ ತೆತ್ತಾದರೂ ಹಿಂಪಡೆಯುತ್ತೇವೆ: ಅಮಿತ್ ಶಾ

Published 16 ಮೇ 2024, 10:31 IST
Last Updated 16 ಮೇ 2024, 10:31 IST
ಅಕ್ಷರ ಗಾತ್ರ

ಸೀತಾಮಡಿ(ಬಿಹಾರ): ಪಾಕಿಸ್ತಾನ ಆಕ್ರಮಿತ ಕಾಶ್ಮೀರವು(ಪಿಒಕೆ) ಭಾರತಕ್ಕೆ ಸೇರಿದ್ದು, ಯಾವುದೇ ಬೆಲೆ ತೆತ್ತಾದರೂ ಭಾರತವು ಅದನ್ನು ಹಿಂಪಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಹಾರದ ಸೀತಾಮಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ಬಳಿ ಇರುವ ಪರಮಾಣು ಅಸ್ತ್ರಗಳ ಬಗ್ಗೆ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಭಯ ಹಬ್ಬಿಸುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ರಕ್ತಪಾತ ನಡೆಯುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಐದು ವರ್ಷ ಕಳೆದಿದೆ. ಒಂದು ಕಲ್ಲು ಹೊಡೆದ ಪ್ರಕರಣವೂ ವರದಿಯಾಗಿಲ್ಲ. ಆದರೆ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಫಾರುಕ್ ಅಬ್ದುಲ್ಲಾ ಪಾಕಿಸ್ತಾನದ ಬಳಿ ಇರುವ ಅಣುಬಾಂಬ್ ಉಲ್ಲೇಖಿಸಿ ಭಯ ಹುಟ್ಟಿಸಲು ಪ್ರಯತ್ನಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಸೀತಾ ಮಾತೆ ಹುಟ್ಟೂರಿನಿಂದ ನಾನು ಒಂದು ವಿಷಯವನ್ನು ಘೋಷಿಸಲು ಇಚ್ಛಿಸುತ್ತೇನೆ. ಅದೇನೆಂದರೆ, ಭಾರತ ದೇಶ ಮತ್ತು ಅದರ 140 ಕೋಟಿ ಜನರಲ್ಲಿ ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಮ್ಮದು. ನಮ್ಮದಾಗಿಯೇ ಇರಲಿದೆ. ಅದನ್ನು ಹಿಂಪಡೆಯುತ್ತೇವೆ’ ಎಂದಿದ್ದಾರೆ.

ಇದೇವೇಳೆ, ಮೂರನೇ ಅವಧಿಯಲ್ಲೂ ಮೋದಿ ಸರ್ಕಾರ ಭಾರತ ಮತ್ತು ನೇಪಾಳ ಗಡಿಯಲ್ಲಿ ಸಂಪೂರ್ಣ ಭದ್ರತೆಯ ಭರವಸೆ ನೀಡಲಿದೆ ಎಂದಿದ್ದಾರೆ.

ಮಂಡಲ ಕಮಿಷನ್ ಶಿಫಾರಸುಗಳನ್ನು ವಿರೋಧಿಸಿದ್ದ ಕಾಂಗ್ರೆಸ್ ಜೊತೆ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಕೈಜೋಡಿಸಿದ್ದಾರೆ. ಆದರೆ, ಮೋದಿ ಲಕ್ಷಾಂತರ ಹಿಂದುಳಿದ ವರ್ಗಗಳ ಜನರನ್ನು ಗೌರವಿಸಿದ್ದಾರೆ.ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡುವ ಏಕೈಕ ಉದ್ದೆಶದಿಂದ ಲಾಲು, ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ. ಆದರೆ, ಬಿಹಾರ ರಾಜ್ಯಕ್ಕೆ ವಿಕಾಸ್ ರಾಜ್ ಬೇಕಿದೆ, ಜಂಗಲ್ ರಾಜ್ ಅಲ್ಲ ಎಂದಿದ್ದಾರೆ.

‘ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್, 60 ಕೋಟಿ ಹಿಂದುಳಿದ ವರ್ಗಗಳ ಜನರ ಕಲ್ಯಾಣದ ಬಗ್ಗೆ ಯೋಚಿಸಿಲ್ಲ. ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವ ಬಗ್ಗೆ ಕಾಂಗ್ರೆಸ್ ಯೋಚಿಸಿರಲಿಲ್ಲ. ಮೋದಿ ಸರ್ಕಾರದಿಂದ ಅದು ಆಗಿದೆ’ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT