ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ | ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಗೆಲ್ಲುತ್ತೇವೆ: ರಾಹುಲ್‌ ಗಾಂಧಿ

Published 24 ಸೆಪ್ಟೆಂಬರ್ 2023, 10:47 IST
Last Updated 24 ಸೆಪ್ಟೆಂಬರ್ 2023, 10:47 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ. ತೆಲಂಗಾಣದಲ್ಲಿಯೂ ಗೆಲ್ಲುವ ಸಾಧ್ಯತೆಗಳಿವೆ. ರಾಜಸ್ಥಾನದಲ್ಲಿ ತೀವ್ರ ಸ್ಪರ್ಧೆ ಇದ್ದು, ಅಲ್ಲಿಯೂ ಗೆಲ್ಲುವ ನಂಬಿಕೆ ಇದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ, ತೆಲಂಗಾಣ, ಮಿಜೋರಾಂ ವಿಧಾನಸಭೆಗಳಿಗೆ ಚುನಾವಣೆ ನಡೆಯಬೇಕಿದೆ. ಇಲ್ಲಿ, ಕಾಂಗ್ರೆಸ್‌ ಗೆಲುವಿನ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಪರಿಸ್ಥಿತಿ ಹೀಗೆ ಕಾಣಿಸುತ್ತಿದೆ. ಬಿಜೆಪಿ ಆಂತರಿಕ ವಲಯದಲ್ಲಿಯೂ ಇಂಥ ಅಭಿಪ್ರಾಯವಿದೆ’ ಎಂದರು.

ಅಸ್ಸಾಂನ ಪ್ರತಿದಿನ್‌ ಮೀಡಿಯಾ ನೆಟ್‌ವರ್ಕ್‌ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಈಗ ಪ್ರತಿಪಕ್ಷಗಳು ಒಟ್ಟುಗೂಡಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಶ್ಚರ್ಯ ಕಾದಿದೆ‘ ಎಂದು ಅಭಿಪ್ರಾಯಪಟ್ಟರು.

ಬಿಎಸ್‌ಪಿ ಸಂಸದ ಡ್ಯಾನಿಷ್‌ ಅಲಿ ವಿರುದ್ಧ ಬಿಜೆಪಿ ಸದಸ್ಯ ರಮೇಶ್‌ ಬಿಧೂಢಿ ಅವರು ‘ಆಕ್ಷೇಪಾರ್ಹ ಪದ’ ಬಳಸಿದ್ದನ್ನು ಉಲ್ಲೇಖಿಸಿದ ಅವರು, ಜಾತಿ ಗಣತಿ ಕುರಿತ ಬೇಡಿಕೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಇಂಥ ತಂತ್ರಗಾರಿಕೆಯಲ್ಲಿ ತೊಡಗಿದೆ. ‘ಒಂದು ರಾಷ್ಟ್ರ, ಒಂದೇ ಚುನಾವಣೆ’ ಚಿಂತನೆಯೂ ವಾಸ್ತವ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಕಾರ್ಯತಂತ್ರವೇ ಆಗಿದೆ’ ಎಂದು ಹೇಳಿದರು.

’ಭಾರತದ ನಿಜವಾದ ಸಮಸ್ಯೆಗಳೆಂದರೆ ಆಸ್ತಿಯ ಕ್ರೋಢಿಕರಣ, ಆಸ್ತಿಯಲ್ಲಿನ ಅಸಮಾನತೆ, ನಿರುದ್ಯೋಗ ಸಮಸ್ಯೆ, ಕೆಲವು ಜಾತಿಗಳು, ಇತರೆ ಹಿಂದುಳಿದ ವರ್ಗ ಮತ್ತು ಬುಡಕಟ್ಟು ಜನರೆಡೆಗಿನ ದೊಡ್ಡ ಮಟ್ಟದ ತಾರತಮ್ಯ ಮತ್ತು ಬೆಲೆ ಏರಿಕೆ ವಿಷಯಗಳಾಗಿವೆ‘ ಎಂದು ಹೇಳಿದರು.

‘ಆದರೆ, ಈ ವಿಷಯಗಳ ಆಧಾರದಲ್ಲಿ ಬಿಜೆಪಿಯು ಚುನಾವಣೆಯನ್ನು ಎದುರಿಸಲಾಗದು. ಹಾಗಾಗಿ ಬಿಧೂಡಿ ಹೇಳಿಕೆ, ಇಂಡಿಯಾ ಹೆಸರು ಬದಲಿಸೋಣ ಎಂಬ ಚಿಂತನೆಗಳು ಬರಲಿವೆ. ಇವು, ಕಾರ್ಯತಂತ್ರ. ನಮಗೆ ಗೊತ್ತಿದೆ, ಅರ್ಥವಾಗಿದೆ. ಇದಕ್ಕೆ ಅವಕಾಶ ನೀಡೆವು’ ಎಂದರು.

‘ಜಾತಿ ಗಣತಿಯು ಈಗ ಆಗಬೇಕಾಗಿರುವ ಮೂಲಭೂತ ಅಗತ್ಯ. ಆದರೆ, ಇದರ ಚರ್ಚೆ ಬಿಜೆಪಿಯವರಿಗೆ ಅಗತ್ಯವಿಲ್ಲ. ಹೀಗಾಗಿಯೇ ಬಿಧೂಡಿ, ನಂತರ ನಿಶಿಕಾಂತ್‌ ದುಬೆ ದಿಢೀರನೆ ಹೇಳಿಕೆ ನೀಡುತ್ತಾರೆ. ಜಾತಿ ಗಣತಿ ಚರ್ಚೆ ಮರೆಸಲು ಯತ್ನಿಸುತ್ತಾರೆ‘ ಎಂದು ವ್ಯಾಖ್ಯಾನಿಸಿದರು.

'ಪ್ರತಿ ಬಾರಿ ನಾವು ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದಾಗ, ಗಮನವನ್ನು ಬೇರೆಡೆ ಸೆಳೆಯಲು ಅವರು ಇಂತಹ ತಂತ್ರವನ್ನು ಬಳಸುತ್ತಾರೆ. ಇದನ್ನು ನಿಭಾಯಿಸುವ ಕುರಿತ ಪಾಠವನ್ನು ನಾವು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಲಿತೆವು. ಅಲ್ಲಿ, ಜನರ ಮುಂದೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ನಿಮಗಾಗಿ ಜಾರಿಗೊಳಿಸಲಿದ್ದೇವೆ ಎಂದು ಸ್ಪಷ್ಟ ಚಿಂತನೆ ಇಟ್ಟೆವು. ಜನರ ಮನಸ್ಸಿನಲ್ಲಿ ಉಳಿಯುವಂತೆ ನಿರ್ವಹಿಸಿದೆವು‘ ಎಂದರು.

’ತೆಲಂಗಾಣದಲ್ಲಿಯೂ ಇದೇ ಹಾದಿಯಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಅಲ್ಲಿ, ಬಿಜೆಪಿಯವರಿಗೆ ಸ್ಪಷ್ಟ ದೃಷ್ಟಿಕೋನವೇ ಇಲ್ಲ. ಅಲ್ಲಿ ಬಿಜೆಪಿ ಇಲ್ಲ. ಬಿಜೆಪಿ ಪಾಲಿಗೆ ತೆಲಂಗಾಣ ಕೈತಪ್ಪಿದೆ. ಮಧ್ಯಪ್ರದೇಶ, ಛತ್ತೀಸಗಢದಲ್ಲೂ ನಮ್ಮ ಚಿಂತನೆ ಜನರಿಂದ ಮರೆಯಾಗದಂತೆ ಎಚ್ಚರವಹಿಸಿದ್ದೇವೆ‘ ಎಂದರು.

’ಮಹಿಳಾ ಮೀಸಲು ಮಸೂದೆಯನ್ನು ನಾಳೆಯೇ ಜಾರಿಗೊಳಿಸಬಹುದು‘ ಎಂದು ಪ್ರತಿಪಾದಿಸಿದ ರಾಹುಲ್‌ ಗಾಂಧಿ, ’ಮಸೂದೆಗೂ ಜಾತಿ ಗಣತಿಗೂ ಹಾಗೂ ಮಸೂದೆ ಅಥವಾ ಕ್ಷೇತ್ರ ಪುನರ್ವಿಂಗಡಣೆಗೂ ಯಾವುದೇ ಸಂಬಂಧವಿಲ್ಲ. ಮಹಿಳಾ ಮೀಸಲು ಮಸೂದೆಯು 10 ವರ್ಷದ ನಂತರ ಜಾರಿಯಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಈಗಲೇ ಮಾಡಿ ಎಂಬುದು ಕಾಂಗ್ರೆಸ್ ಬೇಡಿಕೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT