ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್‌ ಕೂಡ ಪ್ರಚಾರಕ್ಕಿಳಿಯುತ್ತಾನೆ; ದೆಹಲಿ ಹೈಕೋರ್ಟ್‌

Published 1 ಮೇ 2024, 16:00 IST
Last Updated 1 ಮೇ 2024, 16:00 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಆರೋಪಗಳಡಿ ಬಂಧಿತರಾಗಿರುವ ರಾಜಕೀಯ ನಾಯಕರು ಪ್ರಸಕ್ತ ಲೋಕಸಭಾ ಚುನಾವಣೆ ವೇಳೆ ವರ್ಚುವಲ್‌ ವಿಧಾನದ ಮೂಲಕ ಪ್ರಚಾರ ಕಾರ್ಯ ನಡೆಸಲು ಅನುಮತಿ ನೀಡುವಂತೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

‘ಈ ರೀತಿಯ ಪ್ರಚಾರ ಕಾರ್ಯಕ್ಕೆ ಅನುಮತಿ ನೀಡಿದರೆ, ದಾವೂದ್‌ ಇಬ್ರಾಹಿಂ ಸೇರಿದಂತೆ ಘೋರ ಪಾತಕಿಗಳು ರಾಜಕೀಯ ಪಕ್ಷಗಳೊಂದಿಗೆ ನೋಂದಣಿ ಮಾಡಿಕೊಂಡು, ಪ್ರಚಾರಕ್ಕಿಳಿಯುತ್ತಾರೆ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕಾನೂನು ವಿದ್ಯಾರ್ಥಿ ಅಮರ್ಜೀತ್ ಗುಪ್ತ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿ ಮನಮೋಹನ್‌ ಹಾಗೂ ನ್ಯಾಯಮೂರ್ತಿ ಮನ್ಮೀತ್‌ ಪಿ.ಎಸ್‌.ಅರೋರ ಅವರಿದ್ದ ಪೀಠ ನಡೆಸಿತು.

‘ಈ ಅರ್ಜಿ ಅತ್ಯಂತ ಅಪಾಯಕಾರಿಯಾಗಿದ್ದು, ಕಾನೂನಿನ ಮೂಲಭೂತ ತತ್ವಕ್ಕೆ ವಿರುದ್ಧವೂ ಆಗಿದೆ’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ‘ನ್ಯಾಯಾಲಯಗಳು ನೀತಿ ನಿರೂಪಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಇಂತಹ ವಿಷಯಗಳ ಕುರಿತು ಸಂಸತ್‌ ಮಾತ್ರ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದಿತು.

‘ಕಸ್ಟಡಿಯಲ್ಲಿರುವ ಒಬ್ಬ ವ್ಯಕ್ತಿಗೆ ಚುನಾವಣಾ ಪ್ರಚಾರ ನಡೆಸಲು ಅನುಮತಿ ನೀಡುವುದಿಲ್ಲ. ಇದಕ್ಕೆ ಅವಕಾಶ ನೀಡಿದಲ್ಲಿ, ಅತ್ಯಾಚಾರಿಗಳು, ಕೊಲೆಗಡುಕರು ಸೇರಿದಂತೆ ಎಲ್ಲ ಅಪರಾಧಿಗಳು ಚುನಾವಣೆ ಘೋಷಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನ ರಾಜಕೀಯ ಪಕ್ಷಗಳನ್ನು ಸ್ಥಾಪಿಸುತ್ತಾರೆ’ ಎಂದು ಪೀಠ ಹೇಳಿತು.

ಅರ್ಜಿದಾರ ಮೊಕದ್ದಮೆ ವೆಚ್ಚ ಭರಿಸುವಂತೆ ಸೂಚಿಸುವುದಾಗಿಯೂ ಪೀಠ ಎಚ್ಚರಿಸಿತು. ಆದರೆ, ಅರ್ಜಿದಾರ ವಿದ್ಯಾರ್ಥಿ ಎಂಬ ಆತನ ಪರ ವಕೀಲರ ಮನವಿಯನ್ನು ಪರಿಗಣಿಸಿದ ಪೀಠ, ಅಂತಹ ಆದೇಶ ನೀಡದಿರಲು ಒಪ್ಪಿತು.

‘ನಿಮ್ಮ ಮನವಿಯಂತೆ, ಅರ್ಜಿದಾರನಿಗೆ ಯಾವುದೇ ವೆಚ್ಚವನ್ನು ವಿಧಿಸುವುದಿಲ್ಲ. ಆದರೆ, ಅಧಿಕಾರಗಳ ವಿಂಗಡಣೆ ಕುರಿತು ನಿಮ್ಮ ಅರ್ಜಿದಾರನಿಗೆ ತಿಳಿವಳಿಕೆ ಹೇಳಿ’ ಎಂದು ಗುಪ್ತ ಪರ ವಕೀಲರಿಗೆ ಸೂಚಿಸಿದ ಪೀಠ, ‘ಇಂತಹ ಕ್ರಮದಿಂದಾಗುವ ದೂರಗಾಮಿ ಪರಿಣಾಮದ ಬಗ್ಗೆ ಅರ್ಜಿದಾರಗೆ ಅರಿವಿಲ್ಲ’ ಎಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT