ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಬೊಮ್ಮ–ಬೆಳ್ಳಿ ದಂಪತಿ ಭೇಟಿ ಮಾಡಲಿರುವ ರಾಷ್ಟ್ರಪತಿ

ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಆ.5ರಂದು ತೆಪ್ಪಕಾಡು ಆನೆ ಶಿಬಿರದಲ್ಲಿ ಬೊಮ್ಮ–ಬೆಳ್ಳಿ ದಂಪತಿಯನ್ನು ಭೇಟಿಯಾಗಲಿದ್ದಾರೆ
Published 4 ಆಗಸ್ಟ್ 2023, 15:42 IST
Last Updated 4 ಆಗಸ್ಟ್ 2023, 15:42 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಶನಿವಾರ ಆಗಸ್ಟ್ 5ರಂದು ನೆರೆಯ ತಮಿಳುನಾಡಿನ ಮಧುಮಲೆ ಹುಲಿಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದು, ತೆಪ್ಪಕಾಡು ಆನೆ ಶಿಬಿರದಲ್ಲಿ ದಿ ಎಲಿಫೆಂಟ್‌ ವಿಸ್ಪರರ್ಸ್‌ ಖ್ಯಾತಿಯ ಬೊಮ್ಮ ಬೆಳ್ಳಿ ದಂಪತಿಯನ್ನು ಭೇಟಿ ಮಾಡಲಿದ್ದಾರೆ.  

ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದ ನಂತರ ಬೊಮ್ಮ ಮತ್ತು ಬೆಳ್ಳಿ ಅವರು ದೆಹಲಿಗೆ ಹೋಗಿದ್ಟಾಗ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ  ‘ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ನಮ್ಮ ಜಾಗ ಮತ್ತು ಬದುಕಿನ ಶೈಲಿಯನ್ನು ಖುದ್ದಾಗಿ ವೀಕ್ಷಿಸಬೇಕು’ ಎಂದು ದಂಪತಿ ಮನವಿ ಮಾಡಿದ್ದರು. 

ಶನಿವಾರ ಮಧ್ಯಾಹ್ನ 12.30ಕ್ಕೆ ಮೈಸೂರಿಗೆ ವಿಮಾನದಲ್ಲಿ ಬರಲಿರುವ ಮುರ್ಮು, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ತಮಿಳುನಾಡಿನ ಮಸಿನಗುಡಿಗೆ ಬರಲಿದ್ದಾರೆ. ಅಲ್ಲಿಂದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಆನೆ ಗಳನ್ನು ವೀಕ್ಷಣೆ ಮಾಡಿ ಕಾವಾಡಿ ದಂಪತಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲಿಂದ ಮತ್ತೆ ಮೈಸೂರಿಗೆ ಬರಲಿರುವ ಅವರು, ಸಂಜೆ 5.45ಕ್ಕೆ ಚೆನ್ನೈಗೆ ತೆರಳಲಿದ್ದಾರೆ. 

ತೆಪ್ಪಕಾಡು ಪ್ರದೇಶದಲ್ಲಿ ಅಕ್ಕಪಕ್ಕದ ಹೋಟೆಲ್‌ ಹಾಗೂ ಪ್ರವಾಸಿಗರಿಗೆ ಶನಿವಾರ ಸಂಜೆಯ ವರೆಗೆ ನಿರ್ಬಂಧ ವಿಧಿಸಲಾಗಿದೆ. ಆ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನೂ ಕೈಗೊಳ್ಳಲಾಗಿದೆ. 

ಏ.9ರಂದು ಬಂಡೀಪುರ ಹಾಗೂ ಮಧುಮಲೆ  ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿ ನಂತರ ರಸ್ತೆ ಮೂಲಕ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದ್ದರು. ಅವರು ಕೂಡ ಬೆಳ್ಳಿ ಬೊಮ್ಮ ದಂಪತಿ ಜೊತೆ ಮಾತುಕತೆ ನಡೆಸಿದ್ದರು. 

‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿನಿಂದ ನೇರವಾಗಿ ಮಧುಮಲೆಗೆ ತೆರಳುತ್ತಾರೆ. ಬಂಡೀಪುರಕ್ಕೆ ಬರುವುದಿಲ್ಲ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಸಂಚಾರಕ್ಕೆ ತೊಂದರೆಯಾಗಿಲ್ಲ: ‘ರಾಷ್ಟ್ರಪತಿ ಭೇಟಿಗಾಗಿ ಬಿಗಿ ಭದ್ರತೆ ಕೈಗೊಂಡಿದ್ದರೂ ತಮಿಳುನಾಡಿನ ಕಡೆಗೆ ಹೋಗುವ ಮತ್ತು ರಾಜ್ಯದ ಕಡೆಗೆ ಬರುವ ವಾಹನಗಳಿಗೆ ನಿರ್ಬಂಧ ಹೇರಿಲ್ಲ. ಶನಿವಾರ ಹೇಗೆ ಇರುತ್ತದೆ ಎಂಬುದು ಇನ್ನೂ ತಿಳಿದಿಲ್ಲ’ ಎಂದು ಬಂಡೀಪುರದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು. 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT