ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಶೆ ಕಾರು ಅಪಘಾತ ಪ್ರಕರಣ|ಅಪರಾಧ ವಿಭಾಗಕ್ಕೆ ತನಿಖೆ ಹೊಣೆ

ಇಬ್ಬರು ಪೊಲೀಸರ ಅಮಾನತು
Published 24 ಮೇ 2024, 22:30 IST
Last Updated 24 ಮೇ 2024, 22:30 IST
ಅಕ್ಷರ ಗಾತ್ರ

ಪುಣೆ: ‘ಪೋಶೆ ಕಾರು ಅಪಘಾತ ಪ್ರಕರಣದಲ್ಲಿ 17 ವರ್ಷದ ಬಾಲಕ ಕಾರು ಚಾಲನೆ ಮಾಡುತ್ತಿರಲಿಲ್ಲ ವೆಂದು ಬಿಂಬಿಸಲು ಪ್ರಯತ್ನಿಸಿರುವುದು ಕಂಡುಬಂದಿದೆ. ಈ ಕುರಿತು ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ’ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.

‘ಪ್ರಕರಣ ದಾಖಲಿಸಿಕೊಳ್ಳುವಾಗ ಕೆಲವು ಪೊಲೀಸರು ಲೋಪ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ತನಿಖೆಯನ್ನು ಯರವಾಡ ಠಾಣೆಯಿಂದ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ’ ಎಂದರು.

‘ಇತ್ತೀಚೆಗೆ ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಪೋಶೆ ಕಾರು ಬೈಕಿಗೆ ಡಿಕ್ಕಿ ಹೊಡೆದು, ಮಧ್ಯಪ್ರದೇಶ ಮೂಲದ ಇಬ್ಬರು ಟೆಕಿಗಳು ಮೃತಪಟ್ಟಾಗ ಕಾರನ್ನು ಚಾಲನೆ ಮಾಡುತ್ತಿದ್ದುದು ಬಾಲಕನ ಕುಟುಂಬದ ವಯಸ್ಕ ಚಾಲಕನೇ ಹೊರತು ಬಾಲಕನಲ್ಲ ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ. ಇಂತಹ ಪ್ರಯತ್ನಗಳನ್ನು ಮಾಡಿದವರ ವಿರುದ್ಧ ಐಪಿಸಿಯ ಸೆಕ್ಷನ್ 201 (ಸಾಕ್ಷ್ಯ ನಾಶ) ಅಡಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

‘ಅಪಘಾತ ನಡೆದಾಗ ಬಾಲಕ ಕಾರು ಚಾಲನೆ ಮಾಡುತ್ತಿದ್ದ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ನಾವು
ಈಗಾಗಲೇ ಎಲ್ಲ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಬಾಲಕ ಮನೆಯಿಂದ ಹೊರಬರುವಾಗ ಆತ ಕಾರಿನೊಂದಿಗೆ ಮನೆಯಿಂದ ಹೊರಬಂದಿರುವುದು ಭದ್ರತಾ ರಿಜಿಸ್ಟರ್‌ನಲ್ಲಿ ದಾಖ
ಲಾಗಿದೆ’ ಎಂದು ಅವರು ಹೇಳಿದರು.

‘ಕಾರನ್ನು ಬಾಲಕ ಚಾಲನೆ ಮಾಡುತ್ತಿದ್ದ ಎನ್ನುವುದು ತಾಂತ್ರಿಕ ಸಾಕ್ಷ್ಯಗಳು ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾಗಳ ದೃಶ್ಯಗಳಿಂದ ದೃಢಪಟ್ಟಿದೆ. ಅಪಘಾತ ನಡೆದಾಗ ಬಾಲಕ ಡ್ರೈವಿಂಗ್‌ ಸೀಟಿನಲ್ಲಿದ್ದದ್ದನ್ನು ಪ್ರತ್ಯಕ್ಷದರ್ಶಿಗಳು ಸಹ ದೃಢಪಡಿಸಿದ್ದಾರೆ’ ಎಂದು ತಿಳಿಸಿದರು.

ಬಾಲಕನ ರಕ್ತದ ಮಾದರಿಗಳ ಬಗ್ಗೆ ಕೇಳಿದಾಗ, ಅಪರಾಧ ಪ್ರಕರಣ ದಾಖಲಿಸಿದ ನಂತರ ಬಾಲಕನನ್ನು ಭಾನುವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಸಸೂನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ರಾತ್ರಿ 11 ಗಂಟೆಗೆ ರಕ್ತದ ಮಾದರಿಗಳನ್ನು ಸಂಗ್ರಹಿಸಿರುವುದು ವಿಳಂಬವಾಗಿದೆ. ಆದರೆ, ರಕ್ತದ ವರದಿಯು ನಮ್ಮ ಪ್ರಕರಣದ ಆಧಾರ ಸ್ತಂಭವಲ್ಲ ಎಂದು ಅವರು ಸ್ಪಷ್ಟಪಡಿಸಿದರು. 

ಐಪಿಸಿ ಸೆಕ್ಷನ್ 304 (ಉದ್ದೇಶ ಪೂರ್ವಕವಲ್ಲದ ನರಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಎಂದು ಅವರು ಹೇಳಿದರು. 

ಬಾಲಕನಿಗೆ ಪುಣೆ ಬಲಾಪಾರಾಧ ನ್ಯಾಯಮಂಡಳಿಯು (ಜೆಜೆಬಿ) ನೀಡಿದ್ದ ತ್ವರಿತ ಜಾಮೀನನ್ನು ಪ್ರಶ್ನಿಸಿ ಪೊಲೀಸರು ಪುನರ್‌ ಪರಿಶೀಲನೆ ಅರ್ಜಿ ಸಲ್ಲಿಸಿದ ನಂತರ ಬಾಲಕನನ್ನು ಜೆಜೆಬಿಯು ಜೂನ್‌ 5ರವರೆಗೆ ಬಾಲ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಿದೆ. ಈ ಪ್ರಕರಣದಲ್ಲಿ ಬಾಲಕನ ತಂದೆ ಉದ್ಯಮಿ ವಿಶಾಲ್‌ ಅಗರ್‌ವಾಲ್‌,
ಮದ್ಯ ಪೂರೈಸಿದ ಹೋಟೆಲ್‌ನ ಮಾಲೀಕಮತ್ತು ವ್ಯವಸ್ಥಾಪಕ, ಇನ್ನೊಂದು ಕ್ಲಬ್‌ನ ವ್ಯವಸ್ಥಾಪಕ ಹಾಗೂ ಇಬ್ಬರು ಸಿಬ್ಬಂದಿ ಯನ್ನು ಬಂಧಿಸಲಾಗಿತ್ತು. ಅವರನ್ನುನ್ಯಾಯಾಂಗ ವಶಕ್ಕೆ ಒಪ್ಪಿಸಿ ಶುಕ್ರವಾರ ಕೋರ್ಟ್‌ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT